ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಕಾರಿನಲ್ಲಿ ಗುಂಡಿಕ್ಕಿ ಕೊಂದಿರುವ ಘಟನೆ ಕೆನಡಾ ದ ಸೌತ್ ವನ್‌ಕೌವೆರ್ ಪ್ರದೇಶದಲ್ಲಿ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಹರಿಯಾಣ ನಿವಾಸಿಯಾದ 24 ವರ್ಷದ ಚಿರಾಗ್ ಅನ್‌ತಿಲ್ ಎಂಬಾತನನ್ನು ಸೌತ್ ವನ್‌ಕೌವೆರ್ ಪ್ರದೇಶದ ಕಾರಿನಲ್ಲಿ ಗುಂಡು ಹಾರಿಸಿ ಕೊಲ್ಲಲಾಗಿದ್ದು, ಗುಂಡಿನ ಶಬ್ದ ಕೇಳಿದ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಏಪ್ರಿಲ್ 12ರಂದು ರಾತ್ರಿ 11 ಗಂಟೆ ಸುಮಾರಿಗೆ ಈಸ್ಟ್ 55 ಅವೆನ್ಯೂ ಪ್ರದೇಶದ ಮುಖ್ಯ ರಸ್ತೆಯಲ್ಲಿ ಗುಂಡಿನ ಶಬ್ದ ಕೇಳಿದ ನಂತರ ಸ್ಥಳೀಯರು ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ.24 ವರ್ಷದ ಚಿರಾಗ್ ಅನ್‌ತಿಲ್ ವಾಹನದಲ್ಲೇ ಮೃತರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಲಾಗಿಲ್ಲ,ತನಿಖೆ ಮುಂದುವರೆಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ವಿದೇಶಾಂಗ ಇಲಾಖೆಯು ವಿದ್ಯಾರ್ಥಿ ಕುಟುಂಬದವರಿಗೆ ನೆರವು ನೀಡುವಂತೆ ವಿದ್ಯಾರ್ಥಿ ಕಾಂಗ್ರೆಸ್ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ವರುಣ್ ಚೌಧರಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಕೆನಡಾದ ಸೌತ್ ವನ್‌ಕೌವೆರ್ ಪ್ರದೇಶದಲ್ಲಿ ಹತ್ಯೆಯಾಗಿರುವ ಭಾರತೀಯ ವಿದ್ಯಾರ್ಥಿ ಚಿರಾಗ್ ಅನ್‌ತಿಲ್ ಬಗ್ಗೆ ತುರ್ತಾಗಿ ಗಮನಹರಿಸಬೇಕಾಗಿದೆ.ತನಿಖೆಯ ಪ್ರಗತಿ ಹಾಗೂ ಶೀಘ್ರ ನ್ಯಾಯ ದೊರಕಿಸಲು ವಿದೇಶಾಂಗ ಇಲಾಖೆ ನಿಕಟವಾಗಿ ಕ್ರಮವಹಿಸಬೇಕು ಎಂದು ನಾವು ಆಗ್ರಹಿಸುತ್ತೇವೆ” ಎಂದು ಚೌಧರಿ ತಿಳಿಸಿದ್ದಾರೆ.
“ಅಲ್ಲದೆ, ಇಂತಹ ಕಷ್ಟದ ಸಮಯದಲ್ಲಿ ಮೃತನ ಕುಟುಂಬಕ್ಕೆ ತುರ್ತು ನೆರವು ಒದಗಿಸುವಂತೆ ಇಲಾಖೆಗೆ ಮನವಿ ಮಾಡುತ್ತೇವೆ” ಎಂದು ಚೌಧರಿ ಹೇಳಿದ್ದಾರೆ.
ಚಿರಾಗ್ ಅನ್‌ತಿಲ್ ಮೃತದೇಹವನ್ನು ಭಾರತಕ್ಕೆ ತರಲು ಆತನ ಕುಟುಂಬ ಕ್ರೌಡ್‌ಫಂಡಿಂಗ್ ವೇದಿಕೆಯ ಮೂಲಕ ಹಣ ಸಂಗ್ರಹಿಸುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಚಿರಾಗ್ ಅನ್‌ತಿಲ್ ಅವರು ಕೆನಡಾ ವೆಸ್ಟ್ ವಿವಿಯಲ್ಲಿ ಎಂಬಿಎ ವ್ಯಾಸಂಗಕ್ಕಾಗಿ 2022ರ ಸೆಪ್ಟೆಂಬರ್‌ನಲ್ಲಿ ಕೆನಡಾಕ್ಕೆ ತೆರಳಿದ್ದರು.
