ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಜಮ್ಮುವಿನಲ್ಲಿ ಕಾಶ್ಮೀರಿ ಪಂಡಿತ ಸಂಘಟನೆ ಆಲ್ ಇಂಡಿಯಾ ಕಾಶ್ಮೀರಿ ಹಿಂದೂ ಫೋರಮ್ (ಎಐಕೆಎಚ್‌ಎಫ್) ಶನಿವಾರ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿದೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಅವರು ಎಐಕೆಎಚ್‌ಎಫ್ ಅಧ್ಯಕ್ಷ ರತ್ತನ್ ಲಾಲ್ ಭಾನ್ ಮತ್ತು ಇತರ ಪದಾಧಿಕಾರಿಗಳನ್ನು ಪಕ್ಷಕ್ಕೆ ಸ್ವಾಗತಿಸಿದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವಿಕಾರ್ ರಸೂಲ್ ವಾನಿ, “ಎಐಕೆಎಚ್‌ಎಫ್ ಅನ್ನು 1998ರಲ್ಲಿ ಸ್ಥಾಪಿಸಲಾಗಿದ್ದು ಅದರ ನೂರಾರು ಸದಸ್ಯರು ಕಾಂಗ್ರೆಸ್‌ಗೆ ಸೇರುವುದು ಪಕ್ಷಕ್ಕೆ ದೊಡ್ಡ ಉತ್ತೇಜನವಾಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ | ಜಮ್ಮುವಿನಲ್ಲಿ ಕಾಂಗ್ರೆಸ್‌ಗೆ ಶಿವಸೇನೆ ಸಾಥ್
ಎಲ್ಲಾ ಕಾಶ್ಮೀರಿ ಪಂಡಿತರ ಸಂಘಟನೆಗಳನ್ನು ಪಕ್ಷಕ್ಕೆ ಸೇರುವಂತೆ ಕರೆ ನೀಡಿದ ಅವರು, “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಿಂದ ಸಮುದಾಯವನ್ನು ಮುರ್ಖರನ್ನಾಗಿಸಿದೆ” ಎಂದು ಆರೋಪಿಸಿದರು.
“ಬಿಜೆಪಿ ಅಧಿಕಾರಕ್ಕೆ ಬರಲು ದೇಶಾದ್ಯಂತ ಹಲವಾರು ಸಂಸ್ಥೆಗಳನ್ನು ಮಾರಾಟ ಮಾಡಿದೆ. ಕಾಶ್ಮೀರಿ ಪಂಡಿತರಿಗೆ ಹಲವಾರು ಭರವಸೆಗಳನ್ನು ನೀಡಿದೆ. ಕಳೆದ 10 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದರೂ ಅವರು 10 ಪೈಸೆಯಷ್ಟು ಕೆಲಸ ಮಾಡುವಲ್ಲಿ ವಿಫಲವಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? 5 ವರ್ಷ ಜೈಲಿನಲ್ಲಿದ್ದು ಬಿಡುಗಡೆಯಾದ ಕಾಶ್ಮೀರಿ ಪತ್ರಕರ್ತ, ಮತ್ತೆ ಬಂಧನ
“ಕಳೆದ 10 ವರ್ಷಗಳಿಂದ ಬಿಜೆಪಿ ಕಾಶ್ಮೀರಿ ಪಂಡಿತರನ್ನು ಮೂರ್ಖರನ್ನಾಗಿಸುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ಗೆ ಹಿಂತಿರುಗುವಂತೆ ನಾನು ಇತರ ಕಾಶ್ಮೀರಿ ಪಂಡಿತರ ಗುಂಪುಗಳಿಗೆ ಮನವಿ ಮಾಡುತ್ತೇನೆ. ನೆಹರೂ ಕುಟುಂಬವು ಮೂಲತಃ ಕಾಶ್ಮೀರಕ್ಕೆ ಸೇರಿದ್ದು ಮತ್ತು ಸ್ಥಳಾಂತರಗೊಂಡ ಪಂಡಿತರ ಬಗ್ಗೆ ಹೆಚ್ಚಿನ ಸಹಾನುಭೂತಿಯನ್ನು ಹೊಂದಿದೆ ಮತ್ತು ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷವೂ ಸಹ ಸಹಾನುಭೂತಿ ಹೊಂದಿದೆ” ಎಂದು ಹೇಳಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಕಾಶ್ಮೀರಿ ಪಂಡಿತರಿಗಾಗಿ ಹಲವಾರು ಕಾರ್ಯಗಳನ್ನು ಮಾಡಿರುವ ಕಾರಣದಿಂದಾಗಿ ನಾವು ಕಾಂಗ್ರೆಸ್‌ನೊಂದಿಗೆ ನಮ್ಮ ಸಂಘಟನೆಯನ್ನು ವಿಲೀನಗೊಳಿಸಲು ನಿರ್ಧರಿಸಿದ್ದೇವೆ ಎಂದು ಎಐಕೆಎಚ್‌ಎಫ್ ಅಧ್ಯಕ್ಷ ರತ್ತನ್ ಲಾಲ್ ಭಾನ್ ತಿಳಿಸಿದ್ದಾರೆ.
“ನಾವು ನಮ್ಮ ಕುಟುಂಬಕ್ಕೆ ಹಿಂತಿರುಗಿದಂತೆ ಭಾವಿಸುತ್ತೇವೆ. ಬಿಜೆಪಿಯವರು ಪಂಡಿತರನ್ನು ಶೋಷಣೆ ಮಾಡಿದ್ದು, ನಮಗಾಗಿ ಏನನ್ನೂ ಮಾಡಿಲ್ಲ” ಎಂದು ದೂರಿದರು.
ಸ್ವಾಗತಾರ್ಹ ಬೆಳವಣಿಗೆ !
ಎಲ್ಲರೂ ಒಂದಾಗೋಣ.
ವಚನ ಭ್ರಷ್ಟ ಮೋದಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸೋಣ.
ಎಲ್ಲರೂ ಒಂದಾಗಿ ನೆಮ್ಮದಿಯಿಂದ ಬದುಕಿ ಬಾಳೋಣ. ✋🇮🇳🙏