- ಹಲವು ದಿನಗಳಿಂದ ಕರ್ನಾಟಕ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು
- ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಪೀಠದಿಂದ ಅರ್ಜಿ ವಿಚಾರಣೆ
ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸಲು ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕೃರಿಸಿದೆ.
ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿಗಳಿಕೆ ಆರೋಪದ ಮೇಲೆ ಸಿಬಿಐ ತನಿಖೆಗೆ ಮುಂದಾಗಿತ್ತು. ತನಿಖೆಗೆ ತಡೆ ನೀಡುವಂತೆ ಕೋರಿ ಡಿ.ಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ತನ್ನ ತೀರ್ಪುನ್ನು ಕಾಯ್ದಿರಿಸಿತ್ತು. ಕಾಯ್ದಿರಿಸಿದ ತೀರ್ಪುನ್ನು ಇಂದು (ಗುರುವಾರ) ಹೊರಡಿಸಿದ್ದು, ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ಡಿ.ಕೆ.ಶಿವಕುಮಾರ್ ಮತ್ತು ಸಿಬಿಐ ವಕೀಲರ ವಾದವನ್ನು ಆಲಿಸಿ, ತನ್ನ ಆದೇಶ ಕಾಯ್ದಿರಿಸಿತ್ತು. ಜೊತೆಗೆ ಸಿಬಿಐ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ವಿಸ್ತರಿಸಿತ್ತು.
ಈ ಸುದ್ದಿ ಓದಿದ್ದೀರಾ? : ಚುನಾವಣೆ 2023 | ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ
ನ್ಯಾಯಾಧಿಶರು ಈ ಮೊದಲು ಫೆ. 24ರವರೆಗೂ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಬಳಿಕ ಮಾ.31, ಏ.6, ಏ.13 ಹಾಗೂ ಏ.17ರ ವರೆಗೆ ಮಧ್ಯಂತರ ತಡೆ ನೀಡಿತ್ತು. ಪ್ರಸ್ತುತ ವಿಚಾರಣೆ ಅಂತ್ಯಗೊಂಡಿದ್ದರಿಂದ ತನ್ನ ತೀರ್ಪುನ್ನು ಕಾಯ್ದಿರಿಸಿತ್ತು. ಇದೀಗ, ಅರ್ಜಿಯನ್ನು ರದ್ದುಗೊಳಿಸಿದ್ದಾರೆ.
ಅರ್ಜಿ ವಜಾಗೊಂಡಿರುವುದರಿಂದ ಮತ್ತು ಡಿ.ಕೆ ಶಿವಕುಮಾರ್ ವಿರುದ್ಧ ಹಲವು ಪ್ರಕರಣಗಳು ಬಾಕಿ ಇರುವುದರಿಂದ ಅವರ ನಾಮಪತ್ರ ತಿರಸ್ಕೃತವಾಗುವ ಆತಂಕ ಎದುರಾಗಿದೆ. ಹೀಗಾಗಿ, ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಕೂಡ ಇಂದು ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.