ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ಚುನಾವಣಾ ಕಡತ ಸಂಪೂರ್ಣ ಸುಳ್ಳಿನಿಂದ ಕೂಡಿದ್ದು, ನಂಬಲರ್ಹವಲ್ಲ ಎಂದು ಟೀಕಿಸಿದೆ. ಕೇಸರಿ ಪಕ್ಷದ ಪ್ರಣಾಳಿಕೆಯಲ್ಲಿ ನಿರುದ್ಯೋಗ ಹಾಗೂ ಹಣದುಬ್ಬರವನ್ನು ನಿರ್ಲಕ್ಷಿಸಿದೆ ಎಂದು ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಜನರ ಬದುಕಿಗೆ ಅಗತ್ಯವಾದ ಬಹು ಮುಖ್ಯವಾದ ಸಮಸ್ಯೆಗಳನ್ನು ಚರ್ಚಿಸಲು ಕೂಡ ಬಯಸುವುದಿಲ್ಲ. ಹಣದುಬ್ಬರ ಹಾಗೂ ನಿರುದ್ಯೋಗದ ಬಗ್ಗೆ ಪ್ರಸ್ತಾಪವಿಲ್ಲ. ಇಂಡಿಯಾ ಒಕ್ಕೂಟದ ಯೋಜನೆ ತುಂಬ ಸ್ಪಷ್ಟವಾಗಿದೆ. ಪ್ರತಿ ವರ್ಷ 30 ಲಕ್ಷ ಉದ್ಯೋಗ ನೇಮಕಾತಿ ಹಾಗೂ ಪ್ರತಿ ವಿದ್ಯಾವಂತ ಯುವಕರಿಗೆ 1 ಲಕ್ಷ ರೂ. ಉದ್ಯೋಗ ಖಾತರಿ ದೊರಕಿಸುವುದು” ಎಂದು ತಿಳಿಸಿದ್ದಾರೆ.
“ಪ್ರಸ್ತುತ ಸಮಯದಲ್ಲಿ ಯುವಕರು ಪ್ರಧಾನಿ ಮೋದಿ ತೋಡಿದ ಹಳ್ಳಕ್ಕೆ ಬೀಳುವುದಿಲ್ಲ. ಯುವಕರು ಕಾಂಗ್ರೆಸ್ ಕೈ ಬಲಪಡಿಸಿದರೆ ದೇಶದಲ್ಲಿ ಉದ್ಯೋಗ ಕ್ರಾಂತಿ ಉಂಟಾಗಲಿದೆ” ಎಂದು ಹೇಳಿದ್ದಾರೆ.
ಬಿಜೆಪಿಯ ಪ್ರಣಾಳಿಕೆ ಸಂವಿಧಾನವನ್ನು ಬದಲಿಸುವ ಪತ್ರ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
“ನೆನಪಿಡಿ, ಬಿಜೆಪಿಯು ತಳಮಟ್ಟದಿಂದ ದೇಶ, ಸಮಾಜ ಹಾಗೂ ಪ್ರಜಾಪ್ರಭುತ್ವದ ವಿರುದ್ಧ ಎಲ್ಲ ರೀತಿಯ ಪಿತೂರಿಗಳನ್ನು ಆರಂಭಿಸಿದೆ. ಆರಂಭದಲ್ಲಿ ಪ್ರಮುಖ ನಾಯಕರು ಜನರ ಮುಂದೆ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿ, ಸಂಜೆಯಾಗುತ್ತಿದ್ದಂತೆ ಸಂವಿಧಾನವನ್ನು ನಾಶಪಡಿಸುವ ವರದಿಯನ್ನು ತಯಾರಿಸುತ್ತಾರೆ. ಮುಂದೆ ಸಂಪೂರ್ಣವಾಗಿ ಅಧಿಕಾರಕ್ಕೆ ಬಂದರೆ ಅವರು ಸಂವಿಧಾನದ ಮೇಲೆ ದಾಳಿ ನಡೆಸುತ್ತಾರೆ” ಎಂದು ಪ್ರಿಯಾಂಕಾ ಅವರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ಬಾಬಾ ಸಾಹೇಬ್ ಅವರ ಸಂವಿಧಾನ ಭಾರತದ ಆತ್ಮವಾಗಿದ್ದು,ಎಲ್ಲ ವಿಪಕ್ಷಗಳು ಬಿಜೆಪಿ ಸೋಲಿಸಲು ಒಂದಾಗಿವೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.
“ಇಂದು ನಾವೆಲ್ಲರೂ ಸಂವಿಧಾನ ಬದಲಿಸುವ ಬಿಜೆಪಿ ಯೋಜನೆಯ ವಿರುದ್ಧ ಒಂದಾಗಿದ್ದು, ದೇಶವು ಸಂವಿಧಾನದಿಂದ ಮುನ್ನಡೆಯಲಿದೆ ಎಂದು ಘಂಟಾಘೋಷವಾಗಿ ಹೇಳುತ್ತೇವೆ. ಸಂವಿಧಾನ ಬದಲಿಸುವ ಅವರ ಉದ್ದೇಶವನ್ನು ನಾವೆಲ್ಲರೂ ಒಟ್ಟಾಗಿ ಸೋಲಿಸುತ್ತೇವೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ರೈತರ ಆದಾಯವನ್ನು ದ್ವಿಗುಣ ಮಾಡುತ್ತೇನೆ ಎಂದು ಹೇಳಿದ್ದರು. ಎಂಎಸ್‌ಪಿಯನ್ನು ಹೆಚ್ಚಿಸಿ ಗ್ಯಾರಂಟಿ ಖಾತರಿ ನೀಡುತ್ತೇನೆ ಎಂದಿದ್ದರು. ತಮ್ಮ ಅವಧಿಯಲ್ಲಿ ದೇಶದ ಜನರಿಗಾಗಿ ಸುಳ್ಳು ಹೇಳುವುದನ್ನು ಬಿಟ್ಟು ಅಂತಹ ದೊಡ್ಡ ಅನುಕೂಲಗಳನ್ನು ಅವರು ಮಾಡಿಲ್ಲ ಎಂದು ಹರಿಹಾಯ್ದರು.
ಬಿಜೆಪಿ ಇಂದು ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು,ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದೆ.

ಕಾಂಗ್ರೆಸ್ ಆಗಲಿ, ಬಿಜೆಪಿಯೇ ಆಗಲಿ ಜನ್ರ ಕೆಲಸ ಮಾಡಿದಿದ್ರೆ ಜನ್ರೆ ಅವರಿಗೆ ಚುನಾವಣೆಯಲ್ಲಿ ಬುದ್ದಿ ಕಲಿಸ್ತಾರೆ. ಖರ್ಗೆ ಜೀ… ರಾಹುಲ್ ಜೀ..ಬಿಜೆಪಿಗರ ಪ್ರಣಾಳಿಕೆ ಟೀಕಿಸೋದನ್ನು ಬಿಟ್ಟು ಜನ ಪರ ಕೆಲಸ ಮಾಡೋ ಬಗ್ಗೆ ಯೋಚಿಸಿ.. ದೇಶದ ಜನ್ರು ದೇಶದ ಭದ್ರತೆ ಕುರಿತಂತೆ ಯೋಚಿಸುತ್ತಾರೆ ಅನ್ನೋದನ್ನು ನೀವು ಗಮನಿಸಿ…ಈಗಾಗಲೇ ಜನ್ರ ತೆರಿಗೆ ಹಣವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ಪಕ್ಷ ಬೇಕಾಬಿಟ್ಟಿಯಾಗಿ ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಾ ವೇಸ್ಟ್ ಮಾಡ್ತಿದೆ. ಅದ್ರೆ, ಜನ್ರಿಗೆ ಬೇಕಾದ ರಸ್ತೆ, ನೀರು, ಬೀದಿ ದೀಪ ಸೇರಿದಂತೆ ಯಾವ ಕೆಲ್ಸ ಕೂಡ ಈವರೆಗೂ ಆಗಿಲ್ಲ. ದೇಶ ಹಾಗೂ ಜನರ ಕುರಿತಂತೆ ನಿಮ್ಮ ಕಾರ್ಯ ಸೂಚಿ ಏನು..ಯಾವುದೇ ಪೂರ್ವ ತಯಾರಿಯಿಲ್ಲದೇ, ಯಾವುದೇ ಕಾರ್ಯಕ್ರಮಗಳಿಲ್ಲದಿರುವ ಕಾಂಗ್ರೆಸ್ ಪಕ್ಷವನ್ನು ದೇಶದ ಜನ್ರು ಹೇಗೆ ಒಪ್ಪಿಕೊಳ್ತಾರೆ…ದೇಶದ ಬಹುಸಂಖ್ಯಾತರ ಹಣವನ್ನು ಕೇವಲ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಖರ್ಚು ಮಾಡೋ ನಿಮ್ಮನ್ನು ಬಹುಸಂಖ್ಯಾತರು ಹೇಗೆ ನಂಬ್ತಾರೆ..ಏನೇ ಆಗಲಿ..ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲೋದಂತು ಕನಸಿನ ಮಾತೇ ಸರಿ…ಮುಂದೆ ವಿರೋಧ ಪಕ್ಷದ ಸ್ಥಾನ ಕೂಡ ಕೈಯಿಂದ ಜಾರುವ ದಿನ ಕಾಂಗ್ರೆಸ್ಸಿಗೆ ದೂರವಿಲ್ಲ.