ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಏಕೆ ಮತಹಾಕಬೇಕೆಂದು ಪ್ರಶ್ನೆಯಿಟ್ಟುಕೊಂಡು ಜನರ ಬಳಿ ಕಾಂಗ್ರೆಸ್ ಅಭಿಯಾನ ನಡೆಸಲಿದೆ, ಎಂದು ರಾಯಚೂರು ಲೋಕಸಭಾ ಚುನಾವಣಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹತ್ತುವರ್ಷ ಆಡಳಿತದಲ್ಲಿ ಜನರಿಗೆ ಕೊಟ್ಟ ಯಾವೊಂದು ಭರವಸೆಯನ್ನೂ ಇಡೇರಿಸಿಲ್ಲ. ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ, ಕಪ್ಪುಹಣ ತರುವದಾಗಿ ಜನರಿಗೆ ಹೇಳಿ ವಂಚಿಸಿದೆ. ಆದರೆ, ಹತ್ತು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆದಿರುವದನ್ನು ಸಾಬೀತುಪಡಿಸಿದೆ. ಐದು ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂ. ಹಣ ಖರ್ಚುಮಾಡಲು ಸರ್ಕಾರ ಮುಂದಾಗಿದೆ ಎಂದರು.
ಮನೆಮನೆಗೆ ಗ್ಯಾರಂಟಿ ಯೋಜನೆ ತಲುಪಿಸಿರುವ ಹಿರಿಮೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಯಾಗಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಪಾಲಿನ 1 ಲಕ್ಷ 72 ಸಾವಿರ ಕೋಟಿ ರೂ. ಕರ ಪಾವತಿ ಬಾಕಿಉಳಿಸಿಕೊಂಡಿದೆ. ಪ್ರಕೃತಿ ವಿಕೋಪ ನಿಧಿಯಡಿ ರಾಜ್ಯದ ಹಲವಾರು ಬಾರಿ ಮನವಿಗೆ ಸ್ಪಂದಿಸದೇ ಮಲತಾಯಿ ಧೋರಣೆ ತಳಿದಿದೆ. ಎರಡು ಬಾರಿ ರಾಜ್ಯದ ಸಚಿವರ ನಿಯೋಗ ಕೇಂದ್ರ ಬಳಿ ಮನವಿ ಮಾಡಿಕೊಂಡರು, ಬರಪರಿಹಾರ ಹಣ ಬಿಡುಗಡೆಗೊಳಿಸಿಲ್ಲ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದರೂ ರಾಯಚೂರಿಗೆ ಏಮ್ಸ್ ನೀಡಲು ಸ್ಪಂದಿಸಿಲ್ಲ ಎಂದು ಆರೋಪಿಸಿದರು.
72 ಜನ ಸಂಸದರನ್ನು ಆಯ್ಕೆ ಮಾಡಿದ್ದ ಜನರಿಗೆ ಬಿಜೆಪಿ ಸರ್ಕಾರ ನೀಡಿದ್ದೇನು? ಎಂದು ಜನರೇ ಕೇಳಬೇಕಿದೆ. ರಾಜ್ಯಕ್ಕೆ ಆಗಿರುವ ಅನ್ಯಾಯ ಪ್ರಶ್ನಿಸಿ ಸುಪ್ರಿಂಕೋರ್ಟ ಮೊರೆ ಹೋಗಿದ್ದು ಎರಡು ವಾರದಲ್ಲಿ ಹಣ ಬಿಡುಗಡೆ ಕೋರ್ಟ ಸೂಚಿಸಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರಗಳ ರಾಜ್ಯ ಪಾಲಿನ ಹಣ ನೀಡಲು ಕೋರ್ಟ್ ಮೊರೆ ಹೋಗಿರುವುದು ಬಿಜೆಪಿ ಸರ್ಕಾರ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಜನರ ಬಳಿ ಬರುವ ಬಿಜೆಪಿ ನಾಯಕರಿಗೆ ಜನರು ರಾಜ್ಯಕ್ಕೆ ಏನು ಮಾಡಿದ್ದು ಯಾರ ಮುಖ ನೋಡಿ ಓಟು ಹಾಕಬೇಕೆಂದು ಪ್ರಶ್ನಿಸಬೇಕಿದೆ ಎಂದ ಅವರು, ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಜಿ.ಕುಮಾರನಾಯಕ ಕ್ಷೇತ್ರದಾಧ್ಯಂತ ಎರಡು ಸುತ್ತಿನ ಸಂಚಾರ ಮಾಡಿದ್ದು ಕಾರ್ಯಕರ್ತರಿಂದ, ಪ್ರಮುಖರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿರುವದು ಗೆಲುವಿನ ವಿಶ್ವಾಸ ಮೂಡಿಸಿದೆ. ಎಲ್ಲಾರು ಒಗ್ಗೂಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವದಾಗಿ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತ ಕುಮಾರ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸೋಲಿಸಿ ಕಾಂಗ್ರೆಸ್ ಪಕ್ಷ ಒಗ್ಗೂಡಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದೆ. ನರೇಂದ್ರ ಮೋದಿ ಮುಖ ನೋಡಿ ಓಟು ಕೇಳುವ ಯಾವ ಕಾರಣಕ್ಕೆ ಎಂದು ಬಿಜೆಪಿಯವರು ಹೇಳಬೇಕಿದೆ ಎಂದರು.
ಸಮಾಜಿಕ ನ್ಯಾಯ, ಸಮಾನ ಅವಕಾಶ ನೀಡುವ ಸಿದ್ಧಾಂತದ ಮೇಲೆ ಕಾಂಗ್ರೆಸ್ ಯಾವುದೇ ಒಂದು ಜಾತಿ, ಧರ್ಮದ ಪರ ಕೆಲಸಮಾಡುತ್ತಿಲ್ಲ. ಐದು ಗ್ಯಾರಂಟಿ ಯೋಜನೆಗಳು, ಉದ್ಯೋಗ ಖಾತ್ರಿಯೋಜನೆ ಯಾವುದೇ ಒಂದು ಜಾತಿ, ಧರ್ಮದವರಿಗೆ ಜಾರಿಗೊಳಿಸದೇ ಇರುವದೇ ನಿದರ್ಶನ. 371(ಜೆ) ವಿಶೇಷ ಸ್ಥಾನಮಾನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪ್ರಯತ್ನ ಫಲವಾಗಿದೆ. ಪಕ್ಷ ಎಲ್ಲಾ ಧರ್ಮವರಿಗೂ ಅವಕಾಶ ದೊರಕಿಸಿಕೊಟ್ಟಿದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಪಕ್ಷ ಕಾರ್ಯಕರ್ತರು ಪ್ರತಿಷ್ಠೆಯಾಗಿ ಸ್ವೀಕರಿಸಿ ಚುನಾವಣೆ ಎದುರಿಸಲಿದ್ದೇವೆ ಎಂದರು.
ಗ್ರಾಮೀಣ ಶಾಸಕ ದದ್ದಲಬಸನಗೌಡ ಮಾತನಾಡಿ, ಎಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸಬೇಕಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್ ಇವರು ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವುದಾಗಿ ಹೇಳಿರುವದು ಹೊಟ್ಟೆಕಿಚ್ಚಿನ ಹೇಳಿಕೆಯಾಗಿದೆ. ವಿರೋಧ ಪಕ್ಷದವರು ಜನರಲ್ಲಿ ಗೊಂದಲ ಮೂಡಿಸಲು ಹೇಳಿಕೆಗಳು ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಜನರಲ್ಲಿ ಕಾಂಗ್ರೆಸ್ ಮೇಲೆ ವಿಶ್ವಾಸ ಹೆಚ್ಚಾಗಿದೆ. 50 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕುಮಾರನಾಯಕ ಗೆಲುವು ಸಾಧಿಸಲಿದ್ದಾರೆ ಎಂದರು.
ಮಾನವಿ ಶಾಸಕ ಹಂಪಯ್ಯನಾಯಕ ಮಾತನಾಡಿ, ಉದ್ಯೋಗ ಕೇಳಿದರೆ ಪಕೋಡಾ ಮಾಡುವಂತೆ ಹೇಳಿದ್ದ ಬಿಜೆಪಿಯವರಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಮಾರನಾಯಕ ಇವರ ಗೆಲುವು ಖಚಿತವಾಗಿದೆ. ಗ್ಯಾರಂಟಿ ಯೋಜನೆಗಳು ಜನರಲ್ಲಿ ವಿಶ್ವಾಸ ನಂಬಿಕೆ ಮೂಡಿಸಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿವೆ ಎಂದರು. 15ಲಕ್ಷ ರೂ. ಪ್ರತಿಯೊಬ್ಬರ ಖಾತೆಗೆ ಹಾಕುವದಾಗಿ ಹೇಳಿದ್ದ ನರೇಂದ್ರ ಮೋದಿಯವರು 15ಪೈಸೆ ಹಾಕಿಲ್ಲ. ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಮಾತನಾಡಿ, ಬಿಜೆಪಿಯವರಿಗೆ ಪ್ರಜಾಪ್ರಭುತ್ವ , ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಹತ್ತು ವರ್ಷದ ದುರಾಡಳಿತದಿಂದ ಜನರು ಬ್ರಮನಿರಸನಗೊಂಡಿದ್ದಾರೆ. ಬಿಜೆಪಿ ಸುಳ್ಳು ಭರವಸೆಗಳು ಜನರಿಗೆ ಮನವರಿಕೆಯಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಪಕ್ಷದ ಕಾರ್ಯಕರ್ತರು ತೊಡಗಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ.ಶಾಂತಪ್ಪ, ನಗರಸಭೆ ಹಿರಿಯ ಸದಸ್ಯ ಜಯಣ್ಣ, ಜಿ.ಶಿವಮೂರ್ತಿ, ತಾಯಣ್ಣನಾಯಕ, ಅಸ್ಲಂ ಪಾಷಾ, ಜಿ. ಬಸವವರಾಜರೆಡ್ಡಿ, ರುದ್ರಪ್ಪ ಅಂಗಡಿ ಉಪಸ್ಥಿತರಿದ್ದರು.
