ಇಸ್ರೇಲ್ ಮೇಲೆ ಇರಾನ್ ಡ್ರೋನ್‌ಗಳನ್ನು ಹಾರಿಸುತ್ತಿದ್ದಂತೆ ಜೋರ್ಡಾನ್, ಇರಾಕ್ ಮತ್ತು ಲೆಬನಾನ್ ತನ್ನ ವಾಯುಮಾರ್ಗಗಳನ್ನು ಮುಚ್ಚಿದ್ದವು. ಇದೀಗ, ಮತ್ತೆ ವಾಯುಮಾರ್ಗವನ್ನು ತೆರೆದಿವೆ. ಜೋರ್ಡಾನ್‌ನ ರಾಷ್ಟ್ರೀಯ ಸುದ್ದಿ ವಾಹಿನಿ ಭಾನುವಾರದಂದು ಜೋರ್ಡಾನ್‌ನಲ್ಲಿ ವಾಯು ಸಂಚಾರ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ತಿಳಿಸಿದೆ.
ಇಸ್ರೇಲ್ ಮೇಲೆ ಇರಾನ್ ಡ್ರೋನ್ ದಾಳಿ ಆರಂಭವಾಗುತ್ತಿದ್ದಂತೆ ರಾತ್ರಿ ವೇಳೆ ತನ್ನ ವಾಯು ಮಾರ್ಗವನ್ನು ಬಂದ್ ಮಾಡಿದ್ದ ಲೆಬನಾನ್ ಈಗ ಮತ್ತೆ ವಿಮಾನ ನಿಲ್ದಾಣದಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸಲಾಗುತ್ತಿದೆ ಎಂದು ಹೇಳಿದೆ. ಭದ್ರತಾ ಅಪಾಯಗಳನ್ನು ಈಗ ನಿವಾರಿಸಲಾಗಿದೆ ಎಂದು ಇರಾಕ್‌ನ ವಾಯುಯಾನ ಪ್ರಾಧಿಕಾರ ಹೇಳಿದೆ.
Jordan, Lebanon, Iraq reopen airspace closed over Iran’s attacks on Israel.#IranAttack #Iranians #IranAttackIsrael #Iranian #Israel #الحرب_العالمية_الثالثة pic.twitter.com/k2IeU94TxW
— Akbar Ali Khan (@Ali707khan) April 14, 2024
ಈ ನಡುವೆ ಇಸ್ರೇಲ್ ಭಾನುವಾರ ಬೆಳಿಗ್ಗೆ 7:30 (04:30 GMT)ರ ಬಳಿಕ ತನ್ನ ವಾಯುಪ್ರದೇಶವನ್ನು ಪುನಃ ತೆರೆದಿದೆ. ಟೆಲ್ ಅವಿವ್‌ನಿಂದ ಹಾರಾಟ ನಡೆಸುವ ವಿಮಾನಗಳ ವೇಳಾಪಟ್ಟಿಯ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿದೆ ಎಂದೂ ತಿಳಿಸಿದೆ.
ಫ್ಲ್ಯಾಗ್ ಕ್ಯಾರಿಯರ್ ಎಲ್ ಅಲ್ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. “ವಿಮಾನದ ವೇಳಾಪಟ್ಟಿಯನ್ನು ಸಾಧ್ಯವಾದಷ್ಟು ಬೇಗ ಸ್ಥಿರಗೊಳಿಸುವಲ್ಲಿ ಕಾರ್ಯನಿರತವಾಗಿದ್ದೇವೆ. ಎಲ್ ಅಲ್ ಇಸ್ರೇಲ್‌ಗೆ ಮತ್ತು ಅಲ್ಲಿಂದ ಇತರೆಡೆ ವಾಯು ಮಾರ್ಗವನ್ನು ಕಾಪಾಡುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? 17 ಭಾರತೀಯ ಸಿಬ್ಬಂದಿಗಳಿದ್ದ ಇಸ್ರೇಲ್ ಮೂಲದ ಸರಕು ಹಡಗು ವಶಪಡಿಸಿಕೊಂಡ ಇರಾನ್
ಇನ್ನು ಇರಾನ್ ಮತ್ತು ಇಸ್ರೇಲ್ ನಡುವೆ ಇರುವ ಜೋರ್ಡಾನ್, ತನ್ನ ಪ್ರದೇಶವನ್ನು ದಾಟಿ ಸಾಗುವ ಯಾವುದೇ ಡ್ರೋನ್ ಅಥವಾ ಕ್ಷಿಪಣಿಗಳನ್ನು ಪ್ರತಿಬಂಧಿಸಲು ವಾಯು ರಕ್ಷಣೆಯನ್ನು ಸಿದ್ಧಪಡಿಸಿದೆ ಎಂದು ಎರಡು ಪ್ರಾದೇಶಿಕ ಭದ್ರತಾ ಮೂಲಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿವೆ.
ನಾಗರಿಕರ ಸುರಕ್ಷತೆಯನ್ನು ಕಾಪಾಡಲು ಕಳೆದ ರಾತ್ರಿ ತನ್ನ ವಾಯುಪ್ರದೇಶವನ್ನು ಪ್ರವೇಶಿಸಿದ ಕೆಲವು ವಿಮಾನ, ಡ್ರೋನ್‌ಗಳನ್ನು ತಡೆಹಿಡಿದಿದೆ ಎಂದು ಜೋರ್ಡಾನ್ ಹೇಳಿದೆ. “ಆ ಸಮಯದಲ್ಲಿ ಯಾವುದೇ ಗಮನಾರ್ಹ ಹಾನಿ ಅಥವಾ ನಾಗರಿಕರಿಗೆ ಯಾವುದೇ ಗಾಯ ಉಂಟಾಗಿಲ್ಲ. ಆದರೆ ಕೆಲವು ಚೂರುಗಳು ಅನೇಕ ಸ್ಥಳಗಳಲ್ಲಿ ಬಿದ್ದಿದೆ” ಎಂದೂ ತಿಳಿಸಿದೆ.
ಇರಾನ್ ದಾಳಿಯ ನಂತರ ಜಾಗತಿಕ ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸುತ್ತಿವೆ ಮತ್ತು ಮಾರ್ಗಗಳನ್ನು ಬದಲಾಯಿಸುತ್ತಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ಎಮಿರೇಟ್ಸ್ ತನ್ನ ಕೆಲವು ವಿಮಾನಗಳನ್ನು ರದ್ದುಗೊಳಿಸುವುದಾಗಿ ಮತ್ತು ಇತರೆಡೆ ಮಾರ್ಗ ಬದಲಾವಣೆಯನ್ನು ಘೋಷಿಸಿದೆ ಎಂದು ಏರ್‌ಲೈನ್‌ನ ವಕ್ತಾರರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಇರಾನ್-ಇಸ್ರೇಲ್ ಉದ್ವಿಗ್ನತೆ | ಮಿತ್ರ ದೇಶಗಳು ಶತ್ರುಗಳಾಗಿದ್ದು ಹೇಗೆ?; ಸಂಕ್ಷಿಪ್ತ ಇತಿಹಾಸ
ಅಬುಧಾಬಿ ಮೂಲದ ಎತಿಹಾದ್ ಏರ್‌ವೇಸ್ ಭಾನುವಾರ ಜೋರ್ಡಾನ್ ಮತ್ತು ಇಸ್ರೇಲ್‌ಗೆ ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ. ಸ್ವಿಸ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ ಮುಂದಿನ ಸೂಚನೆ ಬರುವವರೆಗೆ ಟೆಲ್ ಅವಿವ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸ್ಥಗಿತಗೊಳಿಸಿದೆ ಎಂದು ಏರ್‌ಲೈನ್ ಭಾನುವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ಥಾನ್ಸಾ ಒಡೆತನದ ಸ್ವಿಸ್ ತನ್ನ ಎಲ್ಲಾ ವಿಮಾನಗಳು ಇರಾನ್, ಇರಾಕ್ ಮತ್ತು ಇಸ್ರೇಲ್‌ನ ವಾಯುಪ್ರದೇಶಗಳಿಂದ ನಿರ್ಬಂಧಿಸಿದೆ. ಇದರಿಂದಾಗಿ ಭಾರತ ಮತ್ತು ಸಿಂಗಾಪುರದಿಂದ ವಿಮಾನಗಳು ವಿಳಂಬವಾಗುತ್ತವೆ.
ಶನಿವಾರ ತಡರಾತ್ರಿ, ಇರಾನ್ ಸ್ಫೋಟಕ ಡ್ರೋನ್‌ಗಳನ್ನು ಉಡಾಯಿಸಿದ್ದು ಇಸ್ರೇಲ್‌ನ ಮೇಲೆ ಕ್ಷಿಪಣಿ ದಾಳಿಯನ್ನೂ ನಡೆಸಿದೆ. ಈ ತಿಂಗಳ ಆರಂಭದಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಮಾಜಿ ಕಾನ್ಸುಲೇಟ್ ಮೇಲೆ ದಾಳಿ ನಡೆದ ಬಳಿಕ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ಇರಾನ್ ಆರೋಪಿಸಿದೆ. ಈ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಇಸ್ರೇಲ್ ಕಡೆಗೆ ಹಲವು ಡ್ರೋನ್‌ಗಳನ್ನು ಹಾರಿಸಿದ ಇರಾನ್: ಯುದ್ಧದ ಭೀತಿ
ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿತ್ತು. ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ಇಸ್ರೇಲ್ ಮೇಲೆ ಡ್ರೋನ್ ದಾಳಿಯನ್ನು ಆರಂಭಿಸಿದೆ. ಅದಾದ ಬಳಿಕ ಭಾರತೀಯರು ಸೇರಿದಂತೆ ಇತರೆ ದೇಶದ ಸಿಬ್ಬಂದಿಗಳಿದ್ದ ಇಸ್ರೇಲ್‌ನ ಸರಕು ಸಾಗಣೆ ಹಡಗನ್ನು ವಶಕ್ಕೆ ಪಡೆದಿದೆ. ಇಸ್ರೇಲ್ ಮತ್ತು ಗಾಜಾದ ನಡುವೆ ಯುದ್ಧದ ಮಧ್ಯೆ ಈ ದಾಳಿ ನಡೆದಿದೆ.