ಮೋದಿಯವರ ಸುಳ್ಳುಗಳೆಲ್ಲ ಬಹಿರಂಗವಾಗಿವೆ. ಅಚ್ಛೇ ದಿನಗಳೆಂದಯ ಹೇಳಿ ಅಧಿಕಾರ ಹಿಡಿದವರು ಕೆಟ್ಟ ದಿನಗಳನ್ನು ಕೊಟ್ಟರು. ನೋಟ್ ಬಂದ್, ಬೆಲೆ ಏರಿಕೆ, ಜಿಎಸ್‌ಟಿಯಿಂದ ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಕಾಂಗ್ರೆಸ್ ದೇಶವನ್ನು ಕಟ್ಟಿದ ಪಕ್ಷ. ಸ್ವಾತಂತ್ರ್ಯ ಬಂದ ನಂತರ ಸೂಜಿಯೂ ತಯಾರಾಗದ ಸ್ಥಿತಿಯಲ್ಲಿದ್ದ ಭಾರತವನ್ನು ಉಜ್ವಲಗೊಳಿಸಿದ್ದು ಕಾಂಗ್ರೆಸ್ ಎಂದು ಬೃಹತ್ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹೇಳಿದರು.
ವಿಜಯಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರು ಅವರು ಸೋಮವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ವೇಳೆ ಮಾತನಾಡಿದರು.
“ನೀರಾವರಿ ಯೋಜನೆಗಳು, ಗ್ಯಾರಂಟಿ ಫಲಪ್ರದವಾದ ವಿಷಯಗಳನ್ನು ಗಮನಿಸಿ ಮತದಾರರು ಈ ಬಾರಿ ಆಲಗೂರರನ್ನು ಆರಿಸಿ ಕಳಿಸಬೇಕು” ಎಂದು ಕರೆ ನೀಡಿದರು.
ಸಚಿವ ಶಿವಾನಂದ ಪಾಟೀಲ್ ಮಾತನಾಡಿ, “ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಯೋಗ್ಯ ಬೆಲೆ, ಹೆಣ್ಣುಮಕ್ಕಳಿಗೆ ವರ್ಷಕ್ಕೆ ಲಕ್ಷ ರೂ. ನೀಡುವ ಗ್ಯಾರಂಟಿ ಘೋಷಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯರ ಸರ್ಕಾರ ನೀಡಿದ್ದ ಭರವಸೆಗಳನ್ನೆಲ್ಲ ಈಡೇರಿಸಿದೆ. ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಬದಲಾವಣೆ ಗಾಳಿ ಬೀಸಿದೆ. ಇವೆರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೆರೆದ ವಾಹನ ಏರಿದ ನಾಯಕರುಗಳು, ಭಾಷಣ ಮಾಡುತ್ತಲೇ ಸಾಗಿದ್ದು ವಿಶೇಷವಾಗಿತ್ತು. ಬಿಸಿಲು ಅಧಿಕವಾಗಿದ್ದರೂ ಕೂಡ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿದ್ದ ಜನರು, ಮಹಿಳೆಯರು ದಾರಿಯುದ್ದಕ್ಕೂ ಉತ್ಸಾಹದಿಂದ ಇದ್ದರು. ‘ಈ ಸಲ ಬದಲಿಸಬೇಕು ಬಿಜಾಪುರ’ ಎಂದು ಘೋಷಣೆ ಕೂಗುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಗದಗ | ಮಠ ತ್ಯಜಿಸಿ ರಾಜಕೀಯಕ್ಕೆ ಇಳಿಯಲಿ; ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸೂಳಿಬಾವಿ ಕಿಡಿ
ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ್, ಅಪ್ಪಾಜಿ ನಾಡಗೌಡ, ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ಪ್ರಕಾಶ ರಾಠೋಡ ಮಾತನಾಡಿದರು. ಜಿಲ್ಲೆಯ ಇಬ್ಬರು ಸಚಿವರು ಹಾಗೂ ಕಾಂಗ್ರೆಸ್‌ನ ಎಲ್ಲ ಶಾಸಕರು, ನೂರಾರು ಮುಖಂಡರು, ಸಾವಿರಾರು ಕಾರ್ಯಕರ್ತರು ಇದ್ದರು.
ಮನಸೆಳೆದ ಲಂಬಾಣಿ ನೃತ್ಯ
ಹಲಗೆಯ ಸಪ್ಪಳಕ್ಕೆ ಲಂಬಾಣಿ ಮಹಿಳೆಯರು ಆಕರ್ಷಕ ಹೆಜ್ಜೆ ಹಾಕಿದರು. ನಾನಾ ವಾದ್ಯಗಳು ಸಾಥ್ ನೀಡಿದವು. ದಾರಿ ಮಧ್ಯೆ ಜನರಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅವರವರ ಪಾಡಿಗೆ ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು ಕುಡಿಯುತ್ತ ಹೆಜ್ಜೆ ಹಾಕುತ್ತಿದ್ದರು.
