ಕೇಂದ್ರ ನರೇಂದ್ರ ಮೋದಿ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಫೆಬ್ರವರಿ 15 ರ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ವಕೀಲ ಮ್ಯಾಥ್ಯೂಸ್ ಜೆ. ನೆಡುಂಪಾರ ಅವರು ಈ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು, “ಈ ನ್ಯಾಯಾಲಯವು ಅರ್ಜಿಯನ್ನು (ಯೋಜನೆಯ ವಿರುದ್ಧ) ಪುರಸ್ಕರಿಸಿದೆ ಮತ್ತು ಯೋಜನೆಯನ್ನು ರದ್ದುಗೊಳಿಸಿದೆ. ಆದರೆ ರದ್ದು ಮಾಡುವಾಗ ಸಂಸತ್ತಿನ ಮೇಲೆ ಮೇಲ್ಮನವಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಗಮನಿಸಿಲ್ಲ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ದೇಣಿಗೆ ನೀಡಿ -ಗುತ್ತಿಗೆ ಪಡಿ; ಬಿಜೆಪಿಯ ದಂಧೆ ಜಗಜ್ಜಾಹೀರು
“ಈ ವಿಚಾರವು ನ್ಯಾಯಸಮ್ಮತವಾಗಿದೆ ಎಂದು ಊಹಿಸುವಲ್ಲಿ ನ್ಯಾಯಾಲಯವು ವಿಫಲವಾಗಿದೆ. ಚುನಾವಣಾ ಬಾಂಡ್ ವಿರುದ್ಧದ ಅರ್ಜಿಯಲ್ಲಿ ಅರ್ಜಿದಾರರು ಅವರಿಗೆ ಪ್ರತ್ಯೇಕವಾಗಿ ಯಾವುದೇ ನಿರ್ದಿಷ್ಟ ಕಾನೂನು ಅಡೆತಡೆಗಳನ್ನು ಉಲ್ಲೇಖಿಸಿಲ್ಲ. ಹಾಗಿರುವಾಗ ಅರ್ಜಿಯನ್ನು ನಿರ್ದಿಷ್ಟ ಮತ್ತು ವಿಶೇಷವಾದ ಹಕ್ಕುಗಳ ಜಾರಿಗಾಗಿ ಖಾಸಗಿ ದಾವೆಯಂತೆ ಪರಿಗಣಿಸಲು ಸಾಧ್ಯವಿಲ್ಲ” ಎಂದು ನೆಡುಂಪಾರ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
“ಸಾರ್ವಜನಿಕ ಅಭಿಪ್ರಾಯವನ್ನು ವಿಭಜಿಸಬಹುದು ಮತ್ತು ಜನರು ಚುನಾಯಿಸಿದ ಪ್ರತಿನಿಧಿಗಳು ಈ ಯೋಜನೆಯನ್ನು ಜಾರಿ ಮಾಡಿರುವ ಕಾರಣದಿಂದಾಗಿ ಈ ದೇಶದ ಬಹುಪಾಲು ಜನರು ಯೋಜನೆಯನ್ನು ಬೆಂಬಲಿಸಬಹುದು, ಜನರಿಗೂ ಕೇಳುವ ಹಕ್ಕಿದೆ ಎಂಬುವುದನ್ನು ಗಮನಿಸುವಲ್ಲಿ ನ್ಯಾಯಾಲಯ ವಿಫಲವಾಗಿದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಎರಡನೇ ಅತಿ ದೊಡ್ಡ ಚುನಾವಣಾ ಬಾಂಡ್ ಖರೀದಿದಾರ ಸಂಸ್ಥೆ ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಎಫ್‌ಐಆರ್
2018 ರ ಚುನಾವಣಾ ಬಾಂಡ್ ಯೋಜನೆಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಹಿತಿ ಹಕ್ಕುಗಳ ಸಾಂವಿಧಾನಿಕ ಹಕ್ಕಿನ “ಉಲ್ಲಂಘನೆ” ಎಂದು ಪರಿಗಣಿಸಿ, ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಯೋಜನೆಯನ್ನು ಫೆಬ್ರವರಿ 15ರಂದು ರದ್ದುಗೊಳಿಸಿದೆ.
ಹಾಗೆಯೇ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಆದರೆ ಎಸ್‌ಬಿಐ ಅಧಿಕ ಕಾಲಾವಕಾಶವನ್ನು ಕೋರಿದ್ದು, ಸುಪ್ರೀಂ ಕೋರ್ಟ್ ತರಾಟೆಯ ಬಳಿಕ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದೆ. ಪ್ರಸ್ತುತ ಚುನಾವಣಾ ಆಯೋಗ ಚುನಾವಣಾ ಬಾಂಡ್ ಸಂಬಂಧಿತ ಎಲ್ಲ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು ದೇಶದಲ್ಲಿ ಅತೀ ಅಧಿಕ ಬಾಂಡ್ ದೇಣಿಗೆ ಪಡೆದ ಪಕ್ಷ ಬಿಜೆಪಿ ಎಂಬುವುದು ಬಹಿರಂಗವಾಗಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಕಾಂಗ್ರೆಸ್ ನಾಯಕ ಜಯಾ ಠಾಕೂರ್ ಮತ್ತು ಸ್ಪಂದನ್ ಬಿಸ್ವಾಲ್ ಅವರು ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.