ಜನರ ಬದುಕಿಗೆ ಶಕ್ತಿ ಕೊಡದ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಏಕೆ ಮತ ಹಾಕಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್‌ಹುಕುಂ ಸಾಗುವಳಿದಾರರಿಗೆ ಅವಧಿಯನ್ನು 75 ವರ್ಷದಿಂದ 25 ವರ್ಷಕ್ಕೆ ಇಳಿಸಲು ತಿದ್ದುಪಡಿ ಇರಲಿ, ಶಿಫಾರಸು ಕೂಡ ರಾಘವೇಂದ್ರ ಮಾಡಿಸಲಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರ (ಬಿಜೆಪಿ) ಅಧಿಕಾರದಲ್ಲಿ ಇತ್ತು. ಸ್ವತಃ ಯಡಿಯೂರಪ್ಪ ಸಿಎಂ ಆಗಿದ್ದರೂ ಏನೂ ಮಾಡಲಿಲ್ಲ. ಭದ್ರಾವತಿಯ ಎರಡು ಕಾರ್ಖಾನೆಗಳಲ್ಲಿ ಒಂದು ಕಣ್ಣು ಮುಚ್ಚಿದರೆ ಮತ್ತೊಂದು ಕೊನೆಯ ಹಂತದಲ್ಲಿದೆ. ಅವುಗಳನ್ನು ಉಳಿಸಲು ಮುಂದಾಗಲಿಲ್ಲ ಎಂದು ಹರಿಹಾಯ್ದರು.
ನಮ್ಮ ಗ್ಯಾರಂಟಿ (ಪ್ರಣಾಳಿಕೆ) ನಿಜ, ಬಿಜೆಪಿಯವರ ಭರವಸೆ ಬರೀ ಸುಳ್ಳು ಎಂದು ವಾಗ್ದಾಳಿ ನಡೆಸಿದ ಅವರು, ನಮ್ಮದು ಜನರ ಬದುಕಿನ ಪ್ರಶ್ನೆಯಾದರೆ, ಅವರು ಜನರ ಭಾವನೆಗಳ ಮೇಲೆ ಮತ ಕೇಳುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಿ ಕೊಟ್ಟ ಮಾತಿನಂತೆ ನಡೆದಿರುವ ಕಾಂಗ್ರೆಸ್ ಬಸವಣ್ಣನವರ ನುಡಿದಂತೆ ನಡೆಯುವ ಆಶಯ ಈಡೇರಿಸಿದೆ. ಆದರೆ, ಬಿಜೆಪಿಯವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ಆದ್ದರಿಂದ, ಇಲ್ಲಿ ಯಡಿಯೂರಪ್ಪ ಪುತ್ರನಿಗೆ ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.
ಗುರುಗಳ (ಬಂಗಾರಪ್ಪ) ಪುತ್ರಿಯ (ಗೀತಾ ಶಿವರಾಜಕುಮಾರ) ನಾಮಪತ್ರ ಸಲ್ಲಿಕೆಯಾಗಿದೆ. ಜಿಲ್ಲೆಯ ಜನರು ಗೀತಾ ಅವರಿಗೆ ಅವಕಾಶ ಕೊಡುವ ನಂಬಿಕೆ ಇದೆ. ಶಿವಮೊಗ್ಗದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದರು.
ದೇಶದಲ್ಲಿ 400 ಸ್ಥಾನ ಕೊಡಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರೂ ಆತನನ್ನು ಬಿಜೆಪಿಯಿಂದ ತೆಗೆದು ಹಾಕಲಿಲ್ಲ. ಜನಾಕ್ರೋಶದ ಕಾರಣ ಈಗ ಸಂವಿಧಾನ ಉಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಸ್ವಿಸ್ ಬ್ಯಾಂಕ್‌ನಲ್ಲಿನ ಕಪ್ಪು ಹಣ ಎಂದು ಬೋಗಸ್ ಪಟ್ಟಿ ಬಿಟ್ಡು ಪ್ರಚಾರ ಪಡೆದುಕೊಂಡರು. ಕಪ್ಪು ಹಣ ವಾಪಸ್ ತರಲಿಲ್ಲ. 15 ಲಕ್ಷ ರೂ. ಅಕೌಂಟ್‌ಗೆ ಹಾಕಲಿಲ್ಲ. ಉದ್ಯೋಗ ಕೊಡಲು ಆಗಲಿಲ್ಲ. ಹೀಗಿದ್ದಾಗ ಬಿಜೆಪಿಗೆ ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುವುದಾಗಿ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಿ ಒಂದು ಪೈಸೆ ಕೊಡಲಿಲ್ಲ. ಆ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಚಕಾರ ಎತ್ತುತ್ತಿಲ್ಲ. ಒಮ್ಮೆಯಾದರೂ ಸಂಸತ್ ಕಲಾಪದಲ್ಲಿ ರೈತರ ಪರವಾಗಿ ಮಾತನಾಡಿದ್ದರೆ ಉತ್ತರ ಕೊಡಪ್ಪ ರಾಘವೇಂದ್ರ ಎಂದು ಹೇಳಿದರು.
ಬಿಜೆಪಿ ಈ ಬಾರಿ 14 ಮಂದಿ ಹಾಲಿ ಸಂಸದರಿಗೆ ಟಿಕೆಟ್ ಕೊಟ್ಟಿಲ್ಲ. ಅವರ ಮುಖ ಸರಿ ಇಲ್ಲವೇ? ಅವರಿಗೆಲ್ಲ ಏನು ಕಡಿಮೆ ಆಗಿತ್ತು. ಏನು ತಪ್ಪು ಮಾಡಿದ್ದರು ಎಂದು ವ್ಯಂಗ್ಯವಾಡಿದರು.
ಇದೇ ವೇಳೆ, ಗ್ಯಾರಂಟಿ ಯೋಜನೆಯ ಲಾಭ ಪಡೆಯುವ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿ, ಮಾಡಬಾರದ್ದು ಮಾಡಿ ಈಗ ತಪ್ಪಾಯ್ತು ಕ್ಷಮಿಸಿ ಬಿಡಿ ಅಂದರೆ ಯಾರು ಕೇಳ್ತಾರೆ ಕುಮಾರಣ್ಣ ಎಂದು ಡಿ ಕೆ ಶಿವಕುಮಾರ್ ಲೇವಡಿ ಮಾಡಿದರು.
ಗ್ಯಾರಂಟಿಗಳಿಂದ ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಅಂದರೆ ಏನರ್ಥ. ಹಳ್ಳಿಯಲ್ಲಿ ಇದಕ್ಕೆ ಏನು ಅರ್ಥ. ಇದು ನಮ್ಮ ಗ್ರಾಮೀಣ ಮಹಿಳೆಯರು ಮಾತ್ರವಲ್ಲ, ಇಡೀ ಮನುಕುಲಕ್ಕೆ ಮಾಡಿದ ಅಪಮಾನ. ಜನ ರೊಚ್ಚಿಗೆದ್ದಿದ್ದಾರೆ ಎಂದರು.
ಹೆಣ್ಣು ಮಕ್ಕಳು ಕೂಡ ಅವರನ್ನು ಕುಮಾರಣ್ಣ ಎನ್ನುತ್ತಾರೆ. ನಾನೂ ಹಾಗೆಯೇ ಕರೆಯುವೆ. ಇದು ರಾಜ್ಯದ 1.5 ಕೋಟಿ ಹೆಣ್ಣುಮಕ್ಕಳ ಸ್ವಾಭಿಮಾನದ ಪ್ರಶ್ನೆ. ಎಚ್ ಡಿ ಕುಮಾರಸ್ವಾಮಿ ಆಡಿರುವ ಹಗುರ ಮಾತಿಗೆ ಯಡಿಯೂರಪ್ಪ, ಆರ್ ಅಶೋಕ್, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ನಟ ಶಿವರಾಜ್ ಕುಮಾರ್, ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಭೀಮಣ್ಣ ನಾಯ್ಕ್, ಬಿ ಕೆ ಸಂಗಮೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಸೂಡ ಅಧ್ಯಕ್ಷ ಎಚ್ ಎಸ್ ಸುಂದರೇಶ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ, ಎಂ ಶ್ರೀಕಾಂತ, ಎಚ್ ಸಿ ಯೋಗೀಶ್, ಎನ್ ರಮೇಶ್, ಶ್ರೀನಿವಾಸ ಕರಿಯಣ್ಣ ಇದ್ದರು.
