ಭಾರತ ದೇಶ ಇರುವವರೆಗೂ ಸಂವಿಧಾನ ಇರುತ್ತದೆ. ಅದರ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಾಂಶುಪಾಲ ಕಲ್ಲೇಶ್ ಹೇಳಿದರು.
ದಾವಣಗೆರೆ ಜಿಲ್ಲೆಯ ಜಗಳೂರು ನಗರದ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯ ಕಾಲೇಜಿನಲ್ಲಿ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯ ಕಾಲೇಜು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಗಳೂರು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಒಬ್ಬ ಶಿಕ್ಷಣ ಪ್ರೇಮಿಯಾಗಿ ಪ್ರತಿಯೊಬ್ಬ ಪ್ರಜೆಯೂ ಶಿಕ್ಷಣ ಪಡೆಯಬೇಕು ಎಂಬ ಅವರ ಪರಿಶ್ರಮ ಬಹಳಷ್ಟಿದೆ. ಅವರ ಧ್ಯೇಯ ವಾಕ್ಯದಂತೆ ಮೊದಲು ಶಿಕ್ಷಿತರಾಗಬೇಕು ನಂತರ ಸಂಘಟಿತರಾಗಬೇಕು ತದನಂತರ ಹೋರಾಟಕ್ಕೆ ಬದ್ಧರಾಗಬೇಕು ಆಗ ಮಾತ್ರ ದೇಶ ಮುನ್ನಡೆಯಲು ಸಾಧ್ಯ ಎಂದರು.
ಇಂದು ನಾವೆಲ್ಲ ಶಿಕ್ಷಣ ಪಡೆದು ಉನ್ನತ ಮಟ್ಟದಲ್ಲಿ ಇರುವುದಕ್ಕೆ ನೇರ ಕಾರಣ ಅದು ಅಂಬೇಡ್ಕರ್ ಅವರು ಎಂಬುವುದನ್ನು ಎಲ್ಲರೂ ಮನಗಾಣಬೇಕು. ಅಂಬೇಡ್ಕರ್ ಅವರನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ವಿಚಾರ ಚಿಂತನೆಗಳನ್ನು ತಿಳಿದುಕೊಂಡು ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದಲು ಶ್ರಮ ವಹಿಸಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ದಸಂಸ ಸಂಚಾಲಕ ಮಲೆಮಾಚಿಕೆರೆ ಬಿ. ಸತೀಶ್ ಮಾತನಾಡಿ, ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ದುಡಿದವರಲ್ಲ, ಈ ದೇಶದ ಪ್ರತಿಯೊಬ್ಬ ಪ್ರಜೆಗಾಗಿ ಅವರು ಶ್ರಮ ವಹಿಸಿದ್ದಾರೆ. ಎಲ್ಲ ಧರ್ಮ ಗ್ರಂಥಗಳಿಗಿಂತ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಶ್ರೇಷ್ಠ ಗ್ರಂಥವಾಗಿದೆ. ಪ್ರಪಂಚದಲ್ಲೇ ಪ್ರಥಮ ಬಾರಿಗೆ ಮಹಿಳೆಯರಿಗೆ ಮತದಾನ ಹಕ್ಕು ಕೊಟ್ಟಿರುವ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಅದಲ್ಲದೆ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಪ್ರಬಲವಾಗಿ ಸ್ಥಾನಮಾನ ಕಂಡುಕೊಂಡಿರುವುದಕ್ಕೆ ಅಂಬೇಡ್ಕರ್ ಅವರ ಪರಿಶ್ರಮ ಅಗಾಧವಾಗಿದೆ. ವಿದೇಶಿಗರು ಅಂಬೇಡ್ಕರ್ ಅವರನ್ನು ಜ್ಞಾನದಿಂದ ನೋಡಿದರೆ, ದುರ್ದೈವ ಈ ದೇಶದಲ್ಲಿ ಅವರನ್ನು ಜಾತಿಯ ದೃಷ್ಟಿಯಿಂದ ನೋಡುವುದು ನಾಚಿಕೆಗೇಡಿನ ಸಂಗತಿ ಎಂದರು.
ಜಗತ್ತಿನಲ್ಲೇ ಪ್ರತೀ ನಿಮಿಷಕ್ಕೂ ಗೌರವಕ್ಕೆ ಒಳಪಡುವ ವ್ಯಕ್ತಿಯೆಂದರೆ ಅದು ಅಂಬೇಡ್ಕರ್ ಅವರು ಮಾತ್ರ, ಅದಲ್ಲದೆ ಜಗತ್ತಿನಲ್ಲೇ ಅತೀ ಹೆಚ್ಚು ಪುತ್ಥಳಿಗಳನ್ನೂ ಹೊಂದಿರುವ ವ್ಯಕ್ತಿಯಾಗಿದ್ದಾರೆ. 36 ಪದವಿಗಳನ್ನು ಪಡೆದುಕೊಂಡು ಜಗತ್ತಿನಲ್ಲೇ ಶ್ರೇಷ್ಠ ಜ್ಞಾನಿಗಳ ಪಟ್ಟಿಯಲ್ಲಿ 2ನೇಯ ಸ್ಥಾನದಲ್ಲಿದ್ದಾರೆ. ಅಂಬೇಡ್ಕರ್ ಅವರು ಈ ದೇಶಕ್ಕೆ ಬೃಹತ್ ಸಂವಿಧಾನ ನೀಡಿ ಸರ್ವರಿಗೂ ಬೆಳಕಾಗಿದ್ದಾರೆ. ಅವರ ವಿಚಾರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಆರ್.ವಿ. ಹೇಮರೆಡ್ಡಿ, ಪತ್ರಕರ್ತ ಜಗಜೀವನ್ ರಾಮ್ ಆರ್.ಎಲ್. ಉಪನ್ಯಾಸಕರಾದ ಬಸಪ್ಪ, ರವಿ, ಕೊಟ್ರೇಶ್, ರಾಘವೇಂದ್ರ, ಪ್ರೇಮಾ, ಕಾಶಿನಾಥ್, ಸ್ವಾಮಿ ಹಾಗೂ ಸಿಬ್ಬಂದಿ ವರ್ಗ ಮತ್ತು ಪ್ರಶಿಕ್ಷಣಾರ್ಥಿಗಳಾದ ವಿ.ಸಿ.ಚೌಡಪ್ಪ, ಅಮೃತ, ಉಮಾ ಜಿ, ಸೇರಿದಂತೆ ಅನೇಕ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
