ತಮ್ಮ ಸರ್ಕಾರಿ ವೃತ್ತಿಯ ಜೊತೆ ವಲಸೆ ಕಾರ್ಮಿಕರ ಮಕ್ಕಳ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು 2023ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬಳ್ಳಾರಿ ಜಿಲ್ಲೆಯ ಹಣಿಕೆಹಾಳ್ ಗ್ರಾಮದ ನಿವಾಸಿ ಶಾಂತಪ್ಪ ಜಡೆಮ್ಮನವರ್ ಈ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ 644ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.
ಸದ್ಯ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಉಪ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಪ್ಪ ಈ ಮೊದಲು ಕೋವಿಡ್ ಸಾಂಕ್ರಮಿಕ ಸಮಯ 2020ರಲ್ಲಿ ಅಣ್ಣಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಈ ಸಂದರ್ಭದಲ್ಲಿ ನಾಗರಬಾವಿಯಲ್ಲಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ನಿತ್ಯವು ಬೆಳಿಗ್ಗೆ ಏಳು ಗಂಟೆಗೆ ಎದ್ದು ಒಂದು ಗಂಟೆ ಗಣಿತ, ಸಾಮಾನ್ಯ ಜ್ಞಾನ, ಜೀವನ ಕೌಶಲ್ಯ ಸೇರಿದಂತೆ ಮೌಲ್ಯಾಧಾರಿದ ಶಿಕ್ಷಣದ ಬಗ್ಗೆ ಪಾಠ ಹೇಳಿಕೊಡುತ್ತಿದ್ದರು. ನಿತ್ಯವು ಕೊಳಚೆ ಪ್ರದೇಶದಲ್ಲಿ ವಾಸ ಮಾಡುವ 30 ರಿಂದ 40 ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದರು.
ಪಾಠ ಮಾತ್ರವಲ್ಲದೆ ವಲಸೆ ಕಾರ್ಮಿಕರ ಮಕ್ಕಳಿಗೆ ಚಾಕೊಲೇಟ್, ಪುಸ್ತಕಗಳು, ಕೈಚೀಲಗಳು, ಗಣಿತದ ಪರಿಕರಗಳು ಮುಂತಾದವುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕೊಡಿಸಿ ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಶಾಂತಪ್ಪ ಕೂಡ ಬಳ್ಳಾರಿಯ ಕೊಳಗೇರಿಯಲ್ಲಿ ತಮ್ಮ ಜೀವನ ಕಟ್ಟಿಕೊಂಡ ಕಾರಣ ವಲಸೆ ಮಕ್ಕಳ ಕಷ್ಟ ಏನೆಂಬುದು ಗೊತ್ತಿತ್ತು. ತಮ್ಮ ಹಿನ್ನಲೆ ಕೂಡ ಸಮಾಜಮುಖಿ ಕಾರ್ಯಕ್ಕೆ ನೆರವಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?
ಇಷ್ಟು ಮಾತ್ರವಲ್ಲದೆ ಗೊರಗುಂಟೆ ಪಾಳ್ಯ ಪ್ರದೇಶದ ಪ್ರಮುಖ ಜಂಕ್ಷನ್‌ನಲ್ಲಿ ಸಾರ್ವಜನಿಕರಿಗಾಗಿ ಮೊಬೈಲ್ ಶೌಚಾಲಯವನ್ನು ನಿರ್ಮಿಸಿದ್ದರು. ಹೆಚ್ಚು ಜನ ಸಂಚರಿಸುವ ಆ ಜಾಗದಲ್ಲಿ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡ ಶಾಂತಪ್ಪ ತಮ್ಮ ಹಣದಲ್ಲಿಯೇ ಮೊಬೈಲ್ ಶೌಚಾಲಯ ನಿರ್ಮಿಸಿದ್ದರು. ಶೌಚಾಲಯವನ್ನು ಒಬ್ಬ ಲಿಂಗತ್ವ ಅಲ್ಪಸಂಖ್ಯಾತರೊಬ್ಬರಿಂದ ಉದ್ಘಾಟಿಸಿದ್ದರು.
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಶಾಂತಪ್ಪ ಕನ್ನಡದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಬರೆದು 644ನೇ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶಗಳನ್ನು ಇಂದು ಪ್ರಕಟಿಸಿದೆ. ಉತ್ತರ ಪ್ರದೇಶದ ಆದಿತ್ಯ ಶ್ರೀವಾತ್ಸವ ಮೊದಲ ರ‍್ಯಾಂಕ್ ಪಡೆದು ತೇರ್ಗಡೆಯಾಗಿದ್ದಾರೆ.
ಒಬಿಸಿ 303, ಎಸ್‌ಸಿ 165, ಎಸ್‌ಟಿ 86 ಸೇರಿ ಒಟ್ಟು 1016 ಮಂದಿ ಉತ್ತೀರ್ಣರಾಗಿದ್ದಾರೆ. ತೇರ್ಗಡೆಯಾದವರಲ್ಲಿ 180 ಐಎಎಸ್, 37 ಐಎಫ್‌ಎಸ್ ಹಾಗೂ 200 ಮಂದಿ ಐಪಿಎಸ್‌ಗೆ ಆಯ್ಕೆಯಾಗಲಿದ್ದಾರೆ.
