ಭಾರತಭಾಗ್ಯ ವಿಧಾತ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರದ್ದು ಆಲದಮರದಂತಹ ಜೀವನ ಎಂದು ಜಮಖಂಡಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಜಗನ್ನಾಥ ದೊಡಮನಿ ಅಭಿಪ್ರಾಯಪಟ್ಟರು.
ಅವರು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇಯ ಜಯಂತಿ ಪ್ರಯುಕ್ತ ಧಾರವಾಡದಲ್ಲಿ, ಆಯೋಜಿಸಿದ್ದ ʼಭಾರತ ಭಾಗ್ಯವಿಧಾತ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರʼ ಲೇಖನ ಸ್ಪರ್ಧೆಯ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ತೆಂಗಿನಮರದ ಗರಿಗಳನ್ನು ಎಣಿಸುವುದು ಸುಲಭ. ಆದರೆ, ಆಲದ ಮರದ ಎಲೆಗಳನ್ನು ಎಣಿಸುವುದು ಬಹಳ ಕಷ್ಟ ಅದರಂತೆ, ಬಾಬಾಸಾಹೇಬರ ವ್ಯಕ್ತಿತ್ವವೂ ಸಹ ಆಲದಮರದಂತೆ. ಅವರ ಬಾಲ್ಯ ಜೀವನ, ವಿದೇಶದ ಪಯಣ, ಮಹಾಡ ಕೆರೆ ಹೋರಾಟ, ದೇವಾಲಯ ಪ್ರವೇಶದ ಹೋರಾಟ, ಅಧ್ಯಯನದ ವ್ಯಾಪ್ತಿ, ದೂರದೃಷ್ಟಿತ್ವ, ಸಮಾಜಮುಖಿ ಚಿಂತನೆ, ಹಿಂದೂ ಕೋಡ್ ಬಿಲ್ ಮುಂತಾದ ಅಂಶಗಳನ್ನು ಗಮನಿಸಿದರೆ ಬಾಬಾಸಾಹೇಬರ ಬಹುಮುಖ ವ್ಯಕ್ತಿತ್ವ ಗೊತ್ತಾಗುವುದು ಎಂದರು.
133ನೇಯ ಜಯಂತಿಯ ಸಂದರ್ಭದಲ್ಲಿ ಅವರ ಸೂರ್ಯಸದೃಶ್ಯ ಜೀವನವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅಗತ್ಯವಾಗಿದೆ. ಬಾಬಾಸಾಹೇಬರನ್ನು ಓದುವುದೆಂದರೆ ಸಾಮಾಜಿಕ ಪರಿವರ್ತನ ಚಳುವಳಿಯ ಮಹತ್ವ ಅರಿತುಕೊಂಡಂತೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮಾಜಿಕ ಚಿಂತಕರಾದ ಆಯುಷ್ಮಾನ್ ಹಣಮಂತ ಗುಡ್ಡಳ್ಳಿ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವಾರು ಲೇಖಕರು ತಮ್ಮ ಸ್ಪರ್ಧಾಲೇಖನಗಳನ್ನು ವಾಚಿಸಿದರು. ನಂತರ ಫಲಿತಾಂಶವನ್ನು ಪ್ರಕಟಿಸಲಾಯಿತು. ವಿದ್ಯಾ ಕದಂ ಧಾರವಾಡ ಅವರು ಪ್ರಾಯೋಜಿಸಿದ ಪ್ರಥಮ ಬಹುಮಾನ ನಗದು 2,000 ರೂ. ಜೊತೆಗೆ ಪುಸ್ತಕ, ಪ್ರಮಾಣಪತ್ರಕ್ಕೆ ಹುಬ್ಬಳ್ಳಿಯ ಪದ್ಮಜಾ ಜಯತೀರ್ಥ ಉಮರ್ಜಿ ಅವರು ಭಾಜನರಾಗಿದ್ದಾರೆ. ಡಾ.ಗೀತಾ ವಿಜಯಕುಮಾರ ಬೆಂಗಳೂರು ಅವರು ಪ್ರಾಯೋಜಿಸಿದ ದ್ವಿತೀಯ ಬಹುಮಾನ ನಗದು 1,000 ರೂ. ಜೊತೆಗೆ ಪುಸ್ತಕ, ಪ್ರಮಾಣಪತ್ರಕ್ಕೆ ಜಮಖಂಡಿಯ ಈರಪ್ಪ ಸುತಾರ ಮತ್ತು ಡಾ.ಸರೋಜಾ ಬ್ಯಾತನಾಳ ಬಳ್ಳಾರಿಯವರು ಪ್ರಾಯೋಜಿಸಿದ ತೃತೀಯ ಬಹುಮಾನ ನಗದು ರೂ.500/- ಜೊತೆಗೆ ಪುಸ್ತಕ, ಪ್ರಮಾಣಪತ್ರದ ಗೌರವಕ್ಕೆ ರಾಯಚೂರು ವಿಶ್ವವಿದ್ಯಾಲಯದ ಡಾ.ಮೇಘನ ಜಿ. ಅವರು ಭಾಜನರಾಗಿದ್ದಾರೆ.
ತೀರ್ಪುಗಾರರ ಮೆಚ್ಚುಗೆ ಬಹುಮಾನಕ್ಕೆ ಏಳು ಜನ ಲೇಖಕರಾದ ಸುಮನರಾವ್ ಮಂಡ್ಯ, ವಿದ್ಯಾಶ್ರೀ ಹಡಪದ ಕಾರಟಗಿ, ಕುವೆಂಪು ವಿವಿಯ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ, ಸ್ವಪ್ನ (ಸ್ವರಲಹರಿ) ಹಿರಿಯೂರು, ಎಸ್.ಬಿ.ಕುಚಬಾಳ ಬೀದರ, ವಿಜಯಪುರದ ಡಾ.ಪೂರ್ಣಿಮ ದ್ಯಾಮಣ್ಣವರ, ಮುನವಳ್ಳಿಯ ರಾಘವೇಂದ್ರ ತೆಗ್ಗಿನಮನಿ ವಿಜೇತರಾಗಿದ್ದಾರೆ.
ಯುವ ಸಾಹಿತಿಗಳಾದ ಗಣಪತಿ ಚಲವಾದಿ, ರವಿ ಚಲವಾದಿ ಸ್ಪರ್ಧೆಯನ್ನು ಸಂಯೋಜನೆ ಮಾಡಿದ್ದರು. ವಿಜೇತರಿಗೆ ನಗದು ಬಹುಮಾನವನ್ನು ಫೋನಪೇ ಮೂಲಕ ಕಳಿಸಲಾಗುವುದು ಮತ್ತು ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣಪತ್ರವನ್ನು ಅಂಚೆಯ ಮೂಲಕ ಕಳಿಸಲಾಗುವುದು ಎಂದು ಗಣಕರಂಗ ಸಂಸ್ಥೆಯ ಮುಖ್ಯಸ್ಥ, ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ ಮಾಹಿತಿ ನೀಡಿದ್ದಾರೆ.
