ರಾಯಚೂರು-ಯಾದಗಿರಿ ಒಳಗೊಂಡ ರಾಯಚೂರು ಲೋಕಸಭಾ (ಪ.ಪಂ) ಕ್ಷೇತ್ರದ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ರಾಮಲಿಂಗಪ್ಪ ನಾಮಪತ್ರ ಸಲ್ಲಿಸಿದರು.
ಪಕ್ಷದ ಕಾರ್ಯಕರ್ತರು, ನೂರಾರು ಜನ ಬೆಂಬಲಿಗರೊಂದಿಗೆ ಆಗಮಿಸಿದ ಅವರು, ರಾಯಚೂರು ನಗರದ ಭಗತ್ ಸಿಂಗ್ ವೃತ್ತದಲ್ಲಿ ಸಭೆ ನಡೆಸಿ ಶಹೀದ್ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮೆರವಣಿಗೆಯ ಮೂಲಕ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ರೈತ ಕಾರ್ಮಿಕ ವಿರೋಧಿ ಪಕ್ಷಗಳನ್ನು ಸೋಲಿಸಿ, ಬೆಲೆ ಏರಿಕೆ, ನಿರುದ್ಯೋಗದ ವಿರುದ್ಧ ಹೋರಾಡಲು ಬೆಂಬಲಿಸಿ, ಜನ ವಿರೋಧಿ ಎನ್ಇಪಿ ರದ್ದುಗೊಳಿಸಿ, ಉದ್ಯೋಗ ಖಾತ್ರಿ ಯೋಜನೆಯನ್ನು ಬಲಪಡಿಸಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ಉದಾರಿಕರಣ ಖಾಸಗಿಕರಣ ನೀತಿಗಳನ್ನು ಸೋಲಿಸಿ, ಜಾತಿವಾದಿ ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸಿ, ರೈತರ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಖಾತ್ರಿಪಡಿಸಿ ಎಂಬ ಇನ್ನು ಮುಂತಾದ ಘೋಷಣೆಗಳನ್ನು ಕೂಗುತ್ತಾ ಬೆಂಬಲಿಗರು ಮೆರವಣಿಗೆಯಲ್ಲಿ ಸಾಗಿದರು.
ಇದಕ್ಕೂ ಮೊದಲು ಭಗತ್ ಸಿಂಗ್ ವೃತ್ತದಲ್ಲಿ ನಡೆದ ಸಭೆಯಲ್ಲಿ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ಕೆ.ಸೋಮಶೇಖರ್ ಅವರು ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅತ್ಯಂತ ಜನ ವಿರೋಧಿಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ ಎಂದರು.
ಜನಸಾಮಾನ್ಯರ ಬದುಕಿನ ಜೊತೆ ಆಟವಾಡುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ರೈತರ ಆತ್ಮಹತ್ಯೆಯಂತಹ ಗಂಭೀರ ಸಮಸ್ಯೆಗಳನ್ನು ಮರೆಮಾಚಲು ಮಂದಿರ-ಮಸೀದಿ ಹೆಸರಿನಲ್ಲಿ ಕೋಮು ರಾಜಕೀಯಕ್ಕೆ ಮೊರೆಹೋಗಿದೆ. ಕೋಟ್ಯಂತರ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದು, ಇರುವ ಹುದ್ದೆಗಳನ್ನೇ ನಾಶ ಮಾಡಿದೆ. ಜನಸಾಮಾನ್ಯರು ಬಡತನ, ಹಸಿವಿನಿಂದ ದಿನದೂಡುತ್ತಿದ್ದರೆ, ದೇಶದ ಕೆಲವೇ ಕೆಲವು ಕಾರ್ಪೊರೇಟ್ ಮನೆತನಗಳು ಆಗರ್ಭ ಶ್ರೀಮಂತರಾಗುತ್ತಿದ್ದಾರೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂಬಾನಿ ಅದಾನಿ ಅಂತಹ ಬಂಡವಾಳಗಾರರು ಸೇವೆಯಲ್ಲಿ ಬಿಜೆಪಿ ಪಕ್ಷತೊಡಗಿದೆ ಎಂದರು.
ಇದೀಗ ಹೊರ ಬಂದಿರುವ ಎಲೆಕ್ಷನ್ ಬಾಂಡ್ ದೇಶದ ಅತ್ಯಂತ ದೊಡ್ಡ ಭ್ರಷ್ಟ ಹಗರಣವಾಗಿದೆ. ಅದ್ದರಿಂದ ಇಂತಹ ಜನವಿರೋಧಿ ಪಕ್ಷವನ್ನು ಜನರು ಸೋಲಿಸಬೇಕು ಎಂದು ಕರೆ ನೀಡಿದರು.
ಹಾಗೆಯೇ ಇನ್ನೊಂದು ಕಡೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಪರ್ಯಾಯ ಎಂಬಂತೆ ಪ್ರಚಾರ ನಡೆಯುತ್ತಿದ್ದು, ಇದಕ್ಕೂ ಮೊದಲು ದೇಶವನ್ನು ಆಳಿದ ಕಾಂಗ್ರೆಸ್ ಉದಾರಿಕರಣ, ಖಾಸಗಿಕರಣ ನೀತಿಗಳ ಮೂಲಕ ಬಂಡವಾಳಶಾಹಿಗಳ ಸೇವೆ ಮಾಡಿದನ್ನು ಜನರು ಮರೆಯಬಾರದು ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಒಂದಕ್ಕೇ ಇನ್ನೊಂದು ಪರ್ಯಾಯ ಎಂಬ ಕಪಟ ಪ್ರಚಾರವನ್ನು ಜನರು ತಿರಸ್ಕರಿಸಿ, ಜನರ ಕಷ್ಟ ನೋವುಗಳ ಜೊತೆ ನಿಂತು ಜನ ಪರವಾಗಿ ಹೋರಾಡುತ್ತಿರುವ, ಹೋರಾಟದ ದನಿಯನ್ನು ಸಂಸತ್ತಿನಲ್ಲಿ ಎತ್ತಿ ಹಿಡಿಯಲು ಎಸ್. ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದರು.
ಎಸ್.ಯು.ಸಿ.ಐ (ಕಮ್ಯುನಿಸ್ಟ್ ) ಪಕ್ಷದ ಅಭ್ಯರ್ಥಿ ರಾಮಲಿಂಗಪ್ಪ ಮಾತನಾಡಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೃಷ್ಣ ಮತ್ತು ತುಂಗಭದ್ರಾದಂತಹ ಎರಡು ನದಿಗಳು ಹರಿಯುತ್ತಿದ್ದರು ಎರಡು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಬರವಿದೆ. ಈ ವರ್ಷದ ತೀವ್ರ ಬರಗಾಲದಿಂದ ಎರಡು ಜಿಲ್ಲೆಯ ಜನರು ತತ್ತರಿಸುತ್ತಿದ್ದಾರೆ. ಜನರಿಗೆ ಒಂದು ನ್ಯಾಯಪಯಿಸಿ ಬರ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂದರು.
ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುವ ಸಂಸದರು ಇಲ್ಲವಾಗಿದ್ದಾರೆ. ಬರಗಾಲದಿಂದಾಗಿ ಕೆಲಸ ಇಲ್ಲದೆ ಜನ ಗುಳೆ ಹೋಗುತ್ತಿದ್ದಾರೆ. ಗುಳೆಯನ್ನು ತಡೆಯಲು ನರೇಗಾವನ್ನು ಬಲಪಡಿಸಬೇಕಿತ್ತು, ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೊಡುತ್ತಿರುವ ಅನುದಾನವನ್ನು ಕಡಿತ ಮಾಡುತ್ತಾ ಬಂದಿದೆ. ನಮ್ಮ ರಾಜ್ಯದ ಕಳೆದ ನಾಲ್ಕು ತಿಂಗಳ 950ಕೋಟಿ ನರೇಗಾ ಅನುದಾನವನ್ನು ತಡೆಹಿಡಿದಿದೆ. ಈ ಭಾಗದಿಂದ ಬೆಂಗಳೂರಿಗೆ ಫಾಸ್ಟ್ ಪ್ಯಾಸೆಂಜರ್ ರೈಲು ಆರಂಭಿಸಲು ಬಹಳ ದಿನಗಳ ಬೇಡಿಕೆ ಇದ್ದರೂ ಈ ಭಾಗದ ಸಂಸದರು ಧ್ವನಿ ಎತ್ತದೆ ಇರುವುದನ್ನು ಜನರು ಗಮನಿಸಬೇಕೆಂದರು. ಆದ್ದರಿಂದ ಇಂತಹ ಗಂಭೀರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎತ್ತಲು ಜನರ ಪರವಾಗಿ ನಿಂತು ಹೋರಾಡಲು ಎಸ್. ಯು. ಸಿ. ಐ(ಕಮ್ಯುನಿಸ್ಟ್)ಪಕ್ಷದ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಯಾದಗಿರಿ ಜಿಲ್ಲಾ ಸಂಘಟನಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕಾ. ಶರಣಗೌಡ ಗೂಗಲ್‌ಯವರು ಮಾತನಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಜನರ ಸಮಸ್ಯೆಗಳಿಗೆ ಪರಿಹಾರ ಯೋಜನೆಗಳನ್ನು ರೂಪಿಸುವ ಪಕ್ಷಗಳಲ್ಲ. ಅಧಿಕಾರಕ್ಕಾಗಿ ಜನರನ್ನು ಎತ್ತಿ ಕಟ್ಟುವ ಪಕ್ಷಗಳು, ಎಸ್ ಯು ಸಿ ಐ ಜನರ ಪರವಾದ ಪಕ್ಷವಾಗಿದೆ. ಸಂಸತ್ತಿನಲ್ಲಿ ರಾಯಚೂರು ಮತ ಕ್ಷೇತ್ರದ ಪರವಾಗಿ ಕೆಲಸ ಮಾಡಲು ರಾಮಲಿಂಗಪ್ಪ ರವರಿಗೆ ಜನ ಬೆಂಬಲಿಸಬೇಕೆಂದರು.
ರಾಯಚೂರು ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ವೀರೇಶ್ ಎನ್.ಎಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕೆ. ಸೋಮಶೇಖರ್ ಯಾದಗಿರಿ, ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಶರಣ್ ಗೌಡ ಗೂಗಲ್, ರಾಯಚೂರು ಜಿಲ್ಲಾ ಕಾರ್ಯದರ್ಶಿ ಡಾಕ್ಟರ್ ಚಂದ್ರ ಗಿರೀಶ್, ಸಮಿತಿಯ ಸದಸ್ಯರಾದ ಶರಣಪ್ಪ ಉದ್ಬಾಳ ಚನ್ನಬಸವ ಜಾನೇಕಲ್, ಮಹೇಶ್ ಚೀಕಲಪರ್ವಿ, ರಾಮಣ್ಣ ಎಂ, ಅಣ್ಣಪ್ಪ ಎಸ್ ಹಾಗೂ ಪಕ್ಷದ ಕಾರ್ಯಕರ್ತರು, ಸದಸ್ಯರು, ನೂರಾರು ಜನಬೆಂಬಲಿಗರು, ಹಿತೈಷಿಗಳು ಭಾಗವಹಿಸಿದ್ದರು.