ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಾರ್ಪೊರೇಟ್ ಕಂಪನಿ ಪರವಿದೆ. ಸಾಮಾನ್ಯರಿಗೆ ಸುಳ್ಳು ಆಶ್ವಾಸನೆಯನ್ನು ನೀಡಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದು, ಕಾರ್ಪೋರೇಟ್‌ಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಎಸ್.ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಇತಿಹಾಸ ಪ್ರಸಿದ್ಧ ಮಣ್ಣಮ್ಮ ದೇವಾಲಯಕ್ಕೆ ಕಾರ್ಯಕರ್ತರೊಂದಿಗೆ ತೆರಳಿ ಪೂಜೆ ಸಲ್ಲಿಸಿ ಲೋಕಸಭಾ ಚುನಾವಣೆಯ ಮನೆ ಮನೆ ಪ್ರಚಾರದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಬಿಜೆಪಿ ಸರ್ಕಾರವು ಸುಳ್ಳು ಆಶ್ವಾಸನೆಯನ್ನು ನೀಡುವ ಸರ್ಕಾರವಾಗಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಉಳ್ಳವರ ಪರ ಸರ್ಕಾರವಾಗಿದೆ ಎಂದು ಟೀಕಿಸಿದರು.
ದೇಶದ ಸಮಸ್ತ ರೈತರು ಬೆಳೆದ ಬೆಳೆಗಳಿಗೆ, ಹಾಲು, ಮೊಸರಿನ ದರದ ಮೇಲೆ, ಕೃಷಿ, ಯಂತ್ರೋಪಕರಣಗಳಲ್ಲಿ, ಬಿತ್ತನೆ ಬೀಜಗಳಲ್ಲಿ, ರಾಸಾಯನಿಕ ಗೊಬ್ಬರಗಳ ಮೇಲೆ ಹಾಗೂ ಮಾರುಕಟ್ಟೆಯಲ್ಲಿ ಹೆಚ್ಚಿನ ತೆರಿಗೆಯನ್ನು ವಿಧಿಸಿದೆ.
ಮೋದಿಯ ಸರ್ಕಾರವು ಅದಾನಿ, ಅಂಬಾನಿ, ದೇಶದ ಪ್ರಮುಖ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದೆ. ಕೆಲವರ ಸಾಲ ಮನ್ನಾ ಮಾಡಿ ವಿದೇಶಕ್ಕೆ ಪಲಾಯನ ಮಾಡಲು ಅನುವು ಮಾಡಿದೆ. ಅಭಿವೃದ್ದಿ ವಿಚಾರದಲ್ಲಿ ಮೋದಿಯ ಸರ್ಕಾರದ 10 ವರ್ಷ ಆಡಳಿತ ಶೂನ್ಯ ಸಾಧನೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ನೀಡಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಗ್ರಾಮೀಣ ಭಾಗದ ತಾಯಂದಿರ ಮೇಲೆ ಕೆಟ್ಟ ಆರೋಪ ಮಾಡಿರುವುದು ಖಂಡನೀಯವಾಗಿದೆ ಎಂದ ಅವರು, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಡವರ, ಶೋಷಿತರ, ದಲಿತರ, ಹಾಗೂ ಹಿಂದುಳಿದ ವರ್ಗದವರ ಪರವಾದ ಸರ್ಕಾರವಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ದೇಶದ ಜನತೆಯು ಕೈ ಬಲಪಡಿಸುವ ಕೆಲಸ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶಂಕರನಂದ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಜನಪರ ಸರ್ಕಾರವಾಗಿದೆ. ಬಿಜೆಪಿ ಸರ್ಕಾರದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ ಎಂದು ಬಹಿರಂಗವಾಗಿ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಬಿಜೆಪಿ ಸರ್ಕಾರವು ಹಣವಿದ್ದವರಿಗೆ ಟಿಕೆಟ್ ನೀಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಹಣವನ್ನು ಇಟ್ಟುಕೊಂಡು ಚುನಾವಣೆ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ಬಡವರ ಜನಪರ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಚುನಾವಣೆ ನಡೆಸುತ್ತಿದ್ದಾರೆ ಎಂದರು.
ಕಳೆದ ವಿಧಾನಸಭೆಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್‌ರವರು ಗೆಲುವು ಸಾಧಿಸಿದರೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ 1008 ತೆಂಗಿನಕಾಯಿ ಒಡೆಯುವ ಹರಕೆಯನ್ನು ಮಾಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ 1008 ತೆಂಗಿನಕಾಯಿ ಒಡೆಯುವ ಹರಕೆಯನ್ನು ಪೂರ್ಣಗೊಳಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕೆ.ಆರ್. ವೆಂಕಟೇಶ್, ಕೆ.ಆರ್. ತಾತಯ್ಯ, ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೈಲಾರಯ್ಯ, ಗುರು ರೇಣುಕಾರಾಧ್ಯ, ರಮೇಶ್, ಶಶಿಕಿರಣ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮ, ಮುಖಂಡರಾದ ಸಣ್ಣ ರಂಗಯ್ಯ, ಯತೀಶ್, ಮುಂತಾದವರು ಉಪಸ್ಥಿತರಿದ್ದರು.
