ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಏನೆಲ್ಲಾ ಸೌಲಭ್ಯಗಳಿದ್ದವೂ ಆ ಯಾವುದೇ ಸೌಕರ್ಯಗಳೂ ಮೋದಿ ದತ್ತು ಪಡೆದಿರುವ ಗ್ರಾಮಗಳನ್ನು ಇನ್ನೂ ತಲುಪಿಲ್ಲ. ಗ್ರಾಮದಲ್ಲಿ ಹಲವಾರು ಕುಟುಂಬಗಳು ಮನೆಯಿಲ್ಲದೆ, ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸೊಳ್ಳೆ ಕಾಟದ ನಡುವೆಯೂ ಬೀದಿಗಳಲ್ಲಿ ಮಲಗುತ್ತಿದ್ದಾರೆ.
10 ವರ್ಷಗಳ ಅಧಿಕಾರ ಅನುಭವಿಸಿರುವ ಪ್ರಧಾನಿ ಮೋದಿ ಅವರು 3ನೇ ಬಾರಿಗೆ ಪ್ರಧಾನ ಮಂತ್ರಿ ಆಗಬೇಕೆಂಬ ಹೆಬ್ಬಯಕೆ ಹೊಂದಿದ್ದಾರೆ. ಅವರ ನೇತೃತ್ವದ ಬಿಜೆಪಿ ಅರ್ಥಾತ್ ಎನ್‌ಡಿಎ ಮೈತ್ರಿ ಕೂಡ 3ನೇ ಬಾರಿಗೆ ಅಧಿಕಾರಕ್ಕೇರುವ ಆಸೆ ಹೊಂದಿದೆ. ಅದಕ್ಕಾಗಿ ಭಾರೀ ಕಸರತ್ತು ನಡೆಸುತ್ತಿದೆ. ಬಿಜೆಪಿ ತನ್ನ ಪ್ರಮುಖ 14 ಭರವಸೆಗಳುಳ್ಳ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದೆ. ಅಂದಹಾಗೆ, ಕಳೆದ ಎರಡು ಚುನಾವಣೆಗಳಲ್ಲಿ ಮತ್ತು ಚುನಾವಣೆ ನಂತರದಲ್ಲಿ ಬಿಜೆಪಿ ನೀಡಿದ್ದ ಭರವಸೆಗಳೇನಾದವು? ಮೋದಿ ಸರ್ಕಾರ ಘೋಷಿಸಿದ್ದ ಯೋಜನೆಗಳು ಏನಾದವು?
ಮೋದಿ ಅವರು ತಾವು ಪ್ರಧಾನಿಯಾಗಿ ಮೊದಲ ಬಾರಿಗೆ ಆಚರಿಸಿದ ಸ್ವಾತಂತ್ರ್ಯ ದಿನದಂದು (2014ರ ಆಗಸ್ಟ್ 15) ಕೆಂಪುಕೋಟೆಯಲ್ಲಿ ನಿಂತು, ‘ಸಂಸದ್ ಆದರ್ಶ ಗ್ರಾಮ ಯೋಜನೆ'(ಎಸ್‌ಎಜಿವೈ)- 10 ವರ್ಷಗಳಲ್ಲಿ ಹಳ್ಳಿಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡುವುದು- ಘೋಷಿಸಿದರು. ಯೋಜನೆಯಡಿ ಆ ಗ್ರಾಮಗಳಲ್ಲಿ ಸ್ಮಾರ್ಟ್ ಶಾಲೆಗಳು, ಮೂಲಭೂತ ಆರೋಗ್ಯ ಸೌಲಭ್ಯ, ಶುದ್ಧ ಕುಡಿಯುವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ, ಶೌಚಾಲಯ ಹಾಗೂ ನಿರಾಶ್ರಿತರಿಗೆ ವಸತಿ ಸೌಲಭ್ಯ ನೀಡುವುದಾಗಿ ಹೇಳಿದ್ದರು.
ಯೋಜನೆಯಡಿ, ಪ್ರತಿ ಸಂಸದರು (543 ಲೋಕಸಭಾ ಸಂಸದರು ಮತ್ತು 239 ರಾಜ್ಯಸಭಾ ಸಂಸದರು) ತಮ್ಮ ಕ್ಷೇತ್ರದ 8 ಗ್ರಾಮ ಪಂಚಾಯತಿಗಳಲ್ಲಿ ತಲಾ ಒಂದೊಂದು ಗ್ರಾಮವನ್ನು ದತ್ತುಪಡೆಯಬೇಕು. ಅದರಲ್ಲಿ, 3 ಗ್ರಾಮಗಳನ್ನು 2019ರೊಳಗೆ ಮತ್ತು ಉಳಿದ 5 ಹಳ್ಳಿಗಳನ್ನು 2024ರೊಳಗೆ ಅಭಿವೃದ್ಧಿಪಡಿಸಬೇಕು ಎಂಬುದು ಯೋಜನೆಯ ಉದ್ದೇಶವಾಗಿತ್ತು.
ಅಂದಹಾಗೆ, ಯೋಜನೆ ಘೋಷಣೆಯಾಗಿ ಈಗ 10 ವರ್ಷಗಳೂ ಕಳೆದಿವೆ. ಯೋಜನೆಯ ಗುರಿಯಾಗಿದ್ದ 10 ವರ್ಷಗಳ ಗಡುವು ಕೂಡ ಮುಗಿದಿದೆ. ಆದರೆ, ಭಾರತದಲ್ಲಿ ಈ ಆದರ್ಶ ಗ್ರಾಮಗಳು ಎಲ್ಲಿವೆ ಎಂಬುದನ್ನು ಚುನಾವಣೆಯ ಸಮಯದಲ್ಲಿ ನಾವು ನೋಡಲೇಬೇಕಿದೆ.
ಅಂಕಿ ಅಂಶಗಳ ಪ್ರಕಾರ, ಯೋಜನೆಯ ಗುರಿಯು 10 ವರ್ಷಗಳಲ್ಲಿ ಸುಮಾರು 6,256 ಗ್ರಾಮಗಳನ್ನು ಆದರ್ಶ ಗ್ರಾಮಗಳನ್ನಾಗಿ ಮಾಡಬೇಕಿತ್ತು. ಆದರೆ, ಈ ಪೈಕಿ ಕೇವಲ 3,364 (52%) ಗ್ರಾಮಗಳನ್ನಷ್ಟೇ ಆಯ್ಕೆ ಮಾಡಲಾಗಿದೆ. ಅದರಲ್ಲೂ, ಈ ಗ್ರಾಮಗಳ ಪೈಕಿ, ಬಹುತೇಕ ಗ್ರಾಮಗಳು ಈಗಲೂ ತೀರಾ ಹಿಂದುಳಿದಿವೆ. ಮೂಲಭೂತ ಸೌಕರ್ಯಗಳೂ ಇಲ್ಲದೆ ಸೊರಗುತ್ತಿವೆ. ಹಳ್ಳಿ ಜನ ತಮ್ಮೂರನ್ನು ಆದರ್ಶ ಗ್ರಾಮವೆಂದು ಹೇಳಿಕೊಳ್ಳಲು ಹಿಂಜರಿಯುವ ಸ್ಥಿತಿ ಎದುರಾಗಿದೆ.
ಆದರ್ಶವಾಗದ ಗ್ರಾಮಗಳು – ಸಚಿವಾಲಯ ಹೇಳುವುದೇನು?
ಕೆಲವು ಸಚಿವರು ಸೇರಿದಂತೆ ಹಲವು ಸಂಸದರು ಇದುವರೆಗೆ ಒಂದು ಅಥವಾ ಹೆಚ್ಚಿನ ಗ್ರಾಮಗಳನ್ನು ದತ್ತು ತೆಗೆದುಕೊಂಡಿಲ್ಲ ಎಂಬ ಆರೋಪಗಳೂ ಇವೆ. ಇಂತಹ ಹೊತ್ತಿನಲ್ಲಿ, ಪ್ರಧಾನಿ ಮೋದಿ ಅವರ ಆದರ್ಶ ಗ್ರಾಮ ಯೋಜನೆ ಆರಂಭದಲ್ಲೇ ಎಡವಿದೆ. ಗ್ರಾಮಗಳು ನಾನಾ ಸೌಕರ್ಯಗಳಿಲ್ಲದೆ ಬಳಲುತ್ತಿವೆ ಎಂಬುದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವೇ ಗುರುತಿಸಿದೆ.
ಕೇಂದ್ರವು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಯೋಜನೆಗಳ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆಗಾಗಿ ನಿವೃತ್ತ ಐಎಎಸ್ ಅಧಿಕಾರಿ ರಾಜೀವ್ ಕಪೂರ್ ನೇತೃತ್ವದಲ್ಲಿ ಸಾಮಾನ್ಯ ಪರಿಶೀಲನಾ ಆಯೋಗವನ್ನು (ಸಿಆರ್‌ಎಂ) ರಚಿಸಲಾಗಿತ್ತು. ಆಯೋಗವು 2023ರಲ್ಲಿ ತನ್ನ ವರದಿ ಸಲ್ಲಿಸಿತ್ತು.
”ಆದರ್ಶ ಗ್ರಾಮ ಯೋಜನೆಗಾಗಿ ಯಾವುದೇ ಮೀಸಲಾದ ಹಣವಿಲ್ಲ. ಯೋಜನೆಗಾಗಿ ಹಣವನ್ನು ಒಗ್ಗೂಡಿಸುವ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಮಹತ್ವದ ಪರಿಣಾಮ ಕಂಡುಬಂದಿಲ್ಲ” ಎಂದು ಆಯೋಗವು ತನ್ನ ವರದಿಯಲ್ಲಿ ಹೇಳಿದೆ.

ಅಲ್ಲದೆ, ಸಂಸದರು ಕೂಡ ತಾವು ದತ್ತು ಪಡೆದ ಗ್ರಾಮಗಳಿಗೆ ತಮ್ಮ ಸಂಸದರ ನಿಧಿ (ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ– ಎಂಪಿಎಲ್‌ಎಡಿಎಸ್) ಇಂದಲೂ ಸಾಕಷ್ಟು ಹಣವನ್ನು ಮಂಜೂರು ಮಾಡಿಲ್ಲ. ಕೆಲವೆಡೆ ಆರಂಭದಲ್ಲಿ ಸಂಸದರು ಸಕ್ರಿಯವಾಗಿದ್ದ ಕ್ಷೇತ್ರಗಳಲ್ಲಿ ಕೆಲ ಗ್ರಾಮಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ನಡೆದಿದೆ. ಆದರೆ, ಆದರ್ಶವೆಂದು ಗುರುತಿಸುವ ಮಟ್ಟಿಗೆ ಯಾವುದೇ ಅಭಿವೃದ್ಧಿ ಕಂಡುಬಂದಿಲ್ಲ. ಅವುಗಳನ್ನು ಮಾದರಿ ಗ್ರಾಮಗಳೆಂದು ಕರೆಯಲು ಸಾಧ್ಯವೇ ಇಲ್ಲ ಎಂದು ಸಿಆರ್‌ಎಂ ಹೇಳಿದೆ.
“ಅಸ್ಸಾಂ, ಪಂಜಾಬ್, ಬಿಹಾರ, ಕರ್ನಾಟಕ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆದರ್ಶ ಗ್ರಾಮ ಯೋಜನೆಯ ಪ್ರಗತಿ ಶೇ.50ಕ್ಕಿಂತ ಕಡಿಮೆ ಇದೆ. ದೆಹಲಿ, ಗೋವಾ, ಪಶ್ಚಿಮ ಬಂಗಾಳ ಮುಂತಾದ ಕೆಲವು ರಾಜ್ಯಗಳಲ್ಲಿ ಯೋಜನೆಯಡಿ ನಡೆದ ಕೆಲಸದ ಪ್ರಗತಿಯನ್ನು ಪರಿಶೀಲಿಸಲು ಯಾವುದೇ ನಿಯಮಿತ ಸಭೆಗಳೇ ನಡೆದಿಲ್ಲ” ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಗೋವಾ ಮತ್ತು ಅಸ್ಸಾಂ ಸೇರಿದಂತೆ ಬಿಜೆಪಿಯೇ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ಯೋಜನೆಯಡಿ ಕೇವಲ 30% ಕೆಲಸಗಳು ಮಾತ್ರವೇ ನಡೆದಿವೆ ಎಂದು ಅವರು ಗಮನ ಸೆಳೆದಿದ್ದಾರೆ.
ಹಳ್ಳಿಗಳ ಆಯ್ಕೆಯಲ್ಲೇ ಗುರಿ ಮುಟ್ಟದ ಯೋಜನೆ
‘ಸಂಸದ್ ಆದರ್ಶ ಗ್ರಾಮ ಯೋಜನೆ’ (ಎಸ್‌ಎಜಿವೈ) ಮಾರ್ಗಸೂಚಿಗಳ ಪ್ರಕಾರ, ಲೋಕಸಭಾ ಸಂಸದರು ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ, ಅವರ ಕ್ಷೇತ್ರ ನಗರವಾಗಿದ್ದರೆ, ಪಕ್ಕದ ಕ್ಷೇತ್ರಗಳ ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ರಾಜ್ಯಸಭಾ ಸಂಸದರು ತಮ್ಮ ರಾಜ್ಯಗಳಲ್ಲಿ ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಹೀಗೆ, ರಾಜ್ಯಸಭೆ ಮತ್ತು ಲೋಕಸಭೆಯ ಒಟ್ಟು 782 ಸಂಸದರು ತಲಾ 8ರಂತೆ 10 ವರ್ಷಗಳಲ್ಲಿ 6,256 ಗ್ರಾಮಗಳನ್ನು ಆಯ್ದುಕೊಂಡು, ಅಭಿವೃದ್ಧಿ ಮಾಡಬೇಕಿತ್ತು. ಆದರೆ, ಇದುವರೆಗೆ ಕೇವಲ 3,364 ಗ್ರಾಮಗಳನ್ನು ಮಾತ್ರವೇ ಆಯ್ಕೆ ಮಾಡಲಾಗಿದೆ. ಅಂದರೆ, ಯೋಜನೆಯು ಕಾಮಗಾರಿಯಲ್ಲಿ ಗುರಿ ಮುಟ್ಟುವುದು ಇರಲಿ, ಗ್ರಾಮಗಳ ಆಯ್ಕೆಯಲ್ಲಿಯೇ ಗುರಿ ಮುಟ್ಟಿಲ್ಲ.
2023ರ ಆಗಸ್ಟ್ 9ರಂದು ರಾಜ್ಯಸಭೆಯಲ್ಲಿ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ, ‘2014ರಿಂದ 2016ರವರೆಗೆ 703 ಗ್ರಾಮಗಳನ್ನು ಸಂಸದರು ಆಯ್ಕೆ ಮಾಡಿದ್ದಾರೆ. 2016ರಿಂದ 2018 ನಡುವೆ 447 ಗ್ರಾಮಗಳು ಆಯ್ಕೆಯಾಗಿವೆ’ ಎಂದು ತಿಳಿಸಿದ್ದರು. ಅದಾಗ್ಯೂ, 2019ರಿಂದ (ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಎರಡನೇ ಅವಧಿ) ಗ್ರಾಮಗಳ ಆಯ್ಕೆಯ ಸಂಖ್ಯೆ ಇಳಿಕೆ ಕಂಡಿದೆ.
2019 ರಿಂದ 2023ರ ಆಗಸ್ಟ್ 3ರವರೆಗೆ 1,782 ಗ್ರಾಗಮಳನ್ನು ಸಂಸದರು ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲಿ, 2019-20ರಲ್ಲಿ 467, 2020-21ರಲ್ಲಿ 350, 2021-22ರಲ್ಲಿ 320 ಹಾಗೂ 2022-23ರಲ್ಲಿ 282 ಗ್ರಾಮಗಳು ಆಯ್ಕೆಯಾಗಿವೆ.

ಅದರಲ್ಲೂ, ಕಳೆದ 10 ವರ್ಷಗಳಲ್ಲಿ, ಉತ್ತರ ಪ್ರದೇಶ (263), ತಮಿಳುನಾಡು (203), ಗುಜರಾತ್ (154), ಆಂಧ್ರಪ್ರದೇಶ (119), ಮಹಾರಾಷ್ಟ್ರ (114), ರಾಜಸ್ಥಾನ (104) ಹಾಗೂ ಬಿಹಾರದಲ್ಲಿ 102 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಕೇವಲ 88 ಗ್ರಾಮಗಳನ್ನು ಮಾತ್ರವೇ ರಾಜ್ಯದ ಸಂಸದರು, ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರು ದತ್ತು ಪಡೆದಿದ್ದಾರೆ. ಆದರೆ, ಇದುವರೆಗೂ ಒಂದೂ ಕೂಡ ಸಂಸದರ ಆದರ್ಶ ಗ್ರಾಮವಾಗಿ ಕಾಣಿಸಿಕೊಂಡಿಲ್ಲ. ಸಂಸದರ ದತ್ತು ಮಕ್ಕಳು ಪೌಷ್ಟಿಕ ಆಹಾರವಿಲ್ಲದೆ ಸೊರಗಿದಂತಾಗಿದ್ದಾರೆ.
ಸಂಸದರ ಆದರ್ಶ ಗ್ರಾಮಕ್ಕಿಂತ ಮಿಗಿಲಾಗಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಗ್ರಾಮ ಪಂಚಾಯತಿಗಳೇ ಹಲವಾರು ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿವೆ.
ಮೋದಿ ದತ್ತು ಪಡೆದ ಗ್ರಾಮಗಳ ಗತಿ – ಅಧೋಗತಿ
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರಗಳಲ್ಲಿ ಎಸ್‌ಎಜಿವೈ ಅಡಿಯಲ್ಲಿ 8 ಗ್ರಾಮಗಳನ್ನು ದತ್ತು ಪಡೆದಿದ್ದಾರೆ. ಅವುಗಳಲ್ಲಿ ಗಂಗಾ ನದಿಯ ಪಕ್ಕದಲ್ಲಿರುವ ಡೊಮ್ರಿ ಗ್ರಾಮವೂ ಒಂದು. ಆದರೆ, ಈ ಗ್ರಾಮ ಯಾವ ಆಯಾಮದಲ್ಲೂ ಆದರ್ಶವಾಗಿ ಕಾಣುತ್ತಿಲ್ಲ. ಯೋಜನೆಯಡಿ ಏನೆಲ್ಲಾ ಸೌಲಭ್ಯಗಳಿದ್ದವೂ ಆ ಯಾವುದೇ ಸೌಕರ್ಯಗಳೂ ಗ್ರಾಮವನ್ನು ಇನ್ನೂ ತಲುಪಿಲ್ಲ. ಗ್ರಾಮದಲ್ಲಿ ಹಲವಾರು ಕುಟುಂಬಗಳು ಮನೆಯಿಲ್ಲದೆ, ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸೊಳ್ಳೆ ಕಾಟದ ನಡುವೆಯೂ ಬೀದಿಗಳಲ್ಲಿ ಮಲಗುತ್ತಿದ್ದಾರೆ.
ಇದು ಬರೀ ಡೊಮ್ರಿ ಗ್ರಾಮದ ಕತೆಯಲ್ಲ. ಮೋದಿ ಅವರು ದತ್ತು ಪಡೆದ ಎಲ್ಲ 8 ಗ್ರಾಮಗಳ ಕತೆಯೂ ಇದೇ ಆಗಿದೆ. ಮೋದಿ ದತ್ತು ತೆಗೆದುಕೊಂಡ ಮೊದಲ ಗ್ರಾಮ ಜಯಪುರದಲ್ಲಿ ಅನೇಕ ದಲಿತರಿಗೆ ಈವರೆಗೂ ಮನೆಗಳು ದೊರೆತಿಲ್ಲ. ಶೌಚಾಲಯಗಳಂತೂ ಮರೀಚಿಕೆಯಾಗಿವೆ. ರಸ್ತೆಗಳೂ ಕಳಪೆ ಸ್ಥಿತಿಯಲ್ಲಿವೆ. ಇನ್ನು, ನಾಗೇಪುರದಲ್ಲಿಯೂ ಇದೇ ಪರಿಸ್ಥಿತಿ. ಪರಂಪುರದಲ್ಲಿ ಇಡೀ ಗ್ರಾಮದಲ್ಲಿ ನಲ್ಲಿಗಳನ್ನು ಅಳವಡಿಸಿದ್ದರೂ, ಆ ನಲ್ಲಿಗಳಲ್ಲಿ ಈವರೆಗೆ ಒಂದು ಹನಿ ನೀರು ಬಂದಿಲ್ಲ. ಪುರೇಗಾಂವ್ ಸ್ಥಿತಿಯೂ ಇದೇ ಆಗಿದೆ. ಆ ಗ್ರಾಮದಲ್ಲಿ ದಲಿತರು ಮತ್ತು ಯಾದವ ಸಮುದಾಯದವರು ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಬರ್ಯಾರ್‌ಪುರ ಗ್ರಾಮವನ್ನು ಬೇರ್ಪಡಿಸಿ ಜೋಗಾಪುರ ಎಂಬ ಹೊಸ ಗ್ರಾಮವನ್ನು ರಚಿಸಲಾಗಿದೆ. ಆದರೆ, ಬರ್ಯಾರಪುರದಲ್ಲಿ ಕೆಲವು ಸೌಕರ್ಯಗಳಿದ್ದರೆ, ಜೋಗಾಪುರದ ಅನೇಕ ದಲಿತರಿಗೆ ನಲ್ಲಿಗಳನ್ನೇ ನೀಡಲಾಗಿಲ್ಲ. ಕೈಪಂಪ್‌ಗಳ ನೀರನ್ನು ಜೋಗಾಪುರದವರು ಬಳಸುತ್ತಿದ್ದಾರೆ. ಆ ನೀರು ತುಂಬಾ ಕಲುಷಿತಗೊಂಡಿದ್ದು, ಬಳಕೆಗೆ ಯೋಗ್ಯವಾಗಿಲ್ಲ.
ಇನ್ನು, ಕಾಕ್ರಾಹಿಯಾ ಗ್ರಾಮಕ್ಕೆ ಯೋಜನೆಯೇ ಶಾಪವಾಗಿ ಪರಿಣಮಿಸಿದೆ. ಆ ಗ್ರಾಮವನ್ನು ಮೋದಿ ದತ್ತು ತೆಗೆದುಕೊಳ್ಳುವ ಮೊದಲು ಗ್ರಾಮದ ಸ್ಥಿತಿ ಉತ್ತಮವಾಗಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದಲ್ಲಿ ಪ್ರಬಲ ಜಾತಿಗರು ಹೆಚ್ಚಾಗಿರುವ ಪರಿಣಾಮ ಗ್ರಾಮದ ಹಲವರು ನಲ್ಲಿ, ನೀರು, ಪಕ್ಕಾ ಮನೆಗಳನ್ನು ಹೊಂದಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಕರ್ನಾಟಕದಲ್ಲಿಯೂ ಆದರ್ಶವಾಗದ ಗ್ರಾಮಗಳು
ಕಳೆದ ಲೋಕಸಭಾ ಚುನವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25+1 ಸ್ಥಾನಗಳನ್ನು ಬಿಜೆಪಿಯೇ ಗೆದ್ದಿತ್ತು. 2023ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಕಳೆದ 10 ವರ್ಷಗಳಲ್ಲಿ ರಾಜ್ಯದ ಸಂಸದರು 88 ಗ್ರಾಮಗಳನ್ನು ದತ್ತು ಪಡೆದಿದ್ದಾರೆ. ಆದರೆ, ಅವರು ದತ್ತು ಪಡೆದ ಗ್ರಾಮಗಳು ಯಾವುದೇ ಅಭಿವೃದ್ಧಿಯನ್ನೂ ಕಂಡಿಲ್ಲ.
ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-5 | ಮೋದಿ ಸರ್ಕಾರದಲ್ಲಿ ರೈತರ ಆದಾಯವೂ ದ್ವಿಗುಣಗೊಳ್ಳಲಿಲ್ಲ, ಆತ್ಮಹತ್ಯೆಗಳೂ ನಿಲ್ಲಲಿಲ್ಲ
ರಾಜ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸಹೋದರ ಸಂಸದ ಬಿ.ವೈ ರಾಘವೇಂದ್ರ ಅವರು ದತ್ತು ಪಡೆದ ಕೆರಾಡಿ ಗ್ರಾಮದ ಕತೆಯನ್ನೇ ನೋಡೋಣ.
ಕೆರಾಡಿ ಗ್ರಾಮ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ಸೇರಿದ್ದರೂ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಈ ಗ್ರಾಮವನ್ನು ಬಿ.ಎಸ್ ಯಡಿಯೂರಪ್ಪ ಅವರು ಶಿವಮೊಗ್ಗ ಸಂಸದರಾಗಿದ್ದಾಗ ದತ್ತು ಪಡೆದುಕೊಂಡಿದ್ದರು. ಅದಾಗ ಬಳಿಕ, 2019ರಲ್ಲಿ ಅವರ ಪುತ್ರ ರಾಘವೇಂದ್ರ ಸಂಸದರಾದರು. ಕೆರಾಡಿ ಗ್ರಾಮವನ್ನು ಆದರ್ಶ ಗ್ರಾಮವಾಗಿ ಮಾಡುವ ಹೊಣೆ ರಾಘವೇಂದ್ರ ಹೆಗಲಿಗೆ ಏರಿತು. ಆರಂಭದಲ್ಲಿ, ಎಸ್‌ಎಜಿವೈ ಅಡಿಯಲ್ಲಿ ಕೆರಾಡಿ ಗ್ರಾಮವು ಅಭಿವೃದ್ಧಿ ಹೊಂದುತ್ತದೆ ಎಂಬ ಆಶಯ ಗ್ರಾಮಸ್ಥರಲ್ಲಿ ಮೂಡಿತ್ತು. ಆದರೆ, ಈಗ ಚಿತ್ರಣವೇ ಬೇರೆ ಇದೆ. ಗ್ರಾಮಸ್ಥರ ಕನಸು-ಆಶಯಗಳು ಹಾಗೆಯೇ ಉಳಿದು ಹೋಗಿವೆ.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಗ್ರಾಮಕ್ಕ ಈಗಲೂ ಹೊಂಡ-ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿಯೇ ಬರಬೇಕು. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಭರವಸೆಯಾಗಿಯೇ ಉಳಿದಿದೆ. ವಿದ್ಯುತ್ ಸಂಪರ್ಕವಿಲ್ಲದ ಕಾರಣ, ಕೆಲ ಮನೆಗಳು ಸೋಲಾರ್ ಅಳವಡಿಸಿಕೊಂಡು ರಾತ್ರಿ ದೂಡುತ್ತಿದ್ದಾರೆ. ಇನ್ನು, ಮೊಬೈಲ್ ನೆಟ್‌ವರ್ಕ್ ಮರೀಚಿಕೆಯಾಗಿದೆ. ಮೂಲ ಸೌಕರ್ಯಗಳಿಂದ ಜನರು ವಂಚಿತರಾಗಿದ್ದಾರೆ. ಹೀಗಾಗಿ, ಬದುಕಿನ ಬವಣೆ ನೀಗಿಸಲು ಊರು ತೊರೆದು, ನಗರಗಳತ್ತ ವಲಸೆ ಹೊಗಿದ್ದಾರೆ.
ಸಂಸದರ ಆದರ್ಶ ಗ್ರಾಮ ಯೋಜನೆ ಘೋಷಣೆಯಾದಾಗ ಕೆರಾಡಿ ಗ್ರಾಮದ ಜನಸಂಖ್ಯೆ 5,354 ಇತ್ತು. 1,141 ಕುಟುಂಬಗಳು ನೆಲೆಸಿದ್ದವು. ಆದರೀಗ ಕೆರಾಡಿ ಗ್ರಾಮದಲ್ಲಿ ಉಳಿದಿರುವುದು ಬೆರಳೆಣಿಕೆಯಷ್ಟು ಜನರು ಮಾತ್ರ. ಮೂಲಸೌಕರ್ಯಗಳಿಲ್ಲದ ಕಾರಣ, ಕೃಷಿಗೆ ಪಂಪ್‌ಸೆಟ್‌ಗಳಲ್ಲಿ ನೀರು ಹಾಯಿಸಲು ವಿದ್ಯುತ್ ಇಲ್ಲದ ಕಾರಣ ಜನರು ಊರು ತೊರೆದಿದ್ದಾರೆ. ಮೂಲಸೌಕರ್ಯಗಳನ್ನು ಒದಗಿಸಿದರೆ ಗ್ರಾಮದ ಜನ ಮರಳಿ ಬರುತ್ತಾರೆಂದು ಕೆರಾಡಿಯಲ್ಲಿರುವ ಮಂದಿ ಹೇಳುತ್ತಾರೆ. ಆದರೆ, ಅವರ ದುರದೃಷ್ಟಕ್ಕೆ ಸಂಸದ ರಾಘವೇಂದ್ರ ಆ ಹಳ್ಳಿಯತ್ತ ತಲೆಯನ್ನೇ ಹಾಕಿಲ್ಲ. ಕೆರಾಡಿ ಗ್ರಾಮ ಆದರ್ಶ ಗ್ರಾಮವೂ ಆಗಿಲ್ಲ.
ಇದಲ್ಲದೆ, ಸಂಸದ ರಾಘವೇಂದ್ರ ಅವರೇ ದತ್ತು ಪಡೆದಿರುವ ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಸಿದ್ದಾಪುರ ಗ್ರಾಮಗಳಲ್ಲಂತೂ ಒಂದೇ ಒಂದು ಪರ್ಸೆಂಟ್ ಕೂಡ ಕಾಮಗಾರಿ ನಡೆದಿಲ್ಲ ಎಂಬುದನ್ನು ಎಸ್‌ಎಜಿವೈ ವೆಬ್‌ಸೈಟ್ ವಿವರಿಸುತ್ತದೆ.
ಇದು ಕೇವಲ ಕೆರಾಡಿ, ಕೊಲ್ಲೂರು, ಸಿದ್ದಾಪುರ ಗ್ರಾಮಗಳ ಕತೆ ಮಾತ್ರವಲ್ಲ, ದೇಶದಲ್ಲಿ ಸಂಸದರು ದತ್ತು ಪಡೆದ ಎಲ್ಲ ಗ್ರಾಮಗಳ ಪರಿಸ್ಥಿತಿಯೂ ಬಹುತೇಕ ಇದೇ ಆಗಿದೆ. ಪ್ರಧಾನಿ ಮೋದಿ ಅವರು ದತ್ತು ಪಡೆದ ಗ್ರಾಮಗಳೇ ಸಮಸ್ಯೆಗಳಿಂದ ಬಳಲುತ್ತಿರುವಾಗ, ಉಳಿದ ಸಂಸದರು ದತ್ತು ಪಡೆದ ಗ್ರಾಮಗಳು ಇನ್ಯಾವ ರೀತಿಯಲ್ಲಿರಬಹುದು? ಯೋಚಿಸಿ!