ರಾತ್ರಿ ವೇಳೆ ಕಾರ್ಮಿಕರನ್ನು ಬೆದರಿಸಿ ಹಣ ಮತ್ತು ಮೊಬೈಲ್ ಫೋನ್ ಸುಲಿಗೆ ಮಾಡುತ್ತಿದ್ದ ಮೂವರು ದರೋಡೆಕೋರರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಆಕಾಶ್ (19), ಪ್ರವೀಣ (18), ಹನುಮಂತ (22) ಬಂಧಿತ ಆರೋಪಿಗಳು. ಇವರಿಂದ ₹4.2 ಲಕ್ಷ ಮೌಲ್ಯದ 20 ಸ್ಮಾರ್ಟ್ ಫೋನ್ ವಶಕ್ಕೆ ಪಡೆದಿದ್ದಾರೆ.
ಏಪ್ರಿಲ್ 14ರ ರಾತ್ರಿ 11.30ಕ್ಕೆ ಆಲೂರು-ದುದ್ದನಹಳ್ಳಿಯ ಅಮರ್ ತಮ್ಮ ಸ್ನೇಹಿತ ಕೋಡಿಹಳ್ಳಿಯ ನಿವಾಸಿ ಕುಮಾರ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಸೊಣ್ಣಪ್ಪನಹಳ್ಳಿ ಗ್ರಾಮಕ್ಕೆ ತೆರಳತ್ತಿದ್ದರು. ಈ ವೇಳೆ ದಾರಿ ಮಧ್ಯೆ ಬೈಕ್ ತಡೆದ ಮೂವರು ಅಪರಿಚಿತರು ಮಾರಕಾಸ್ತ್ರ ತೋರಿಸಿ, ಇಬ್ಬರಿಂದ ಮೊಬೈಲ್ ಮತ್ತು ಹಣ ಕಸಿಯಲು ಯತ್ನಿಸಿದ್ದರು. ಈ ವೇಳೆ ಸಮೀಪದ ಗ್ರಾಮಸ್ಥರು ದುಷ್ಕರ್ಮಿಗಳನ್ನು ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಕಲಬುರಗಿಯಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಇವರು ಗಾರೆ ಕೆಲಸ ಮಾಡುತ್ತಿದ್ದರು. ಚಿಕ್ಕಜಾಲದಲ್ಲಿ ವಾಸವಿದ್ದ ಇವರಲ್ಲಿ ಒಬ್ಬಾತ ವಿದ್ಯಾರ್ಥಿ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಉಪಹಾರ ಸೇವಿಸುತ್ತಾ ಜನರೊಂದಿಗೆ ಬೆರೆತು ಚರ್ಚಿಸಿದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ
“ಉತ್ತರ ಭಾರತದ ಕಾರ್ಮಿಕರನ್ನು ಗುರಿಯಾಗಿಸಿಕೊಂಡ ಇವರು, ಕಾರ್ಮಿಕರಿಗೆ ಸಂಬಳ ಆದ ದಿನ, ರಾತ್ರಿ ವೇಳೆ ಹೊಂಚು ಹಾಕಿ ಮಾರಾಕಾಸ್ತ್ರ ತೋರಿಸಿ ಹೆದರಿಸುತ್ತಿದ್ದರು. ಅವರಿಂದ ಹಣ ಮತ್ತು ಮೊಬೈಲ್ ಸುಲಿಗೆ ಮಾಡುತ್ತಿದ್ದರು. ಸುಲಿಗೆ ಮಾಡಿದ ಹಣದಲ್ಲಿ ಮೋಜು–ಮಸ್ತಿ ಮಾಡುತ್ತಿದ್ದರು” ಎಂದು ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ತಿಳಿಸಿದ್ದಾರೆ.
