ಸಿನಿಮಾ ತಾರೆಯರು, ಪ್ರಭಾವಿ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಕ್ರೀಡಾ ಪಟುಗಳು ಸೇರಿದಂತೆ ಜಗತ್ತಿನಾದ್ಯಂತ ಟ್ವಿಟರ್ ಬಳಸುತ್ತಿದ್ದ ಗಣ್ಯರ ಅಧಿಕೃತ ಖಾತೆಗಳಿಗೆ ಸಾಂಕೇತಿಕವಾಗಿ ನೀಡಲಾಗಿದ್ದ ಬ್ಲೂಟಿಕ್ ಚಿಹ್ನೆಯನ್ನು ಟ್ವಿಟರ್ ಸಂಸ್ಥೆ ಏಕಾಏಕಿಯಾಗಿ ಹಿಂಪಡೆದುಕೊಂಡಿದೆ. ಈ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಅಧಿಕೃತ ಖಾತೆಯಿಂದ ಬ್ಲೂಟಿಕ್ ಮಾಯವಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, “ಇಷ್ಟು ದಿನಗಳ ಕಾಲ ಬ್ಲೂಟಿಕ್ ಹೊಂದಿದ್ದು ಬಹಳ ಖುಷಿ ನೀಡಿತ್ತು. ಬ್ಲೂಟಿಕ್ ಹೊರತಾಗಿಯೂ ಇನ್ನು ಮುಂದೆ ನನ್ನ ಜನರ ಜೊತೆಗಿನ ಚರ್ಚೆ ನಿರಂತರವಾಗಿ ಸಾಗಲಿದೆ. ಬೈ.. ಬೈ.. ಬ್ಲೂಟಿಕ್” ಎಂದಿದ್ದಾರೆ.
ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ರಜನಿಕಾಂತ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಚಿರಂಜೀವಿ, ಶಿವರಾಜ್ ಕುಮಾರ್, ಯಶ್, ದಳಪತಿ ವಿಜಯ್ ಸೇರಿದಂತೆ ಬಹುತೇಕ ನಟ, ನಟಿಯರ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ಮಾಯವಾಗಿದೆ.
ಇತ್ತೀಚೆಗೆ ಟ್ವಟಿರ್ ಸಂಸ್ಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ಖ್ಯಾತ ಉದ್ಯಮಿ ಎಲಾನ್ ಮಸ್ಕ್, ʼಟ್ವಿಟರ್ ಬ್ಲೂʼ ಎಂಬ ಹೊಸ ಹೊಸ ʼಫೀಚರ್ʼ ಅನ್ನು ಪರಿಚಯಿಸಿದ್ದರು. ಇಷ್ಟು ದಿನಗಳ ಕಾಲ ಟ್ವಿಟರ್‌ನಲ್ಲಿ ಗಣ್ಯರು, ಸೆಲೆಬ್ರಿಟಿಗಳಿಗೆ ಮಾತ್ರ ಸಿಮಿತವಾಗಿದ್ದ ಬ್ಲೂಟಿಕ್ ಚಿಹ್ನೆಯನ್ನು ಜನ ಸಾಮಾನ್ಯರು ಕೂಡ ಹೊಂದಬಹುದು ಎಂದು ಟ್ವಿಟರ್ ಸಂಸ್ಥೆ ಘೋಷಿಸಿತ್ತು. ಬ್ಲೂಟಿಕ್ ಹೊಂದಲು ತಿಂಗಳಿಗೆ 900 ಮತ್ತು ವರ್ಷಕ್ಕೆ 9,400 ಚಂದಾ ನಿಗದಿ ಮಾಡಲಾಗಿತ್ತು. ಈ ಫೀಚರ್‌ಗೆ ನೆಟ್ಟಿಗರಿಂದ ಉತ್ತಮ ಸ್ಪಂದನೆ ಕೂಡ ದೊರಕಿತ್ತು. ಇದಾದ ಬೆನ್ನಲ್ಲೇ ಜಗತ್ತಿನಾದ್ಯಂತ ಗಣ್ಯರಿಗೆ ಉಚಿತವಾಗಿ ನೀಡಲಾಗಿದ್ದ ಬ್ಲೂಟಿಕ್ ಸೇವೆಯನ್ನು ಹಿಂಪಡೆದುಕೊಂಡಿರುವ ಟ್ವಿಟರ್ ಸಂಸ್ಥೆ, ಚಂದಾದಾರಿಕೆ ಹೊಂದುವಂತೆ ಸೂಚಿಸಿದೆ.

ಕಮಲ್ ಹಾಸನ್ ಮತ್ತು ಸೂರ್ಯ ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮ್ಮ ಅಧಿಕೃತ ಖಾತೆಗಳಿಂದ ಬ್ಲೂಟಿಕ್ ಕಾಣೆಯಾಗುತ್ತಲೇ, ʼಟ್ವಿಟರ್ ಬ್ಲೂʼ ಫೀಚರ್ ಬಳಸಿ, ಹಣ ಪಾವತಿಸಿ ಹೊಸದಾಗಿ ಬ್ಲೂಟಿಕ್ ಚಂದಾದಾರಿಕೆಯನ್ನು ಪಡೆದುಕೊಂಡಿದ್ದಾರೆ. ಟ್ವಿಟರ್ ಮಾದರಿಯಲ್ಲೇ ʼಫೇಸ್‌ಬುಕ್ʼ ಮತ್ತು ʼಇನ್‌ಸ್ಟಾಗ್ರಾಂʼ ಮಾಲೀಕತ್ವ ಹೊಂದಿರುವ ʼಮೆಟಾʼ ಸಂಸ್ಥೆ ಕೂಡ ಈ ಹಿಂದೆ ಚಂದಾದಾರಿಕೆಯ ಆಧಾರದ ಮೇಲೆ ʼಬ್ಲೂಟಿಕ್ʼ ನೀಡುವ ʼಫೀಚರ್ʼ ಪರಿಚಯಿಸಿತ್ತು. ಇದೀಗ ʼಫೇಸ್‌ಬುಕ್ʼ ಮತ್ತು ʼಇನ್‌ಸ್ಟಾಗ್ರಾಂʼನಲ್ಲೂ ಸೆಲೆಬ್ರಿಟಿಗಳ ಖಾತೆಯಿಂದ ಬ್ಲೂಟಿಕ್ ಮಾಯವಾಗಲಿದೆಯೇ ಎಂಬ ಚರ್ಚೆ ಜೋರಾಗಿದೆ.