ದೇಶದ ಕಾನೂನು ಹಾಗೂ ಸಾಮಾಜಿಕ ಭದ್ರತೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್, ಗೃಹ ರಕ್ಷಕ ಸೇರಿದಂತೆ ವಿವಿಧ ರಕ್ಷಣಾ ಇಲಾಖೆಯಲ್ಲಿನ ಸಿಬ್ಬಂದಿಗಳು ತಾವು ಧರಿಸುವ ಸಮವಸ್ತ್ರಗಳಿಗೆ ಸಮಾಜದಲ್ಲಿ ಗೌರವ ತರುವ ಬದ್ಧತೆಯನ್ನು ಇರಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ ಕೆ ಹೇಳಿದರು.
ಉಡುಪಿ ಜಿಲ್ಲಾ ಗೃಹ ರಕ್ಷಕ ದಳ ಕಚೇರಿಯಲ್ಲಿ ಶುಕ್ರವಾರ ನಡೆದ ವಾರ್ಷಿಕ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ತರಬೇತಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಗೃಹ ರಕ್ಷಕ ದಳ ಸಮಾದೇಷ್ಟರಾದ ಎಸ್ ಟಿ ಸಿದ್ದಲಿಂಗಪ್ಪ ಅವರು ಮಾತನಾಡಿ, “ಇಲಾಖೆಯಲ್ಲಿ ನೀಡುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಗತ್ಯ ತರಬೇತಿ ಪಡೆದುಕೊಳ್ಳಲು ಗೃಹ ರಕ್ಷಕರು ಹಾಗೂ ಗೃಹ ರಕ್ಷಕಿಯರು ಉತ್ಸುಕರಾಗಬೇಕು. ಜಿಲ್ಲಾ ಕಚೇರಿ ಹಾಗೂ ಜಿಲ್ಲೆಯಲ್ಲಿ ಗೃಹ ರಕ್ಷಕ ಇಲಾಖೆಗೆ ಕಾಯಕಲ್ಪ ನೀಡುವ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ರಾಜ್ಯದ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಲ್ಲಿ ಓರ್ವರಾಗಿರುವ ಎಸ್ ಪಿ ಡಾ ಅರುಣ ಕೆ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿರುವುದು ಶಾಶ್ವತವಾಗಿ ತರಬೇತಿಗಳ ನೆನಪಿನಲ್ಲಿ ಉಳಿಯುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಮುಂಡರಗಿ ತಾಲೂಕು ಪಂಚಾಯತ್ ವಿಶಿಷ್ಟ ನಡೆ; ಮದುವೆ ಮನೆಯಲ್ಲಿ ಮತದಾನ ಜಾಗೃತಿ
ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ ಸಿ ಹಾಗೂ ಜಿಲ್ಲಾ ಸಿವಿಲ್ ಡಿಫೆನ್ಸ್ ಇಲಾಖೆಯ ಕಮಾಂಡಿಂಗ್ ಅಧಿಕಾರಿ ಡಾ ವಿಜೇಂದ್ರ ರಾವ್ ಮಾತನಾಡಿದರು.
ಜಿಲ್ಲಾ ತರಬೇತು ಅಧಿಕಾರಿ ಚಂದ್ರಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ನಿರೂಪಿಸಿದರು, ಬೈಂದೂರು ಘಟಕಾಧಿಕಾರಿ ರಾಘವೇಂದ್ರ ಎನ್ ವಂದಿಸಿದರು.
