ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ

Date:

Advertisements
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇಡಿ ಕೈಗೊಂಡ ಕ್ರಮಗಳು- ವಿರೋಧಿಗಳನ್ನು ಹತ್ತಿಕ್ಕಲು, ಬಾಂಡ್ ಮೂಲಕ ದೇಣಿಗೆ ಸಂಗ್ರಹಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸಿದ ವಿವಿಧ ತಂತ್ರಗಳ ಒಂದು ಭಾಗ. ಪಿಟಿಐ ಸುದ್ದಿ ಸಂಸ್ಥೆಯ ದತ್ತಾಂಶದ ಹೋಲಿಕೆ ಮತ್ತು ಭ್ರಷ್ಟರೆಲ್ಲ ಬಿಜೆಪಿ ಸೇರಿದ್ದು ಅದನ್ನು ಸಾಬೀತುಪಡಿಸಿದೆ. ಇದು ಇಡಿ ಎಂಬ ಸ್ವಾಯತ್ತ ಸರ್ಕಾರಿ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ ಮೋದಿಯವರ ‘ಮಹಾನ್’ ಸಾಧನೆ…

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ, ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಇತ್ತೀಚಿಗೆ ‘ದಿಲ್ ಸೇ ವಿಥ್ ಕಪಿಲ್ ಸಿಬಲ್’ ಎಂಬ ಯೂ ಟ್ಯೂಬ್ ಚಾನೆಲ್ ಮೂಲಕ ದೇಶದ ಗಂಭೀರ ಸಮಸ್ಯೆಗಳ ಕುರಿತು ಚರ್ಚಿಸುತ್ತಾರೆ. ಅಂಥದ್ದೇ ಒಂದು ಚರ್ಚೆಗೆ ಆಗಮಿಸಿದ್ದ ಪಶ್ಚಿಮ ಬಂಗಾಳದ ತೃಣಮೂಲ್ ಕಾಂಗ್ರೆಸ್ಸಿನ ಸಂಸದ ಡೆರೆಕ್ ಒಬ್ರಿಯಾನ್, ಮಾತಿನ ಮಧ್ಯೆ, ಮೋದಿಯವರ ಹತ್ತುವರ್ಷಗಳ ಅವಧಿಯಲ್ಲಿ ಜಾರಿ ನಿರ್ದೇಶನಾಲಯದ ಕಾರ್ಯವೈಖರಿ ಕುರಿತು ‘ಇಡಿ ಅಂದ್ರೆ ಎಲೆಕ್ಷನ್ ಡ್ಯೂಟಿ’ ಎಂದರು.

ಇದು ಒಂದು ಗಂಭೀರ ಆರೋಪ. ಅದನ್ನು ಅವರು ತಮಾಷೆಗಾಗಿ ಹೇಳಿದ್ದಲ್ಲ. ಕಳೆದ ಹತ್ತು ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ(ಎನ್ಫೋರ್‍ಸ್‌ಮೆಂಟ್ ಡೈರೆಕ್ಟರೇಟ್-ಇಡಿ)ದ ಕಾರ್ಯವೈಖರಿಯನ್ನು ಖುದ್ದಾಗಿ ಕಂಡು ಹೇಳಿದ್ದು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ, ‘ಇಡಿ ಈಗ ಸ್ವಾಯತ್ತ ಸಂಸ್ಥೆಯಾಗಿ ಉಳಿದಿಲ್ಲ, ಬಿಜೆಪಿ ಪಕ್ಷದ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಕಳೆದ ಹತ್ತು ವರ್ಷಗಳಲ್ಲಿ ವಿಪಕ್ಷ ನಾಯಕರ ಮೇಲೆ ನಡೆದ ಇಡಿ ದಾಳಿ ಸಾಕ್ಷಿ. ವಿಪಕ್ಷಗಳು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣಸಬೇಕಿರುವುದು ಮಾತ್ರವಲ್ಲ, ತನಿಖಾ ಸಂಸ್ಥೆಗಳ ವಿರುದ್ಧವೂ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದ್ದರು.

Advertisements

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್-ಪಿಎಂಎಲ್‌ಎ) ಅನ್ನು 2002ರಲ್ಲಿ ಜಾರಿಗೊಳಿಸಲಾಗಿದೆ. ತೆರಿಗೆ ವಂಚನೆ, ಕಪ್ಪು ಹಣ ಮತ್ತು ಅಕ್ರಮ ಹಣ ವರ್ಗಾವಣೆ ಕುರಿತ ಗಂಭೀರ ಅಪರಾಧಗಳ ಬಗ್ಗೆ ಕ್ರಮ ಕೈಗೊಳ್ಳಲಿಕ್ಕಾಗಿ 2005ರಿಂದ ಪಿಎಂಎಲ್‌ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದನ್ನು ಜಾರಿಗೊಳಿಸುವ ತನಿಖಾ ಸಂಸ್ಥೆಯಾಗಿ ಜಾರಿ ನಿರ್ದೇಶನಾಲಯ(ಇಡಿ) ಕಾರ್ಯ ನಿರ್ವಹಿಸುತ್ತದೆ.

ಕಳೆದ ವಾರ ಪಿಟಿಐ ಸುದ್ದಿ ಸಂಸ್ಥೆಯು ಜಾರಿ ನಿರ್ದೇಶನಾಲಯದ 2005ರಿಂದ 2024ರವರೆಗಿನ ದತ್ತಾಂಶವನ್ನು ಪಡೆದು, ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಅವಧಿಯಲ್ಲಿನ ದತ್ತಾಂಶವನ್ನು ಹೋಲಿಕೆ ಮಾಡಿದೆ. ಕಳೆದ ಹತ್ತು ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ, ಜಪ್ತಿ, ವಿಚಾರಣೆ ಮತ್ತು ಶಿಕ್ಷೆ ತೀವ್ರಗೊಂಡಿರುವುದನ್ನು ಈ ವಿಶ್ಲೇಷಣೆಯು ಎತ್ತಿ ತೋರಿಸುತ್ತದೆ.

ಜುಲೈ 2005ರಿಂದ ಮಾರ್ಚ್ 2014ರವರೆಗಿನ ಒಂಬತ್ತು ವರ್ಷಗಳ ಅವಧಿಯಲ್ಲಿ, ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ, 1,797 ಪಿಎಂಎಲ್ಎ ದೂರುಗಳು ದಾಖಲಾಗಿವೆ. ಇಡಿ ಅಧಿಕಾರಿಗಳು 5,086.43 ಕೋಟಿ ರೂ. ಜಪ್ತಿ ಮಾಡಿ, 43 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. 29 ಮಂದಿಯ ಬಂಧನವಾಗಿದ್ದು, ಯಾವ ಪ್ರಕರಣದಲ್ಲಿ ಯಾರಿಗೂ ಶಿಕ್ಷೆ ಆಗಿಲ್ಲ.

ಆದರೆ 2014ರಿಂದ 2024ರ ಅವಧಿಯಲ್ಲಿ, ಕಳೆದ 10 ವರ್ಷಗಳಲ್ಲಿ, ಮೋದಿಯವರ ಆಡಳಿತದಲ್ಲಿ 5,155 ಪಿಎಂಎಲ್‌ಎ ಪ್ರಕರಣಗಳು ದಾಖಲಾಗಿವೆ. ಇಡಿ ಅಧಿಕಾರಿಗಳು 7,264 ದಾಳಿಗಳನ್ನು ನಡೆಸಿ ಒಟ್ಟು 1,21,618 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿ, 2,310 ಕೋಟಿಗೂ ಹೆಚ್ಚಿನ ಮೌಲ್ಯದ ನಗದನ್ನು ವಶಪಡಿಸಿಕೊಳ್ಳಲಾಗಿದೆ. 755 ಜನರನ್ನು ಬಂಧಿಸಿ, 63 ಮಂದಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಂಡಿದೆ.

ಅಂದರೆ, ಯುಪಿಎ ಸರ್ಕಾರದ ಒಂಭತ್ತು ವರ್ಷಗಳ ಅವಧಿಯಲ್ಲಿ ಅಕ್ರಮ ಹಣ ವರ್ಗಾವಣೆ ದೂರುಗಳು, ದಾಳಿಗಳು, ಜಪ್ತಿ, ವಿಚಾರಣೆ ಮತ್ತು ಶಿಕ್ಷೆ ಅಲ್ಪ ಪ್ರಮಾಣದಲ್ಲಿದ್ದರೆ; ಎನ್‌ಡಿಎ ಸರ್ಕಾರದ ಅವಧಿಯ ಹತ್ತು ವರ್ಷಗಳಲ್ಲಿ ಅದು 86 ಪಟ್ಟು ಹೆಚ್ಚಳವಾಗಿದೆ.

ಇಲ್ಲಿ ಎರಡು ಪ್ರಶ್ನೆಗಳು ಉದ್ಭವವಾಗುತ್ತವೆ. ಒಂದು, ಮೋದಿಯವರ ಆಡಳಿತದಲ್ಲಿ ದೇಶದಲ್ಲಿ ಅಕ್ರಮ ಚಟುವಟಿಕೆಗಳು- ಕಪ್ಪು ಹಣ, ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಪ್ರಕರಣಗಳು ಹೆಚ್ಚಾಗಿವೆ. ಅವುಗಳನ್ನು ನಿಯಂತ್ರಿಸಿ ಉತ್ತಮ ಆಡಳಿತ ನೀಡುವಲ್ಲಿ ಪ್ರಧಾನಿ ಮೋದಿಯವರು ವಿಫಲರಾಗಿದ್ದಾರೆ.

ಇಲ್ಲ, ಸ್ವಾಯತ್ತ ಸರ್ಕಾರಿ ತನಿಖಾ ಸಂಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ, ವಿರೋಧಿಗಳನ್ನು ಬಗ್ಗುಬಡಿಯಲು, ಅವರಿಂದ ವಂತಿಗೆ ವಸೂಲಿ ಮಾಡಲು, ಪಕ್ಷದ ಖಜಾನೆ ತುಂಬಿಕೊಳ್ಳಲು ದಾಳಿಯ ನೆಪದಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ.

ಯಾವುದು ಸತ್ಯ?

ಸದ್ಯಕ್ಕೆ ನಮ್ಮ ಕಣ್ಮುಂದೆ ಕಾಣುತ್ತಿರುವುದು, ಕಳೆದ ಹತ್ತು ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ ನಡೆಸಿರುವ ದಾಳಿಗಳಲ್ಲಿ ಶೇ. 95ರಷ್ಟು ವಿರೋಧ ಪಕ್ಷಗಳ ನಾಯಕರ ಮೇಲೆ ನಡೆದ ದಾಳಿಗಳಾಗಿವೆ. ಇಡಿಯ ದಾಳಿ, ವಿಚಾರಣೆ ಮತ್ತು ಜಪ್ತಿಯನ್ನು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಮತ್ತು ಪ್ರಚಾರ ಸಿಗುವಂತೆ ನೋಡಿಕೊಳ್ಳಲಾಗಿದೆ. ಆ ಮೂಲಕ ವಿರೋಧ ಪಕ್ಷವೆಂದರೆ ಲೂಟಿಕೋರರ ಪಕ್ಷ, ಭ್ರಷ್ಟರ ಗುಂಪು ಎನ್ನುವುದನ್ನು ಜನಮಾನಸದಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗಿದೆ.

ಆದರೆ, ಕಾಲಾನಂತರ ಆ ಭ್ರಷ್ಟ ರಾಜಕಾರಣಿಗಳು- ಕಾಂಗ್ರೆಸ್‌ನಿಂದ 10, ಶಿವಸೇನಾ-ಎನ್‌ಸಿಪಿಯಿಂದ 8, ತೃಣಮೂಲ್ ಕಾಂಗ್ರೆಸ್ಸಿನಿಂದ 3, ಟಿಡಿಪಿಯಿಂದ 2, ಸಮಾಜವಾದಿ ಪಾರ್ಟಿ ಮತ್ತು ವೈಎಸ್ಆರ್‍‌ಸಿಪಿಯಿಂದ ತಲಾ ಒಬ್ಬರು- ಅಂದರೆ 25 ಜನರಲ್ಲಿ 23 ಜನ ಬಿಜೆಪಿ ಸೇರಿದ್ದಾರೆ. ಸೇರಿದಾಕ್ಷಣ ಅವರ ಮೇಲಿರುವ ಮೊಕದ್ದಮೆಗಳನ್ನು ಕೈಬಿಡಲಾಗಿದೆ ಅಥವಾ ಮುಂದೂಡಲಾಗಿದೆ.

ಹಾಗೆಯೇ ಕಾರ್ಪೊರೇಟ್ ಸಂಸ್ಥೆಗಳು, ದೊಡ್ಡ ದೊಡ್ಡ ಗುತ್ತಿಗೆದಾರರು, ಫಾರ್ಮಾ ಕಂಪನಿಗಳು, ಲಾಟರಿ ಏಜೆಂಟರು, ರಿಯಲ್ ಎಸ್ಟೇಟ್ ಬಿಲ್ಡರ್‍‌ಗಳ ಮೇಲೆಯೂ ಇಡಿ ದಾಳಿ ಮಾಡಿಸಲಾಗಿದೆ. ಅವರು ಬಿಜೆಪಿಗೆ ಶರಣಾದರೆ, ಚುನಾವಣಾ ಬಾಂಡ್ ಖರೀದಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳದಂತೆ ನೋಡಿಕೊಳ್ಳಲಾಗಿದೆ. ದಾಳಿಗೊಳಗಾದವರಿಂದ ಬಿಜೆಪಿ ಬಾಂಡ್ ಹೆಸರಲ್ಲಿ ಸಂಗ್ರಹಿಸಿರುವ ಮೊತ್ತ ಎಂಟು ಸಾವಿರ ಕೋಟಿಗೂ ಅಧಿಕ. ಇದು ಪ್ರಪಂಚದ ಅತಿ ದೊಡ್ಡ ಹಗರಣವೆಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಹೇಳಿದ್ದಾರೆ.

ಕಳೆದ ಒಂದು ದಶಕದ ಅವಧಿಯಲ್ಲಿ ಇಡಿ ಕೈಗೊಂಡ ಕ್ರಮಗಳು, ವಿರೋಧಿಗಳನ್ನು ಹತ್ತಿಕ್ಕಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸಿದ ವಿವಿಧ ತಂತ್ರಗಳ ಒಂದು ಭಾಗ ಎನ್ನುವುದು ಇದರಿಂದ ನಿಚ್ಚಳವಾಗುತ್ತದೆ. ಆದರೆ, ಇಡಿ ನಡೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ ಮತ್ತು ಬಿಜೆಪಿ, ಈ ಸಂಸ್ಥೆಯು ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ, ಪ್ರಕರಣಗಳ ಸತ್ಯಾಸತ್ಯತೆಯನ್ನು ಆಧರಿಸಿ ತನಿಖೆ ನಡೆಸುತ್ತದೆ ಎಂದು ಹೇಳುತ್ತಲೇ ಇದೆ.

ದೇಶದ ಸ್ವಾಯತ್ತ ತನಿಖಾ ಸಂಸ್ಥೆಗಳ ಘನತೆಯನ್ನು ಮಣ್ಣುಪಾಲು ಮಾಡಿದ ‘ಕೀರ್ತಿ’ ಪ್ರಧಾನಿ ಮೋದಿಯವರಿಗೆ ಸಲ್ಲಲೇಬೇಕು. ‘ಇಡಿ ಎಂದರೆ ಎಲೆಕ್ಷನ್ ಡ್ಯೂಟಿ’ ಎಂದು ನಗೆಪಾಟಲಿಗೀಡಾಗುವಂತೆ ಮಾಡಿದ ಮೋದಿಯವರ ‘ಮಹಾನ್ ಸಾಧನೆ’ಯನ್ನು ಮತದಾರರು ನೆನಪು ಮಾಡಿಕೊಂಡು ಮತ ಚಲಾಯಿಸಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X