ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಜೈಲಿನಲ್ಲಿ ಕೈದಿಗಳ ನಡುವೆ ಶುಕ್ರವಾರ ಘರ್ಷಣೆ ನಡೆದಿದ್ದು ಇಬ್ಬರು ಕೈದಿಗಳು ಸಾವನ್ನಪ್ಪಿದ್ದಾರೆ ಮತ್ತು ಇನ್ನೋರ್ವ ಖೈದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟಿಯಾಲ ರೇಂಜ್‌ನ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಸುರೀಂದರ್ ಸಿಂಗ್ ಸೈನಿ ಈ ಬಗ್ಗೆ ಮಾಹಿತಿ ನೀಡಿದ್ದು, “ಬ್ಯಾರಕ್‌ನಲ್ಲಿ ಇರಿಸಲಾಗಿದ್ದ ನಾಲ್ವರು ಕೈದಿಗಳನ್ನು ರಾತ್ರಿ 7 ಗಂಟೆಗೆ ಸೆಲ್‌ಗೆ ಸ್ಥಳಾಂತರಿಸುವಾಗ ಒಂಬತ್ತು ಕೈದಿಗಳು ದಾಳಿ ಮಾಡಿದ್ದಾರೆ. ಘರ್ಷಣೆಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದರು.
“ಕೈದಿಗಳನ್ನು ಎಣಿಕೆ ಮಾಡಿ ಅವರವರ ಸೆಲ್‌ಗಳಿಗೆ ಸ್ಥಳಾಂತರಿಸುವಾಗ, ಒಂಬತ್ತು ಕೈದಿಗಳು ಬ್ಯಾರಕ್‌ನೊಳಗೆ ಹೋಗಿ ನಾಲ್ಕು ಕೈದಿಗಳ ಮೇಲೆ ದಾಳಿ ಮಾಡಿದರು. ಹರಿತವಾದ ಆಯುಧಗಳಿಂದ ಗಂಭೀರ ದಾಳಿ ನಡೆದಿದೆ” ಎಂದು ಸುರೀಂದರ್ ಸಿಂಗ್ ಸೈನಿ ತಿಳಿಸಿದರು.
ಇದನ್ನು ಓದಿದ್ದೀರಾ? ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಕೊಲ್ಲಲು ಸಂಚು: ಎಎಪಿ ಗಂಭೀರ ಆರೋಪ
“ಪೊಲೀಸರು ಕೂಡಲೇ ಘರ್ಷಣೆ ನಿಲ್ಲಿಸಿದರೂ ಇಬ್ಬರು ಕೈದಿಗಳು ಸಾವನ್ನಪ್ಪಿದ್ದಾರೆ. ಮತ್ತಿಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪೂರ್ಣ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಸಾವನ್ನಪ್ಪಿದ ಕೈದಿಗಳನ್ನು ಹರ್ಷ್ ಮತ್ತು ಧರ್ಮೇಂದರ್ ಎಂದು ಗುರುತಿಸಲಾಗಿದ್ದು, ಗಗನ್‌ದೀಪ್ ಸಿಂಗ್ ಮತ್ತು ಮೊಹಮ್ಮದ್ ಸೆಹ್ವಾಜ್ ಗಾಯಗೊಂಡಿದ್ದಾರೆ.
ಸಂಗ್ರೂರ್‌ನ ಸರ್ಕಾರಿ ಆಸ್ಪತ್ರೆಯ ಡಾ ಕರಣ್‌ದೀಪ್ ಕಹೆಲ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, “ನಾಲ್ವರು ಕೈದಿಗಳನ್ನು ಆಸ್ಪತ್ರೆಗೆ ಕರೆತರಲಾಗಿದೆ. ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಗಾಯಗೊಂಡ ಇಬ್ಬರು ಕೈದಿಗಳನ್ನು ಪಟಿಯಾಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈದಿಗಳ ಬೆನ್ನು, ತಲೆ, ಕೈ ಮತ್ತು ಕಿವಿಗೆ ಗಾಯಗಳಾಗಿವೆ. ಚೂಪಾದ ವಸ್ತುವಿನಿಂದ ಹಲ್ಲೆ ಮಾಡಲಾಗಿದೆ” ಎಂದು ತಿಳಿಸಿದರು.