ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ 2085ಮತಗಟ್ಟೆಗಳಲ್ಲಿ ಮುಕ್ತ, ಶಾಂತಿಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವ ಸಲುವಾಗಿ ಮೇ 5ರಿಂದ 7ವರೆಗೆ ಜಿಲ್ಲೆಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಿ ವಿಜಯಪುರ ಜಿಲ್ಲಾ ಚುನಾವಣೆ ಅಧಿಕಾರಿ ಟಿ. ಭೂಬಾಲನ್ ಆದೇಶ ಹೊರಡಿಸಿದ್ದಾರೆ.
ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ ಸಮಾರಂಭ ಜರಗಿಸುವುದು ನಿಷೇಧಿಸಿದೆ. ಅದಲ್ಲದೆ ಶತಸ್ತ್ರಗಳನ್ನು ತೆಗೆದುಕೊಂಡು ಸಂಚರಿಸುವುದು, ಮತಗಟ್ಟೆಗಳ 100 ಮೀಟರ್ ಸುತ್ತಮುತ್ತ ರಾಜಕೀಯ ಪಕ್ಷಗಳ ಪೋಸ್ಟರ್, ಬ್ಯಾನರ್ ಹಾಗೂ ಪ್ರಚಾರ, ಸಾರ್ವಜನಿಕವಾಗಿ ಪ್ರಚೋದನಕಾರಿ ಹೇಳಿಕೆ, ವ್ಯಕ್ತಿಗಳ ತೇಜೋವಧೆ ಮಾಡುವುದು, ಮತಗಟ್ಟೆಯ ಸುತ್ತಮುತ್ತ ಧ್ವನಿವರ್ಧಕಗಳನ್ನು ಬಳಸುವುದಕ್ಕೆ ನಿರ್ಬಂಧ ವಿರುತ್ತದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು, ಮೇ 7 ರಂದು ನಡೆಯಲಿರುವ ವಿಜಯಪುರ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ 21 ಅಭ್ಯರ್ಥಿಗಳಿಂದ 35 ನಾಮಪತ್ರಗಳು ಸಲ್ಲಿಕೆಯಾಗಿವೆ. ಎಪ್ರಿಲ್ 12ರಿಂದ 19ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಏಪ್ರಿಲ್ 20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಎಪ್ರಿಲ್ 22ರಂದು ನಾಮಪತ್ರಗಳನ್ನು ಹಿಂದೆ ಪಡೆಯಲು ಅವಕಾಶವಿದೆ.
ಚುನಾವಣಾ ಅಖಾಡಕ್ಕೆ ಬಿಜೆಪಿಯಿಂದ ರಮೇಶ ಜಿಗಜಿಣಗಿ, ಕಾಂಗ್ರೆಸ್ ನಿಂದ ಪ್ರೊ. ರಾಜು ಆಲಗೊರ ನಾಮಪತ್ರ ಸಲ್ಲಿಸಿದ್ದಾರೆ. ಎಸ್ಯುಸಿಐನ ನಾಗಜ್ಯೋತಿ ಬಿ. ಎನ್, ಬಹುಜನ ಸಮಾಜ ಪಾರ್ಟಿಯಿಂದ ಕಲ್ಲಪ್ಪ ತೊರವಿ, ನಕ್ಕಿ ಭಾರತೀಯ ಏಕತಾ ಪಕ್ಷದಿಂದ ರಾಮ ಜಿ ಯಮನಪ್ಪ ಹರಿಜನ, ನ್ಯಾಷನಲ್ ಲೋಕ ತಂತ್ರ ಪಾರ್ಟಿಯಿಂದ ರಾಜು ಪವಾರ್, ಭಾರತೀಯ ಜವಾನ್ ಕಿಸಾನ್ ಪಕ್ಷದಿಂದ ಕುಲಪ್ಪ ಚೌವ್ಹಾಣ, ಭಾರತೀಯ ಜನತಾ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಡಾ. ಬಾಬು ರಾಜೇಂದ್ರ ನಾಯಿಕ ನಾಮಪತ್ರ ಸಲ್ಲಿಸಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗಣಪತಿ ಲಾಲ್ಸಿಂಗ್ ರಾಥೋಡ, ರಾಣಿ ಚೆನ್ನಮ್ಮ ಪಕ್ಷದಿಂದ ಕವಿತಾ ದೀಪಕ ಹಾಗೂ ಹಿಂದುಸ್ಥಾನ ಜನತಾ ಪಕ್ಷದಿಂದ ದೀಪಕ ಉರ್ಫ್ ವೆಂಕಟೇಶ್ವರ ಮಹಾಸ್ವಾಮಿಜಿ, ಭಾರತೀಯ ಜನ ಸಾಮ್ರಾಟ್ ಪಕ್ಷದ ಅಭ್ಯರ್ಥಿಯಾಗಿ ತಾರಾಬಾವಿ ಭೂವಿ, ಜೆಡಿಎಸ್ ಅಭ್ಯರ್ಥಿಯಾಗಿ ದೀಪಕ ಉರ್ಫ್ ಶ್ರೀವೆಂಕಟೇಶ್ವರ ಮಹಾ ಸ್ವಾಮೀಜಿ, ಪಕ್ಷೇತರ ಅಭ್ಯರ್ಥಿಗಳಾಗಿ ಸಂಗಪ್ಪ ಲಮಾಣಿ, ಚಂದು ಲಮಾಣಿ, ಸೋಮಶೇಖರ ಭಾವಿಕಟ್ಟಿ, ಸಂಗಪ್ಪ ಹುಣಸಿಕಟ್ಟಿ ನಾಮಪತ್ರ ಸಲ್ಲಿಸಿದ ಪ್ರಮುಖರಾಗಿದ್ದಾರೆ.
