ಈ ಬಾರಿ ಚಿತ್ರದುರ್ಗ ಕ್ಷೇತ್ರದಾದ್ಯಂತ ಭಾರೀ ಕಾಂಗ್ರೆಸ್ ಅಲೆ ಇದ್ದು, ಬೇರೆ ಯಾವ ಅಲೆಗಳಿಲ್ಲ. ಈ ಬಾರಿ ನಮ್ಮ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎಚ್. ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಭಾಗ್ಯಗಳಿಂದ ಸಂತೋಷವಾಗಿದ್ದಾರೆ. ನಮಗೆ ಈ ಸರ್ಕಾರ ಬೇಕು ಎಂದು ಹೇಳುತ್ತಿದ್ದಾರೆ. ಮೋದಿ ಗ್ಯಾರಂಟಿಯಲ್ಲಿ ಜನರಿಗೆ ಉಪಯೋಗವಾಗುವಂತ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಹಿಂದು ಮುಸ್ಲಿಂ ಧರ್ಮದ ಮೇಲೆ ರಾಜಕಾರಣ ಮಾಡದೇ, ಬಡವರಿಗೆ, ರೈತರಿಗೆ ಯುವ ಜನರಿಗೆ ಉಪಯೋಗವಾಗುವಂತ ಕೆಲಸ ಮಾಡಿ, ಇದು ಬಿಟ್ಟು ಹಳೆ ಯೋಜನೆಗಳನ್ನು ಚಾಲ್ತಿ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ, ದೇಶದ ಭದ್ರತೆಯನ್ನು ಕಾಂಗ್ರೆಸ್ ಮಾಡಿದೆ, ಇದನ್ನು ನೀವು ನೋಡಿಕೊಂಡರೆ ಸಾಕು ಎಂದು ತಿಳಿಸಿದರು.
ಜನರ ಮತ ಕೇಳುವ ನೈತಿಕ ಹಕ್ಕುಬಿಜೆಪಿಯವರಿಗೆ ಇಲ್ಲ. ನಾವು ಚುನಾವಣೆ ಪೂರ್ವದಲ್ಲಿ ಕೊಟ್ಟಿದ್ದ ಭರವಸೆಯಂತೆ ನುಡಿದಂತೆ ನಡೆದಿದ್ದೇವೆ. ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಇಂದಿರಾ ಗಾಂಧಿಯ ರೀತಿಯಲ್ಲಿ ರಾಷ್ಟ್ರದ ಗಮನ ಸೆಳೆಯುತ್ತಿರುವ ಪ್ರಿಯಾಂಕ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು, ಇದೇ 23 ರಂದು ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಬಹಿರಂಗ ಸಭೆಯಲ್ಲಿ ಬಿ.ಎನ್. ಚಂದ್ರಪ್ಪ ಅವರ ಪರ ಮತಯಾಚನೆ ಮಾಡಲಿದ್ದಾರೆ ಎಂದರು.
ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬಂದು ಭಾಗವಹಿಸಬೇಕೆಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ನಮ್ಮದೆ ಸಂಪ್ರಾದಾಯಿಕ ಮತಗಳಿವೆ, ಅವುಗಳ ಜೊತೆಗೆ ತಪ್ಪಾಗಿದ್ದರೆ, ಸರಿಪಡಿಸಿಕೊಂಡು ಮುನ್ನೆಡೆಯುತ್ತೇವೆ ಎಂದರು.
ಇದೇ ಸಮಯದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಚಿತ್ರದುರ್ಗ ನಗರಸಭೆಯ ಕಾಂಗ್ರೆಸ್ ನ ಯಾವ ಸದಸ್ಯರೂ ಕೂಡ ಬಿಜೆಪಿಗೆ ಸೇರಿಲ್ಲ. ಇನ್ನು ಬಿಜೆಪಿಯವರು ಆರೋಪಿಸಿದಂತೆ ಗ್ಯಾರಂಟಿ ಕಾರ್ಡ್ ನೀಡುವಾಗ ಯಾವುದೇ ಚುನಾವಣೆ ಅಕ್ರಮ ಮಾಡಿಲ್ಲ. ಫಲಾನುಭವಿಗಳ ಹೆಸರು ಬರೆದುಕೊಳ್ಳಲು ಆಧಾರ್ ಕಾರ್ಡ್ ತೆಗೆದುಕೊಂಡು ವಾಪಾಸ್ಸು ನೀಡಲಾಗಿದೆ. ಇನ್ನು ಸ್ಥಳೀಯ ಶಾಸಕರಾದ ವೀರೇಂದ್ರ ಪಪ್ಪಿ ಅವರು ಹಾಗೂ ಕಾರ್ಯಕರ್ತರು, ಮನೆ ಮನೆಗೂ ಭೇಟಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಮುಖಂಡ ಕೃಷ್ಣಮೂರ್ತಿ, ಸಂಪತ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ನರಸಿಂಹ ಮೂರ್ತಿ, ಲಿಡ್ಕರ್ ಮಾಜಿ ಅಧ್ಯಕ್ಷ ಶಂಕರ್, ಡಿ.ಎನ್. ಮೈಲಾರಪ್ಪ, ಇತರರು ಹಾಜರಿದ್ದರು.
