ಹುಬ್ಬಳ್ಳಿಯ ಘಟನೆಯಲ್ಲಿ ಎರಡು ಯುವ ಜೀವಗಳು ತಮ್ಮ ಬದುಕನ್ನು ಕಳೆದುಕೊಂಡಿವೆ. ಕೊಲೆಗಾರ ಬದುಕಿದ್ದೂ ಸತ್ತಂತೆ. ಆತನಿಗೆ ಶಿಕ್ಷೆಯಾಗುತ್ತದೆ; ಆದರೆ, ಆತನ ಕುಟುಂಬಕ್ಕೆ ನಿತ್ಯ ಅವಮಾನದ ಸಾವು. ನೇಹಾ ಮನೆಯವರ ಸಂಕಟ ಕಳೆಯುವಂತದ್ದಲ್ಲ. ಈ ಸಮಯವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವವರ ಬಗ್ಗೆಯೂ ಸಮಾಜ ಎಚ್ಚರದಿಂದಿರಬೇಕು.
ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಆಕೆಯ ಮಾಜಿ ಸಹಪಾಠಿ, ಸ್ನೇಹಿತ ಕಾಲೇಜು ಕ್ಯಾಂಪಸ್‌ನಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆಯಿಂದ ಚುನಾವಣೆಯ ಹೊತ್ತಿನಲ್ಲಿ ಶವ ರಾಜಕಾರಣ ಮಾಡುವವರ ತಟ್ಟೆಗೆ ಮೃಷ್ಟಾನ್ನ ಸಿಕ್ಕಂತಾಗಿದೆ.
ನೇಹಾ ಮತ್ತು ಫಯಾಜ್ ಬಿಸಿಎ ಓದುತ್ತಿದ್ದಾಗ ಮೂರು ವರ್ಷಗಳ ಕಾಲ ಸಹಪಾಠಿಗಳು. ಅಷ್ಟೇ ಅಲ್ಲ ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂಬುದಕ್ಕೆ ವಿಡಿಯೋ, ಫೋಟೋಗಳು ಸಾಕ್ಷಿ ಇವೆ. ಆರೋಪಿ ಫಯಾಜ್‌ನ ತಂದೆ -ತಾಯಿಗೆ ಅವರಿಬ್ಬರು ಪ್ರೀತಿಸುತ್ತಿದ್ದ ವಿಷಯ ಗೊತ್ತಿತ್ತು ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಮಾತ್ರವಲ್ಲ ನೇಹಾಳ ತಂದೆ ನೀಡಿದ ದೂರಿನಲ್ಲೂ ಈ ಬಗ್ಗೆ ಪ್ರಸ್ತಾಪವಿದೆ. ನೇಹಾ ಎಂಸಿಎಗೆ ಸೇರಿದ್ದಾಳೆ. ಫಯಾಜ್ ಕಾಲೇಜಿಗೆ ಹೋಗುತ್ತಿಲ್ಲ. “ಮನೆಯಲ್ಲಿದ್ದು ಬೇಸರವಾಗಿದೆ ಕೆಲಸ ಹುಡುಕುತ್ತೇನೆ ಎಂದು ಐದು ದಿನಗಳ ಹಿಂದೆ ತಿಳಿಸಿ ಮನೆಯಿಂದ ಹೊರಟಿದ್ದಾನೆ” ಎಂದು ಆತನ ತಾಯಿ ಹೇಳಿದ್ದಾರೆ.
“ವಾರದ ಹಿಂದೆ ನೇಹಾಳ ತಂದೆ ನಿರಂಜನ್ ಹಿರೇಮಠ್ ಅವರು ತಮಗೆ ಫೋನ್ ಮಾಡಿ ನಿಮ್ಮ ಮಗನಿಗೆ ನಮ್ಮ ಮಗಳಿಂದ ದೂರವಿರಲು ಹೇಳಿ ಎಂದು ಮನವಿ ಮಾಡಿದ್ದರು. ಅದೇ ಪ್ರಕಾರ ಮಗನಿಗೆ ಬುದ್ದಿ ಹೇಳಿದ್ದೆ. ಇದೆಲ್ಲ ಬೇಡ. ಈಗಾಗಲೇ ದೇಶದಲ್ಲಿ ಲವ್ ಜಿಹಾದ್ ಎಂಬ ಆರೋಪ ನಮ್ಮ ಮೇಲೆ ಬಂದಿದೆ. ನಾನು ಗುರು ಇದ್ದೇನೆ. ಆಕೆಯಿಂದ ದೂರವಿರು ಎಂದಿದ್ದೆ” ಎಂದು ಹೇಳಿದ್ದಾರೆ.

ಮನೆಯಲ್ಲಿ ಮುಸ್ಲಿಂ ಯುವಕನ ಜೊತೆ ಮದುವೆಗೆ ಒಪ್ಪಿಗೆ ಸಿಗದಿರುವ ಕಾರಣ ನೇಹಾ ಫಯಾಜ್ ನನ್ನು ನಿರ್ಲಕ್ಷ್ಯ ಮಾಡಲು ಶುರು ಮಾಡಿದ್ದಾಳೆ. ಅಷ್ಟೇ ಅಲ್ಲ ಮನೆಯಲ್ಲಿ ಆಕೆಗೆ ಬೇರೆ ವರನ ಹುಡುಕಾಟಕ್ಕೆ ಮುಂದಾಗಿದ್ಧಾರೆ. ಇದೆಲ್ಲ ಅರಿತ ಫಯಾಜ್ ಈ ಕೃತ್ಯ ಎಸಗಿದ್ದಾನೆ. ಇಷ್ಟು ಮಾಹಿತಿ ಲಭಿಸಿದೆ. ಆದರೆ, ಬಿಜೆಪಿ ನಾಯಕರು ಲವ್ ಜಿಹಾದ್, ಮತಾಂತರ ಮುಂತಾದ ಅಸಂಗತ ವಿಷಯಗಳನ್ನು ತುರುಕಲು ಯತ್ನಿಸುತ್ತಿದ್ದಾರೆ.
ಇದೇ ಮೊದಲನೆಯದಲ್ಲ, ಕೊನೆಯದೂ ಅಲ್ಲ…
ಪ್ರೀತಿಯ ನಿರಾಕರಣೆ, ಮದುವೆಗೆ ಒಪ್ಪಿಲ್ಲ ಅಂತ ಕೊಲೆ ಮಾಡುವುದು ಇದು ಮೊದಲೂ ಅಲ್ಲ ಕೊನೆಯದೂ ಅಲ್ಲ. ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಬೆಳವಣಿಗೆಯಿದು. ಯುವ ಸಮೂಹವನ್ನು ಕ್ರೌರ್ಯದ ಕಡೆಗೆ ಸಾಗದಂತೆ ಸರಿದಾರಿಗೆ ತರುವ ಬಗೆ ಹೇಗೆ ಎಂದು ಚಿಂತಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಬಿಜೆಪಿ ಎಂಬ ಮತಾಂಧ ಪಕ್ಷಕ್ಕೆ ಮಾತ್ರ ಆರೋಪಿ ಮುಸ್ಲಿಂ ಆಗಿದ್ದರೆ ಭರ್ಜರಿ ಸಂಭ್ರಮ.
ಈ ಸಮಾಜದಲ್ಲಿ ಒಂದೇ ಧರ್ಮದವರಾಗಿದ್ದೂ, ಬೇರೆ ಬೇರೆ ಜಾತಿಯ ಯುವಕ- ಯುವತಿ ಪ್ರೀತಿಸಿದ ಕಾರಣಕ್ಕೆ ಹೆತ್ತವರೇ ಮಕ್ಕಳನ್ನು ಕೊಂದು ಹಾಕಿದ ಉದಾಹರಣೆ ಎಷ್ಟು ಬೇಕು? ದಾಂಪತ್ಯ ಕಲಹ, ಜಮೀನು ವಿವಾದ, ವ್ಯವಹಾರದ ವಿರಸ ಮುಂತಾದ ಕಾರಣಗಳಿಗೆ ಕೊಲೆಗಳಾಗುತ್ತಿವೆ. ಪ್ರೇಮ ವೈಫಲ್ಯ, ಪ್ರೀತಿ-ಮದುವೆ ನಿರಾಕರಣೆ ಎಂಬ ಕಾರಣಕ್ಕೆ ಆಸಿಡ್ ಎರಚುವುದು, ಕೊಲೆ ಮಾಡುವುದು ನಿತ್ಯ ನಡೆಯುತ್ತಿರುವ ವಿದ್ಯಮಾನ. ಪೋಕ್ಸೋದಂತಹ ಕಠಿಣ ಶಿಕ್ಷೆ ಇರುವ ಕಾನೂನು ಬಂದ ನಂತರವೂ ಅದೆಷ್ಟು ಬಾಲಕಿಯರನ್ನು ಕಾಮ ಪಿಶಾಚಿಗಳು ತಿಂದು ತೇಗಿಲ್ಲ? ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಮಠದ ಸ್ವಾಮಿಗಳು, ಶಿಕ್ಷಕರು, ಸಂಬಂಧಿಗಳು ಯಾರಿಂದೆಲ್ಲ ಲೈಂಗಿಕ ಕಿರುಕುಳಗಳಾಗುತ್ತಿವೆ ಎಂದು ಲೆಕ್ಕ ಹಾಕಲಾಗದು. ಇದಕ್ಕೆಲ್ಲ ಸರ್ಕಾರವನ್ನು ದೂಷಣೆ ಮಾಡಿದರೆ ಆಗುತ್ತಾ? ಬದಲಾಗಬೇಕಿರುವುದು ಸಮಾಜ, ನಮ್ಮ ಶಿಕ್ಷಣ ವ್ಯವಸ್ಥೆ. ಒಟ್ಟು ಸಮಾಜದಲ್ಲಿ ಹೆಣ್ಣನ್ನು ನೋಡುವ ಮನಸ್ಥಿತಿ ಬದಲಾಗಬೇಕಿದೆ.
ಹಿಂದೂಗಳ ಜೀವ ಮಾತ್ರ ಅಮೂಲ್ಯವೇ?
ಕೆಲ ತಿಂಗಳ ಹಿಂದೆ ಉಡುಪಿಯ ನೇಜಾರಿನ ಮುಸ್ಲಿಂ ಮನೆಯೊಂದಕ್ಕೆ ನುಗ್ಗಿ ತಾಯಿ ಮತ್ತು ಮೂವರು ಮಕ್ಕಳನ್ನು ಚಾಕೂವಿನಿಂದ ಇರಿದು ಕೊಂದ ಪ್ರವೀಣ್ ಚೌಗುಲೆ ಏರ್ ಇಂಡಿಯಾದ ನೌಕರ. ತನ್ನ ಸಹೋದ್ಯೋಗಿ ಯುವತಿಯ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸಿದ್ದ. ಆಕೆ ನಿರಾಕರಿಸಿದ್ದಕ್ಕೆ ತನ್ನ ಮಂಗಳೂರಿನ ಮನೆಯಿಂದ ಉಡುಪಿಯ ಯುವತಿಯ ಮನೆಗೆ ಬೆಳ್ಳಂಬೆಳಗ್ಗೆ ಬಂದು ಕ್ಷಣಾರ್ಧದಲ್ಲಿ ನಾಲ್ವರನ್ನು ಕೊಂದು ಪರಾರಿಯಾಗಿದ್ದ ಪ್ರವೀಣ್‌ಗೆ ಮದುವೆಯಾಗಿ ಒಂದು ಮಗುವೂ ಇದೆ. ಆದರೆ ಆ ಘಟನೆ ನಡೆದಾಗ ಉಡುಪಿಯ ಶಾಸಕ ಯಶಪಾಲ ಸುವರ್ಣ, ಸಂಸದೆ ಶೋಭಾ ಕರಂದ್ಲಾಜೆ ಅವರು ಮರುಗಿಲ್ಲ. ಅವರಿಗೆ ರೋಷ ಉಕ್ಕಿಲ್ಲ. ಆ ಕುಟುಂಬಕ್ಕೊಂದು ಸಾಂತ್ವನ ಹೇಳಲೂ ಟೈಂ ಇರಲಿಲ್ಲ. ಈಗ ಗಲ್ಲು, ಶೂಟೌಟ್ ಎಂದು ಬೊಬ್ಬಿರಿಯುತ್ತಿರುವವರು ಆಗ ದೀರ್ಘ ಮೌನಕ್ಕೆ ಜಾರಿದ್ದರು.

ಮಸೂದ್, ಫಾಜಿಲ್ ಕೊಲೆ; ಪರಿಹಾರ ಕೊಡಬಾರದೆಂದು ಯಾವ ಕಾನೂನು ಹೇಳಿತ್ತು?
ವೈಯಕ್ತಿಕ ನೆಲೆಯಲ್ಲಿ ನಡೆಯುವ ಕೊಲೆಗಳಿಗೆ ಸರ್ಕಾರ ಕಾರಣ, ಅಥವಾ ಕಾನೂನು ದುರವಸ್ಥೆ ಕಾರಣ ಎಂದಾದರೆ ಅದು ಎಲ್ಲಾ ಸರ್ಕಾರಗಳಿಗೂ ಅನ್ವಯವಾಗಬೇಕಲ್ವಾ? ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಇಂತಹ ಘಟನೆಗಳು ನಡೆದಿಲ್ಲವೇ? ಬಿಜೆಪಿ ಸರ್ಕಾರ ಇದೆ ಎಂಬ ಭಯದಿಂದ ಯಾರೂ ಅಪರಾಧವನ್ನೇ ಮಾಡಿಲ್ಲವೇ? ಬಿಜೆಪಿ ಕಾರ್ಯಕರ್ತ ಶಿವಮೊಗ್ಗದ ಹರ್ಷ ಮತ್ತು ಸುಳ್ಯದ ಪ್ರವೀಣ್ ನೆಟ್ಟಾರುವನ್ನು ಮುಸ್ಲಿಂ ಹಂತಕರು ಕೊಂದಾಗ ಬಿಜೆಪಿ ಸರ್ಕಾರದ ಕಾನೂನು ಸುವ್ಯವಸ್ಥೆ ಸರಿಯಿತ್ತೇ? ಆಗಲೂ ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣವೇ ಹೀಗೆ ಮಾಡಲು ಕಾರಣ ಎಂದು ಹೇಳಿದ್ದರು.

ಸುಳ್ಯದ ಬಡ ತಾಯಿಯ ಮಗ, ಕೂಲಿ ಕಾರ್ಮಿಕ ಮಸೂದ್‌ನನ್ನು ಅಂಗಡಿ ಬಳಿ ನಿಂತಿದ್ದಾಗ
ಮೈ ತಾಕಿತೆಂಬ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಮನೆಗೆ ಹೋದ ಮೇಲೂ ರಾತ್ರಿ ಕರೆಸಿ ತಲೆಗೆ ಸೋಡಾ ಬಾಟಲಿಯಿಂದ ಹೊಡೆದು ಕೊಂದ ಹಿಂದೂ ಪುಂಡರು ಬಿಜೆಪಿ ಸರ್ಕಾರದ ರಕ್ಷಣೆ ಸಿಗುತ್ತದೆ ಎಂಬ ಕಾರಣಕ್ಕೆ ಅಪರಾಧ ಎಸಗಿದರೇ? ಅಥವಾ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫಾರ್ಮುಲಾ ಕಾರಣದಿಂದ ಪ್ರವೀಣ್ ನೆಟ್ಟಾರುವಿನ ಕೊಲೆ ಆಯಿತೆಂದು ನಂಬೋಣವೇ? ಅದೇ ಕಾರಣದಿಂದ ಸುರತ್ಕಲ್‌ನ ಫಾಜಿಲ್‌ನನ್ನು ಕೊಚ್ಚಿ ಕೊಂದರಲ್ಲಾ, ಆಗ ಸರ್ಕಾರ ನಡೆದುಕೊಂಡ ರೀತಿ ಅದೆಷ್ಟು ಅಮಾನವೀಯವಾಗಿತ್ತು!
ಪ್ರವೀಣ್ ನೆಟ್ಟಾರುವಿನ ಮನೆಗೆ ಭೇಟಿ ನೀಡಿದ ಬೊಮ್ಮಾಯಿ ಅಲ್ಲೇ ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ಮಸೂದನ ಮನೆಗೆ ಭೇಟಿ ನೀಡಿಲ್ಲ. ಅದೇ ದಿನ ಸುರತ್ಕಲ್‌ನಲ್ಲಿ ಹಿಂದೂ ಕೋಮುವಾದಿಗಳಿಂದ ಕೊಲೆಯಾದ ಫಾಜಿಲ್ ಮನೆಗೆ ಭೇಟಿ ನೀಡಿಲ್ಲ. ಹರ್ಷ ಮತ್ತು ಪ್ರವೀಣರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನೀಧಿಯಿಂದ ತಲಾ 25 ಲಕ್ಷ ರೂ ಪರಿಹಾರ ನೀಡಿದ ಬೊಮ್ಮಾಯಿ ಮಸೂದ್ ಮತ್ತು ಫಾಜಿಲ್ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಮುಖ್ಯಮಂತ್ರಿಗಳೇನು ಅವರ ಜೇಬಿನಿಂದ ಅಥವಾ ಮನೆಯಿಂದ ತಂದು ಪರಿಹಾರ ಕೊಡಬೇಕಿತ್ತೇ? ಬೊಮ್ಮಾಯಿ ಅವರು ತನ್ನ ಹಿಂದೂ ತುಷ್ಟೀಕರಣ ನೀತಿಯಿಂದಾಗಿ ಬೇಜವಾಬ್ದಾರಿ, ನಿಷ್ಕರುಣಿ, ನಿರ್ಲಜ್ಜ ಮುಖ್ಯಮಂತ್ರಿಯಾಗಿ ಇತಿಹಾಸದಲ್ಲಿ ದಾಖಲಾಗಿದ್ದಾರೆ.
ಧರ್ಮಸ್ಥಳದ ದಲಿತ ಯುವಕ ದಿನೇಶ್‌ನನ್ನು ಹಾಡುಹಗಲೇ ಹಿಂದೂಪರ ಸಂಘಟನೆಯ ಕಾರ್ಯಕರ್ತ ಕಾಲಿನಿಂದ ಒದ್ದು ಸಾವಿಗೆ ಕಾರಣರಾದಾಗ ಬೊಮ್ಮಾಯಿ ಸರ್ಕಾರ ಮೌನವಾಗಿತ್ತು. ದಿನೇಶ್ ಕುಟುಂಬಕ್ಕೆ ಸಾಂತ್ವನ ಹೇಳಲು ಜಿಲ್ಲೆಯಲ್ಲೇ ಇದ್ದ ಮೂವರು ಮಂತ್ರಿಗಳಿಗೆ ಸಮಯ ಸಿಗಲಿಲ್ಲ. ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆಗೆ ಈ ಸುದ್ದಿ ತಲುಪಿಯೇ ಇಲ್ಲ. ಜನನಾಯಕರು ಹೀಗೂ ಇರಬಲ್ಲರು ಎಂಬುದಕ್ಕೆ ಇವರೆಲ್ಲ ಉದಾಹರಣೆ.

ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಿಎಎ ಹೋರಾಟದ ಸಂದರ್ಭದಲ್ಲಿ ಮಂಗಳೂರು ಗಲಭೆ ನಡೆದಿತ್ತು. ಆಗ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರು ಮುಸ್ಲಿಂ ಯುವಕರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಿ ಒಂದೇ ದಿನದಲ್ಲಿ ಅದನ್ನು ತಡೆ ಹಿಡಿದದ್ದು ಯಾರ ಒತ್ತಡಕ್ಕೆ ಮಣಿದು? ಯಾರನ್ನು ಮೆಚ್ಚಿಸಲು? ತಮ್ಮ ಸಂಪುಟದ ಉಗ್ರ ಕೋಮುವಾದಿ ಶಾಸಕರನ್ನು ಮೆಚ್ಚಿಸಲೇ?
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ಶರಾವತಿ ನದಿ ಬಳಿಯ ಸ್ಪೋಟ ಇವೆಲ್ಲ ನಡೆಯಲು ಬೊಮ್ಮಾಯಿ ಅವರ ಆಡಳಿತ ವೈಫಲ್ಯ ಕಾರಣವೇ? ತಮ್ಮ ಅವಧಿಯಲ್ಲೂ ಮುಸ್ಲಿಂ ಕಿಡಿಗೇಡಿಗಳು ಸ್ಪೋಟ ನಡೆಸಿದ್ರಲ್ವಾ, ಅದಕ್ಕೆ ಏನು ಕಾರಣ? ಇತ್ತೀಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸರ್ಕಾರ ಕಾರಣ, ಕಾಂಗ್ರೆಸ್ ಮುಖಂಡರ ಮುಸ್ಲಿಂ ತುಷ್ಟೀಕರಣ ಕಾರಣ ಎಂದಾದರೆ ಬಿಜೆಪಿ ಅವಧಿಯಲ್ಲಿ ಏನು ಕಾರಣ ಎಂದು ಹೇಳಬೇಕಲ್ವಾ?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಂಜನಗೂಡು ಹನುಮ ಜಯಂತಿ ಮೆರವಣಿಗೆಯಲ್ಲಿ ಉಂಟಾದ ಒಂದೇ ಗುಂಪಿನ ಯುವಕರಿಬ್ಬರ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗುತ್ತದೆ. ಅಲ್ಲಿಗೆ ಧಾವಿಸಿದ ಹಿಂದೂ ಮುಖಂಡರು ಅದನ್ನು ಕಾಂಗ್ರೆಸ್ ತಲೆಗೆ ಕಟ್ಟಲು ಯತ್ನಿಸಿ ವಿಫಲವಾಗಿದ್ದವು. ಮೃತನ ಪತ್ನಿಯೇ ಕೊಲೆ ನಡೆದ ತಕ್ಷಣ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಕೊಲೆಯ ಕಾರಣ ಬಿಚ್ಚಿಟ್ಟಿತ್ತು. ಆದರೂ ʼಬಾಡಿಗೆ ಭಾಷಣಕಾರʼ ಚಕ್ರವರ್ತಿ ಸೂಲಿಬೆಲೆ ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್ ಹೆಸರು ಎಳೆದು ತಂದಿದ್ದರು.
ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರ ನಡುವಿನ ವಿಡಿಯೋ ಪ್ರಕರಣವನ್ನು ದೇಶ ವ್ಯಾಪಿ ಸುದ್ದಿಯಾಗುವಂತೆ ಮಾಡಿದ್ದರು. ಸ್ವತಃ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರು ಕಾಲೇಜು ಆಡಳಿತಮಂಡಳಿ ಮತ್ತು ವಿದ್ಯಾರ್ಥಿನಿಯರ ಹೇಳಿಕೆ ಪಡೆದು ಇದು ಅಂತಹ ಗಂಭೀರ ಪ್ರಕರಣ ಅಲ್ಲ, ತಕ್ಷಣ ಆ ಯುವತಿಯರು ವಿಡಿಯೋ ಡಿಲಿಟ್ ಮಾಡಿದ್ದಾರೆ. ಯಾರಿಗೂ ಶೇರ್ ಮಾಡಿಲ್ಲ ಎಂದ ಮೇಲೂ ಬಿಜೆಪಿ ನಾಯಕರು ಮುಸ್ಲಿಂ ತುಷ್ಟೀಕರಣದ ಆರೋಪ ಮಾಡಿದ್ದರು.
ಇದೀಗ ಮೊದಲ ಹಂತದ ಚುನಾವಣೆಗೆ ವಾರವಷ್ಟೇ ಬಾಕಿ ಇರುವಾಗ ಸಿಕ್ಕಿದ ಈ ಅವಕಾಶವನ್ನು ಬಿಜೆಪಿ ನಾಯಕರು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ದಿಂಗಾಲೇಶ್ವರರ ಬಂಡಾಯದಿಂದ ದಿಗಿಲುಗೊಂಡಿದ್ದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಅವರಿಗೆ ಹೊಸ ಹುರುಪು ಬಂದಂತಾಗಿದೆ. ಇದೇ ಸಮಯದಲ್ಲಿ ದಿಂಗಾಲೇಶ್ವರ ಶ್ರೀ ಸಹಿತ ಹತ್ತಾರು ಸ್ವಾಮಿಗಳು ಹುಬ್ಬಳ್ಳಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿ ನೇಹಾ ಕೊಲೆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯ ನಡೆಯನ್ನು ಖಂಡಿಸಿದ್ದಾರೆ. ಬಿಜೆಪಿಯ ನಾಯಕರ ಹೆಣ ರಾಜಕಾರಣ ಮಿತಿ ಮೀರಿದ್ದು ಅದು ಸದ್ಯಕ್ಕೆ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಇದನ್ನು ಎಲ್ಲರೂ ಖಂಡಿಸಬೇಕಿದೆ.
ಹುಬ್ಬಳ್ಳಿಯ ಘಟನೆಯಲ್ಲಿ ಎರಡೂ ಕುಟುಂಬಗಳು ನೊಂದಿವೆ. ಎರಡು ಯುವ ಜೀವಗಳು ತಮ್ಮ ಬದುಕನ್ನು ಕಳೆದುಕೊಂಡಿವೆ. ಕೊಲೆಗಾರ ಬದುಕಿದ್ದೂ ಸತ್ತಂತೆ. ಆತನಿಗೆ ಶಿಕ್ಷೆಯಾಗುತ್ತದೆ; ಆದರೆ, ಆತನ ಕುಟುಂಬಕ್ಕೆ ನಿತ್ಯ ಅವಮಾನದ ಸಾವು. ನೇಹಾ ಮನೆಯವರ ಸಂಕಟ ಕಳೆಯುವಂತದ್ದಲ್ಲ. ಆದರೆ, ಎರಡು ಕುಟುಂಬಗಳ ಅತ್ಯಂತ ಸಂಕಟದ ಈ ಸಮಯವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವವರ ಬಗ್ಗೆಯೂ ಸಮಾಜ ಎಚ್ಚರದಿಂದಿರಬೇಕು.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
Very good detailed explanation to understand
We needs heel wonds of our society, values at any cost for humanitarian aid to all