“ಇಂಡಿ ಒಕ್ಕೂಟದಲ್ಲಿ ಪ್ರಸ್ತುತ ಯಾವುದೇ ನಾಯಕರಿಲ್ಲ, ಭವಿಷ್ಯದ ದೂರದರ್ಶಿಯೂ ಇಲ್ಲ. ಅವರ ಇತಿಹಾಸ ಕೇವಲ ಹಗರಣವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿ ಪ್ರಧಾನಿ ಮೋದಿ ಮಾತನಾಡಿದರು.
“ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಮಾಡಿರುವ ಕಾರ್ಯಗಳ ಪ್ರಮಾಣಪತ್ರದ ಜೊತೆಯಲ್ಲಿ ನಿಮ್ಮ ಆಶೀವಾರ್ದ ಪಡೆಯಲು ಬಂದಿದ್ದೇನೆ. ನಿಮ್ಮನ್ನೇ ನನ್ನ ಪರಿವಾರ ಎಂದು ನಾನು ಭಾವಿಸಿದ್ದೇನೆ. ನಿಮಗಾಗಿ ಹಗಲು ರಾತ್ರಿ ನಾನು ದುಡಿಯುತ್ತೇನೆ. ನಿಮ್ಮ ಕನಸೇ ಮೋದಿಯ ಸಂಕಲ್ಪ. ದಿನದ 24 ಗಂಟೆಯೂ, ವಾರದ ಏಳು ದಿನವೂ, 2047ರವರೆಗೆ ನಿಮಗಾಗಿ ಕೆಲಸ ಮಾಡುವ ಸಂಕಲ್ಪ ಹೊಂದಿದ್ದೇನೆ. ನಾನು ಯೋಜನೆಯನ್ನು ಮಾತ್ರ ಮಾಡುವುದಲ್ಲ ಅದರ ಗ್ಯಾರಂಟಿಯನ್ನು ನೀಡುತ್ತೇನೆ” ಎಂದು ಪ್ರಧಾನಿ ಚಿಕ್ಕಬಳ್ಳಾಪುರ ಪ್ರಚಾರದಲ್ಲಿ ಹೇಳಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ದೇಣಿಗೆ ನೀಡಿ- ಗುತ್ತಿಗೆ ಪಡಿ; ಬಿಜೆಪಿಯ ದಂಧೆ ಜಗಜ್ಜಾಹೀರು
“ನಮೋ ಡ್ರೋನ್ ಮೂಲಕ ಹೆಣ್ಣು ಮಕ್ಕಳಿಗೆ ಡ್ರೋನ್‌ನ ತರಬೇತಿ ನೀಡಲಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರದ ಹೊಲಗಳಲ್ಲಿ ನಮ್ಮ ಹೆಣ್ಣುಮಕ್ಕಳು ಡ್ರೋನ್ ಮೂಲಕ ವ್ಯವಸಾಯಕ್ಕೆ ಸಹಾಯ ಮಾಡುವ ದಿನ ದೂರವಿಲ್ಲ” ಎಂದರು.
ಇನ್ನು ಬೆಂಗಳೂರಿನಲ್ಲಿ ಮಾತನಾಡಿದ ಪ್ರಧಾನಿ, “ನೀವು ಎನ್‌ಡಿಎ ಮತ್ತು ಇಂಡಿ ಒಕ್ಕೂಟ ಎರಡರ ಪ್ರಚಾರ ಅಭಿಯಾನವನ್ನು ನೋಡುತ್ತಿರುವಿರಿ. ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟದ ವಿಷಯ ಮೋದಿ, ಮೋದಿ ಪರಿವಾರ, ಮೋದಿ ಮೇಲೆ ಹಾಕಲಾಗುತ್ತಿರುವ ಸುಳ್ಳು ಆರೋಪಗಳಾಗಿದೆ. ಆದರೆ ನನ್ನ ಚಿತ್ತ 21ನೇ ಶತಮಾನದ ಭಾರತದ ವಿಕಾಸವಾಗಿದೆ. ಭಾರತದ ನಾಗರಿಕರ ಸುವಿಧ ಮತ್ತು ಸಮೃದ್ಧಿಯಾಗಿದೆ” ಎಂದು ಹೇಳಿದರು.
“ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಉತ್ತಮ ನಗರವನ್ನಾಗಿಸುವ ಕನಸು ಕಂಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಕೆಲವೇ ಸಮಯದಲ್ಲಿಯೇ ಇಲ್ಲಿನ ಸ್ಥಿತಿಯನ್ನು ಬಿಗಡಾಯಿಸಿದೆ” ಎಂದು ಆರೋಪಿಸಿದರು.