ಪ್ರಚಾರದ ವೇಳೆ ಓರ್ವ ಗನ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರತಾ ಲೋಪದ ಹಿನ್ನೆಲೆ, ಪಿಎಸ್‌ಐ, ಎಎಸ್‌ಐ ಸೇರಿ ಒಟ್ಟು ನಾಲ್ವರನ್ನು ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ದಯಾನಂದ್ ಬಿ. ಆದೇಶಿಸಿದ್ದಾರೆ.
ಇದೇ ತಿಂಗಳ 8ರಂದು ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ರಿಯಾಜ್ ಎಂಬಾತ ಪಿಸ್ತೂಲ್ ಇಟ್ಟುಕೊಂಡು ಬಂದು ಅವರಿಗೆ ಹಾರ ಹಾಕಿದ್ದನು. ಈ ಘಟನೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಅಲ್ಲದೇ, ಹಾರ ಹಾಕುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಬಳಿಕ ರಿಯಾಜ್‌ನನ್ನು ಸಿದ್ದಾಪುರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ, ಆತ ನನಗೆ ಜೀವಭಯವಿದೆ ಹಾಗಾಗಿ ಅರ್ಜಿ ನೀಡಿ ಗನ್ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಈ ಘಟನೆಯ ಎರಡು ವಾರಗಳ ಬಳಿಕ ಸಿಎಂ ಭದ್ರತಾ ಕರ್ತವ್ಯದಲ್ಲಿದ್ದ ಸಿದ್ದಾಪುರ ಸಬ್ ಇನ್ಸ್‌ಪೆಕ್ಟರ್ ಮೆಹಬೂಬ, ಎಎಸ್‌ಐ ನಾಗರಾಜು ಹಾಗೂ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಏನಿದು ಘಟನೆ?
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಮತಯಾಚಿಸಲು ಸಿದ್ದಾಪುರ ಠಾಣೆ ವ್ಯಾಪ್ತಿಯ ಭೈರಸಂದ್ರದಲ್ಲಿ ಏಪ್ರಿಲ್ 8ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೋಡ್ ಶೋ ನಡೆಸಿದ್ದರು. ಇದೇ ಸಂದರ್ಭದಲ್ಲಿ ರಿಯಾಜ್ ಅಹಮ್ಮದ್, ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡು ತೆರೆದ ವಾಹನ ಏರಿ ಮುಖ್ಯಮಂತ್ರಿ ಅವರಿಗೆ ಹಾರ ಹಾಕಿ ಸನ್ಮಾನಿಸಿದ್ದರು.
ಬಳಿಕ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಬೆನ್ನಲ್ಲೇ, ಭದ್ರತಾ ಲೋಪ ಉಂಟಾಗಿದ್ದ ಬಗ್ಗೆ ತನಿಖೆ ನಡೆಸುವಂತೆ ಕಮಿಷನರ್ ದಯಾನಂದ ಅವರು ಆದೇಶ ಹೊರಡಿಸಿದ್ದರು. ಪ್ರಾಥಮಿಕ ತನಿಖೆ ನಡೆಸಿದ್ದ ದಕ್ಷಿಣ ವಿಭಾಗದ ಡಿಸಿಪಿ ಹಾಗೂ ಹೆಚ್ಚುವರಿ ಪೊಲೀಸ್ ಕಮಿಷನರ್ ಅವರು ಇತ್ತೀಚೆಗೆ ವರದಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಇಂಡಿ ಒಕ್ಕೂಟದ ಇತಿಹಾಸ ಕೇವಲ ಹಗರಣ: ಪ್ರಧಾನಿ ಮೋದಿ
ವರದಿ ಪರಿಶೀಲಿಸಿದ್ದ ಕಮಿಷನರ್ ಬಿ. ದಯಾನಂದ್, ಸಿದ್ದಾಪುರ ಠಾಣೆಯ ಪಿಎಸ್‌ಐ ಮೆಹಬೂಬ್ ಹುಡ್ದ, ಹೆಡ್ ಕಾನ್‌ಸ್ಟೆಬಲ್ ಮಂಜು ನಾಯಕ್, ಕಾನ್‌ಸ್ಟೆಬಲ್ ಸಚಿನ್ ಹಾಗೂ ಎಎಸ್‌ಐಯೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಮಾತನಾಡಿ, “ಘಟನೆಗೆ ಸಂಬಂಧಿಸಿದಂತೆ ರಿಯಾಜ್‌ನನ್ನು ವಿಚಾರಣೆ ನಡೆಸುತ್ತಿದ್ದೇವೆ. ಈ ಹಿಂದೆ ಅವರ ಮೇಲೆ ಅಟ್ಯಾಕ್ ಆದ ಕಾರಣಕ್ಕೆ ಅವರು ದೂರು ನೀಡಿದ್ದರು. ಜತೆಗೆ, ಚುನಾವಣೆ ಸಂದರ್ಭದಲ್ಲಿಯೂ ಜೀವ ಬೆದರಿಕೆ ಇದೆ ಎಂದು ಗನ್ ಇಟ್ಟುಕೊಳ್ಳಲು ಮನವಿ ಮಾಡಿ ಅನುಮತಿ ಪಡೆದಿದ್ದರು. ಈಗ ಗನ್ ಇಟ್ಟುಕೊಂಡು ಸಿಎಂ ಬಳಿ ಹೋದ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದ ತೆರೆದ ವಾಹನದ ಸುತ್ತಲೂ ಪಿಎಸ್‌ಐ ಮೆಹಬೂಬ್ ಹಾಗೂ ಇತರರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮುಖ್ಯಮಂತ್ರಿ ಅವರ ಬಳಿ ಹೋಗುವವರನ್ನು ತಪಾಸಣೆ ನಡೆಸುವ ಜವಾಬ್ದಾರಿಯೂ ಇವರದ್ದಾಗಿತ್ತು. ರಿಯಾಜ್ ಅಹಮ್ಮದ್ ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡು ಮುಖ್ಯಮಂತ್ರಿ ಬಳಿ ಹೋಗುವಾಗ ಯಾರೊಬ್ಬರೂ ತಡೆದಿರಲಿಲ್ಲವೆಂಬುದು ತನಿಖೆಯಿಂದ ಗೊತ್ತಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.