ಗದಗದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಕೃತ್ಯ ಪೂರ್ವ ನಿಯೋಜಿತವಾಗಿದೆ ಎಂದು ಎಸ್ಪಿ ಬಿ.ಎಸ್.ನೇಮಗೌಡ ಹೇಳಿದ್ದಾರೆ.
ಈ ಬಗ್ಗೆ ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಈ ಕೃತ್ಯ ಪೂರ್ವನಿಯೋಜಿತವಾಗಿದ್ದು, ಕೌಟುಂಬಿಕ ಹಾಗೂ ವ್ಯವಹಾರಿಕ ಹಿನ್ನೆಲೆ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ” ಎಂದಿದ್ದಾರೆ.
“ಏ.19ರ ಮುಂಜಾನೆ 3 ಗಂಟೆಗೆ ಮನೆಯೊಳಗೆ ನುಗ್ಗಿದ ಐವರು ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆ ಮಾಡಿದವರ ಚಲನವಲನ ಸಿಸಿಟಿವಿವೊಂದರಲ್ಲಿ ಸೆರೆಯಾಗಿದೆ. ಆಸ್ತಿ ವಿಚಾರ, ವಯಕ್ತಿಕ ಕಾರಣಕ್ಕೆ ಕೊಲೆ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ” ಎಂದು ತಿಳಿಸಿದ್ದಾರೆ.
“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತೇವೆ. ಒಟ್ಟು ಐದು ತಂಡ ರಚನೆ ಮಾಡಲಾಗಿದ್ದು, ಹಂತಕರಿಗಾಗಿ ಹುಡುಕಾಟ ನಡೆಸಿದ್ದೇವೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ” ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಸೇರಿದಂತೆ ಮಲಗಿದಲ್ಲೇ ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದ ಘಟನೆ ಏ.19ರ ರಾತ್ರಿ ನಡೆದಿತ್ತು.
ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಕುಟುಂಬ ಗದಗ ನಗರದ ದಾಸರ ಓಣಿಯಲ್ಲಿ ನೆಲೆಸಿದೆ. ಎಪ್ರಿಲ್ 17ರಂದು ಸುನಂದಾ ಬಾಕಳೆ ಮತ್ತು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ ಬಾಕಳೆ ಅವರ ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಗದಗನಲ್ಲಿರುವ ಸುನಂದಾ ಬಾಕಳೆ ಅವರ ಮನೆಗೆ ಕೊಪ್ಪಳದಿಂದ ಸಂಬಂಧಿಗಳು ಆಗಮಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗನ್ ಇಟ್ಕೊಂಡು ಸಿಎಂಗೆ ಹಾರ : ಪಿಎಸ್ಐ ಸೇರಿ ನಾಲ್ವರು ಅಮಾನತು
ಕಾರ್ತಿಕ ಬಾಕಳೆ (28) ನಿಶ್ಚಿತಾರ್ಥ ಕಾರ್ಯ ಹಿನ್ನೆಲೆಯಲ್ಲಿ ಸಂಬಂಧಿಕರಾದ ಪರಶುರಾಮ ಕುಟುಂಬ ಕೊಪ್ಪಳದಿಂದ ಬಂದಿದ್ದರು. ಪರಶುರಾಮ, ಸುನಂದಾ ಬಾಕಳೆಯ ಪತಿ ಪ್ರಕಾಶ್ ಬಾಕಳೆ ಅವರ ಮೊದಲನೇ ಹೆಂಡತಿ ಸಹೋದರ. ಪರಶುರಾಮ ಹಾದಿಮನಿ (55) ಪತ್ನಿ ಲಕ್ಷ್ಮೀ (45) ಮತ್ತು ಪುತ್ರಿ ಆಕಾಂಕ್ಷಾ (16) ಸುನಂದಾ ಬಾಕಳೆ ಮನೆಗೆ ಬಂದಿದ್ದರು. ಏಪ್ರಿಲ್ 19ರ ರಾತ್ರಿ ಪರಶುರಾಮ ಹಾದಿಮನಿ ಪುತ್ರಿ ಆಕಾಂಕ್ಷಾ ಹುಟ್ಟಿದ ಹಬ್ಬವನ್ನು ಸುನಂದಾ ಬಾಕಳೆ ಮನೆಯಲ್ಲಿಯೇ ಆಚರಿಸಿದ್ದರು.
ಹುಟ್ಟುಹಬ್ಬ ಆಚರಣೆ ಮಾಡಿದ ಎಲ್ಲರೂ ರಾತ್ರಿ ಸುನಂದಾ ಬಾಕಳೆ ಮನೆಯಲ್ಲಿ ಮಲಗಿದ್ದಾರೆ. ಪರಶುರಾಮ ಕುಟುಂಬ ಅಂದರೇ, ಪರಶುರಾಮ್, ಆತನ ಪತ್ನಿ ಲಕ್ಷ್ಮೀ ಹಾಗೂ ಪುತ್ರಿ ಆಕಾಂಕ್ಷಾ ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದರು.
ಏ.19ರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪರಶುರಾಮ ಕುಟುಂಬ ಮಲಗಿದ್ದ ಕೋಣೆಯ ಗಾಜಿನ ಕಿಟಕಿ ಒಡೆದು ಒಳ ನುಗ್ಗಿದ್ದಾರೆ. ಬಳಿಕ, ಮಾರಕಾಸ್ತ್ರಗಳಿಂದ ಮೂವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ಕಿರಿಚಾಟದ ಶಬ್ದ ಕೇಳಿದ ಕೆಳಗಿನ ಕೋಣೆಯಲ್ಲಿ ಮಲಗಿದ್ದ ಕಾರ್ತಿಕ್ ಬಾಕಳೆ ನೋಡಲು ಮೇಲೆ ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಆತನನ್ನೂ ಕೊಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬಳಿಕ, ಮನೆಯ ಮಾಲೀಕ ಪ್ರಕಾಶ್ ಬಾಕಳೆ ಮತ್ತು ಪತ್ನಿ ಸುನಂದಾ ಬಾಕಳೆ ಅವರು ಮಲಗಿದ್ದ ಕೋಣೆಯ ಬಾಗಿಲನ್ನು ದುಷ್ಕರ್ಮಿಗಳು ತಟ್ಟಿದ್ದಾರೆ. ಆದರೆ, ದಂಪತಿ ಬಾಗಿಲು ತೆಗೆಯದೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿದ ಆರೋಪಿಗಳು ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ದುಷ್ಕರ್ಮಿಗಳು ಚರಂಡಿಯಲ್ಲಿ ಬಿಸಾಡಿದ್ದರು.
ಕೊಲೆ ನಡೆದ ಪ್ರಕಾಶ್ ಬಾಕಳೆ ಮನೆಗೆ ಸಚಿವ ಹೆಚ್.ಕೆ.ಪಾಟೀಲ್ ಭೇಟಿ ನೀಡಿ, ಕುಟುಂಬಕ್ಕೆ ಧೈರ್ಯ ಹೇಳಿದ್ದರು. ಕುಟುಂಬಸ್ಥರು ಕೊಲೆಗಾರರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಸುದ್ದಿ ತಿಳಿದು ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದರು. ಇದೀಗ ಪ್ರಕರಣದ ಬೆನ್ನತ್ತಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ತೀವ್ರ ತನಿಖೆ ನಡೆಸುತ್ತಿದ್ದಾರೆ.