ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರು ಶಿವಮೊಗ್ಗ ತಾಲೂಕಿನ ಶಂಕರನಾರಾಯಣದ ಬೆದ್ರಕಟ್ಟೆಯ ಜನತಾ ಕಾಲೋನಿಗೆ ಭೇಟಿ ನೀಡಿ ಕೊರಗ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
“ಕಾಲೋನಿಯಲ್ಲಿ 70ಕ್ಕೂ ಅಧಿಕ ಕುಟುಂಬಗಳು ಬದುಕು ನಡೆಸುತ್ತಿದ್ದಾರೆ. ಆದರೆ, ಇಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಈ ಭಾಗದ ಜನರಿಗೆ ಪ್ರಮುಖ ಸಮಸ್ಯೆಯಾದ ಮನೆ ನಿರ್ಮಾಣಕ್ಕೆ ಭೂಮಿಯ ಸಮಸ್ಯೆ ತೀರದ ದಾಹದಂತಿದೆ. ಅದೇ ರೀತಿ, ಕುಡಿಯುವ ನೀರು, ರಸ್ತೆ, ಭೂ- ಹಕ್ಕು ಪತ್ರ ಸೇರಿದಂತೆ ಅನೇಕ ಸಮಸ್ಯೆಗಳು ಈ ಭಾಗದಲ್ಲಿ ತಲೆದೋರಿವೆ. ಆದರೆ, ಈವರೆಗೆ ಯಾವುದೇ ಸಂಸದರು ಈ ಕಾಲೂನಿಗೆ ಭೇಟಿ ನೀಡಿಲ್ಲ” ಎಂದು ಸ್ಥಳೀಯರು ಅಳಲು ತೋಡಿಕೊಂಡರು.
“ಈ ಭಾಗದಲ್ಲಿ ಹೆಚ್ಚಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಬುಟ್ಟಿ ನೇಕಾರರು, ಚೆಂಡೆ ವಾದ್ಯ ವಾದಕರು ಸೇರಿ ಇನ್ನಿತರ ಕುಲಕಸುಬು ನಂಬಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಈವರೆಗೆ ಯಾವುದೇ, ರೀತಿಯ ಮಕ್ಕಳ ಉದ್ಯೋಗ, ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿಸಿಲ್ಲ. ಆದ್ದರಿಂದ, ಈ ಭಾಗದ ಜನರಿಗೆ ಸಮರ್ಪಕವಾದ ಸೌಲಭ್ಯ ಕಲ್ಪಿಸಿಕೊಡಬೇಕು” ಎಂದು ಸ್ಥಳಿಯರು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಇಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದ್ದು, ಮುಂದಿನ ದಿನದಲ್ಲಿ ಸಮಾಜದೊಂದಿಗೆ ಇರುವುದಾಗಿ ಭರವಸೆ ನೀಡಿದರು.
ತಾಲೂಕಿನ ಉಳ್ಳೂರು ಕನಕಾನಂದ ಬ್ರಾಂಡ್ ಗೋಡಂಬಿ ಉತ್ಪನ್ನ ಕಾರ್ಖಾನೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು, ಕಾರ್ಖಾನೆಯ ಸಿಬ್ಬಂದಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಮಾತನಾಡಿ, “ಕಾರ್ಖಾನೆಯ ಸಿಬ್ಬಂದಿಗಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು” ಎಂದು ಹೇಳಿದರು.
ನಟ ಶಿವರಾಜ್‌ಕುಮಾರ್ ಮಾತನಾಡಿ, “ಗೀತಾಗೆ ಬಡವರ ಬಗ್ಗೆ ಕಾಳಜಿ ಹೆಚ್ಚಿದೆ. ಆದ್ದರಿಂದ, ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಕೇಂದ್ರ ಹಾಗೂ ರಾಜ್ಯ ಮಟ್ಟದ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕೆ ಗೀತಾ ಒತ್ತು ನೀಡುವರು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ, ಕಲೋನಿಯ ಸ್ಥಳೀಯ ಕಾಂಗ್ರೆಸ್ ಮುಖಂಡೆ ರೂಪ ಅಕ್ಷಯ್ ಅವರ ಗೃಹ ಪ್ರವೇಶಕ್ಕೆ ಭೇಟಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯಿಂದ ಗ್ರಾಜುಯೇಷನ್ ಡೇ ಕಾರ್ಯಕ್ರಮ
ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಪಂಚಾಯಿತಿ ಸದಸ್ಯ ಗುರುದತ್ ಷೇಟ್, ಸಂಕೇತ್ ಶೆಟ್ಟಿ, ಕೃಷ್ಣ ನಾಯ್ಕ್, ರಾಮಚಂದ್ರ ದೇವಾಡಿಗ, ಎ.ಪಿ ಶೆಟ್ಟಿ, ಬಿ ಕೆ ಶ್ರೀನಿವಾಸ, ಜಿ ಎಸ್ ಹರಿಪ್ರಸಾದ್ ಆಚಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಪಿಗೇಡಿ ಸಂಜೀವ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಶೆಟ್ಟಿ ಸೇರಿ ಅನೇಕ ಕಾರ್ಯಕರ್ತರು ಇದ್ದರು.
