‘ಇಂಡಿಯಾ’ ಮೈತ್ರಿಕೂಟವನ್ನು ತೊರೆಯಲು ನಿರಾಕರಿಸಿದ್ದಕ್ಕೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ, ಜೆಎಂಎಂ ನಾಯಕ ಹೇಮಂತ್ ಸೊರೆನ್ ಅವರನ್ನು ಬಂಧಿಸಿ, ಜೈಲಿಗೆ ಕಳಿಸಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ಭಯೋತ್ಪಾದನೆ’ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ‘ಇಂಡಿಯಾ’ ಮೈತ್ರಿಕೂಟ ನಡೆಸಿದ ‘ಉಲ್ಗುಲನ್ ನ್ಯಾಯ್’ ಸಮಾವೇಶದಲ್ಲಿ ಖರ್ಗೆ ಮಾತನಾಡಿದರು. “ಹೇಮಂತ್ ಸೋರೆನ್ ಅವರು ‘ಇಂಡಿಯಾ’ ಬಣದಿಂದ ದೂರ ಉಳಿಯಲು ನಿರಾಕರಿಸಿದ್ದಕ್ಕಾಗಿ ಅವರನ್ನು ಜೈಲಿಗೆ ಕಳಿಸಲಾಗಿದೆ. ಹೇಮಂತ್ ಸೋರೆನ್ ಅವರು ಬಿಜೆಪಿ ಎದುರು ತಲೆತಗ್ಗಿಸುವುದಕ್ಕಿಂತ ಜೈಲಿಗೆ ಹೋಗವುದೇ ಮೇಲೆಂದ ಧೀರ ವ್ಯಕ್ತಿ. ಆದಿವಾಸಿಗಳನ್ನು ಭಯಭೀತಗೊಳಿಸುತ್ತಿರುವ ಬಿಜೆಪಿ ನಿರ್ನಾಮವಾಗಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋರೆನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಭೂ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಜನವರಿ 31ರಂದು ಇಡಿ ಬಂಧಿಸಿತ್ತು.
“ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಮಮಂದಿರ ಪ್ರತಿಷ್ಠಾಪನೆ ಮತ್ತು ಸಂಸತ್ ಭವನದ ಉದ್ಘಾಟನೆಗೆ ಆಹ್ವಾನಿಸದೆ ಬುಡಕಟ್ಟು ಸಮುದಾಯಕ್ಕೆ ಪ್ರಧಾನಿ ಮೋದಿ ಅವಮಾನ ಮಾಡಿದ್ದಾರೆ” ಎಂದು ಖರ್ಗೆ ವಾಗ್ದಾಳಿ ನಡೆಸಿದರು.
“ಬಿಜೆಪಿ ಆದಿವಾಸಿಗಳನ್ನು ಅಸ್ಪೃಶ್ಯರೆಂದು ಪರಿಗಣಿಸುತ್ತದೆ. ಅಂತಹ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ 150ರಿಂದ 180 ಸ್ಥಾನಗಳಿಗೆ ಇಳಿಸಬೇಕು” ಎಂದು ಕರೆ ಕೊಟ್ಟರು.