ನಾವು ಒಡೆದ ಮನೆಯಲ್ಲಿ ಬದುಕುತ್ತಿದ್ದೇವೆ. ಬಿಜೆಪಿ ಸರ್ಕಾರ ನಮ್ಮ ಮನೆಗಳನ್ನು ಒಡೆದುರುಳಿಸಿದೆ. ನಮ್ಮ ಬದುಕನ್ನು ಕಿತ್ತುಕೊಂಡಿದೆ. ನಾಗರಿಕ ಆಡಳಿತದ ಹೆಸರಿನಲ್ಲಿ ಶ್ರೀಮಂತರು ಮತ್ತು ಪ್ರಭಾವಿಗಳಿಗಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ನಾವು ಮತ ಹಾಕುತ್ತೇವೆ. ಆದರೆ, ಬಿಜೆಪಿಗಲ್ಲ – ಇದು ಅಸ್ಸಾಂ ಗುವಾಹಟಿಯ 70 ವರ್ಷದ ಮಹಿಳೆ ಬೊಂಟಿ ಕೊನ್ವಾರ್ ಅವರ ಅಳಲಿನ ಮಾತುಗಳು.
ಎರಡು ವರ್ಷಗಳ ಹಿಂದೆ, ರಾಜ್ಯ ಸರ್ಕಾರವು ಸಿಲ್ಸಾಕೊ ಬೀಲ್ (ಕೆರೆ) ಅಭಿವೃದ್ಧಿಗಾಗಿ ಗುವಾಹಟಿಯ ಅಂಚಿನಲ್ಲಿರುವ ಬಾರ್ಬರಿ ಪ್ರದೇಶದಲ್ಲಿದ್ದ 1,203 ಮನೆಗಳನ್ನು ಕೆಡವಲು ಪ್ರಾರಂಭಿಸಿತ್ತು. ಸರ್ಕಾರದ ನಡೆಯ ವಿರುದ್ಧ ಅಲ್ಲಿನ ನಿವಾಸಿಗಳು ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯವು ಸರ್ಕಾರದ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿತ್ತು. ‘ತಡೆಯಾಜ್ಞೆ ಪ್ರತಿಯನ್ನು ತೋರಿಸಿದರೂ, ಅಧಿಕಾರಿಗಳು ತಮ್ಮ ಮನೆಯನ್ನು ಕೆಡವಿದರು’ ಎಂದು ಕೊನ್ವಾರ್ ಆರೋಪಿಸಿದ್ದಾರೆ.
ಇದೀಗ, ಚುನಾವಣೆಯ ಸಮಯ. ಎಲ್ಲ ಪಕ್ಷಗಳು ಮತದಾರರನ್ನು ಓಲೈಸಲು ಯತ್ನಿಸುತ್ತಿವೆ. ಅಸ್ಸಾಂನ ಆಡಳಿತಾರೂಢ ಬಿಜೆಪಿ ಕೂಡ ಇಲ್ಲಿನ ಜನರ ಮತ ಪಡೆಯಲು, ಅವರನ್ನು ಓಲೈಸಲು ಮುಂದಾಗಿದೆ. ಆದರೆ, ಬಿಜೆಪಿ ವಿರುದ್ಧ ಆ 1,200 ಕುಟುಂಬಗಳು ಅಸಮಾಧಾನಗೊಂಡಿವೆ. ಅವರ ಆಕ್ರೋಶ ಮಡುಗಟ್ಟಿದೆ. ಅವರನ್ನು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‘ ಮಾತನಾಡಿಸಿದ್ದು, ಅವರ ಅಳಲನ್ನು ವರದಿ ಮಾಡಿದೆ.
ಕೊನ್ವಾರ್ ಮತ್ತು ಅವರ ಪತಿ ನರೇಶ್ವರ್ ಕೊನ್ವಾರ್ ಅವರು ತಾತ್ಕಾಲಿಕ ಗುಡಿಯಲು ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಅಧಿಕಾರಿಗಳು ಒಡೆದುರುಳಿಸಿದ ಅವರ ಮನೆಯ ಅವಶೇಷಗಳು ಗುಡಿಸಲಿನ ಸುತ್ತಲೂ ಬಿದ್ದಿವೆ. ಅದನ್ನು ತೋರಿಸುತ್ತಾ ಮಾತನಾಡಿದ ಕೊನ್ವಾರ್, “ಇದು ನನ್ನ ಮನೆ. ಸರ್ಕಾರವು ನಮ್ಮ ಮಾತನ್ನು ಕೇಳುವವರೆಗೂ ನಾನು ಬಿಡುವುದಿಲ್ಲ” ಎಂದು ಭಾವೋದ್ವೇಗಕ್ಕೊಳಗಾದರು.
ಶ್ರೀಮಂತರ ಕಟ್ಟಡಗಳು ಮಾತ್ರ ಉಳಿದಿವೆ
ದಂಪತಿಗಳು ಮೂಲತಃ ಉತ್ತರ ಅಸ್ಸಾಂನ ಲಖಿಂಪುರ ಜಿಲ್ಲೆಯವರು. ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. “ಗುತ್ತಿಗೆದಾರರಾಗಿರುವ ನಮ್ಮ ಎರಡನೇ ಮಗ ಅರ್ಧದಷ್ಟು ನಿರ್ಮಾಣವಾಗಿದ್ದ ಮನೆಯನ್ನು ಖರೀದಿಸಿದ್ದನು. ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ, ನಾವು ಇಲ್ಲಿಗೆ ಬಂದು ವಾಸಿಸಲಾರಂಭಿಸಿದೆವು. ಮಗ ಸಾಕಷ್ಟು ಹಣ ಖರ್ಚು ಮಾಡಿ, ಮನೆ ನಿರ್ಮಿಸಿದ್ದ. ಆದರೆ, ಸರ್ಕಾರದ ಅದನ್ನು ಕೆಡವಿತು” ಎಂದು ನರೇಶ್ವರ ಹೇಳುತ್ತಾರೆ.
ಇದು ನರೇಶ್ವರ ಮತ್ತು ಬೋಂತಿ ಅವರ ಪರಿಸ್ಥಿತಿ ಮಾತ್ರವಲ್ಲ. ತನ್ನ ಸ್ವಂತ ಸ್ಟಾರ್ಟ್‌ಅಪ್ ಆರಂಭಿಸಿ, ಸ್ಥಳೀಯರಿಗೆ ಅವಕಾಶಗಳನ್ನು ಒದಗಿಸಬೇಕೆಂದು ಕನಸು ಹೊತ್ತಿದ್ದ ಯುವ ಸಾಫ್ಟ್‌ವೇರ್ ಎಂಜಿನಿಯರ್ ಪ್ರಿಯಕುಮಾರ್ ಸಿನ್ಹಾ ಅವರ ಕನಸಿಗೂ ಬಿಜೆಪಿ ಸರ್ಕಾರ ತಣ್ಣೀರು ಎರಚಿದೆ.
ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಬ್ರಜಬಾಸಿ ಸಿಂಗ್ ಕೂಡ ಅಧಿಕಾರಿಗಳನ್ನು ಕ್ಷಮಿಸುವ ಮನಸ್ಥಿತಿಯಲ್ಲಿಲ್ಲ. “ನಮ್ಮೆಲ್ಲ ಮನೆಗಳನ್ನು ಕೆಡವಿದ್ದಾರೆ. ಆದರೆ, ಒಂದೆರಡು ರಾಜಕಾರಣಿಗಳು ಸೇರಿದಂತೆ ಶ್ರೀಮಂತರ ಕಟ್ಟಡಗಳು ಮತ್ತು ಹೋಟೆಲ್ ಮಾತ್ರ ಹಾಗೆಯೇ ಇವೆ. ಅವುಗಳನ್ನು ಮುಟ್ಟಲು ಅಧಿಕಾರಿಗಳು ಹೋಗಿಲ್ಲ” ಎಂದು ಅವರು ಆರೋಪಿಸಿದ್ದಾರೆ.
“ಕೆಲವು ಮಾಜಿ ಸೈನಿಕರು ಇಲ್ಲಿ ಭೂಮಿ ಖರೀದಿಸುತ್ತಿರುವ ಬಗ್ಗೆ ತಿಳಿದಾಗ, ನಾನು ಒಂದು ನಿವೇಶನವನ್ನು ಖರೀದಿಸಿದೆ. ಭೂಮಿ ಖರೀದಿಗೆ ಮತ್ತು ಮನೆ ನಿರ್ಮಾಣಕ್ಕಾಗಿ ನನ್ನ ಬಳಿಯಿದ್ದ ಎಲ್ಲ ಹಣವನ್ನೂ ವೆಚ್ಚ ಮಾಡಿದ್ದೇನೆ. ಅದರೆ, ನನ್ನ ಮನೆಯನ್ನು ಉರುಳಿಸಿಬಿಟ್ಟರು. ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ” ಎಂದು ಬ್ರಜಬಾಸಿ ಸಿಂಗ್ ಹೇಳುತ್ತಾರೆ.
“ನಮ್ಮ ಮನೆಗಳಿದ್ದ ಪ್ರದೇಶವನ್ನು ವಸತಿ ನಿಷೇಧಿತ ಪ್ರದೇಶವೆಂದು ಅಧಿಕಾರಿಗಳು ಸೇರಿಸಿದ್ದಾರೆ. ಆದರೆ, ಸರ್ಕಾರವೇ ನಮಗೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಿತ್ತು. ರಸ್ತೆ, ವಿದ್ಯುತ್ ಸಂಪರ್ಕ ನೀಡಿತ್ತು. ಅಲ್ಲದೆ, ನಮ್ಮ ಮನೆಗಳಿಗೆ ಕಂದಾಯವನ್ನೂ ಕಟ್ಟುತ್ತಿದ್ದೆವು. ನಮ್ಮದು ವಸತಿ ಪ್ರವೇಶವೇ ಆಗಿತ್ತು. ಆದರೆ, ಮನೆಗಳನ್ನು ಉರುಳಿಸಲು ಅಧಿಕಾರಿಗಳು ನಮ್ಮ ಪ್ರವೇಶವನ್ನು ವಸತಿ ನಿಷೇಧಿತ ಪ್ರದೇಶವೆಂದು ಸೇರಿದ್ದಾರೆ” ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾರ್ಬರಿ ಪ್ರದೇಶವು ದಿಸ್ಪುರ್ ವಿಧಾನಸಭಾ ಕ್ಷೇತ್ರ ಮತ್ತು ಗುವಾಹಟಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಣಕ್ಕಿಳಿಯಲಿದ್ದೇವೆ ಎನ್ನುತ್ತಿದ್ದಾರೆ ಈ ಸಂತ್ರಸ್ತರು.
ನಾವು ಮತ ಹಾಕುತ್ತೇವೆ, ಆದರೆ ಬಿಜೆಪಿಗಲ್ಲ
“ನಾವು ಅಕ್ರಮ ವಲಸಿಗರೂ ಅಲ್ಲ, ಅತಿಕ್ರಮಣದಾರರೂ ಅಲ್ಲ. ನಾವು ಭೂಮಿ ಖರೀದಿಸಿದ್ದೇವೆ. ಅಸ್ಸಾಮಿಗಳು, ಬುಡಕಟ್ಟುಗಳು, ಮೈತೈಗಳು, ಸ್ಥಳೀಯ ಮುಸ್ಲಿಮರು ಇಲ್ಲಿ ವಾಸಿಸುತ್ತಿದ್ದರು. ನಮಗೆ ಫ್ಲಾಟ್‌ಗಳಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾವು ಪುನರ್ವಸತಿಗಾಗಿ ಕಾಯುತ್ತಿದ್ದೇವೆ. ಅದರೆ, ಯಾವುದೇ ವಸತಿ ಭಾಗ್ಯ ದೊರೆತಿಲ್ಲ” ಎಂದು 30 ವರ್ಷದ ಗಾಯತ್ರಿ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಗುಜರಾತ್ | ನನ್ನ ಪ್ರಚಾರಕ್ಕೆ ಪೊಲೀಸರಿಂದಲೇ ಅಡ್ಡಿ; ಅಮಿತ್ ಶಾ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಆರೋಪ
“ನಮ್ಮ ಮನೆಗಳನ್ನು ಕೆಡವಿದ ಸರ್ಕಾರವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ನಮ್ಮ ಯೋಗಕ್ಷೇಮ ವಿಚಾರಿಸಲು ಸರ್ಕಾರದಿಂದ ಯಾರೂ ಬಂದಿಲ್ಲ. ನಾವು ಮತ ಹಾಕುತ್ತೇವೆ – ಇದು ನಮ್ಮ ಪ್ರಜಾಪ್ರಭುತ್ವದ ಹಕ್ಕು. ಆದರೆ, ಬಿಜೆಪಿಗೆ ಮತ ಹಾಕುವುದಿಲ್ಲ” ಎಂದು ಅವರು ಹೇಳುತ್ತಾರೆ.
“ಆರ್‌ಸಿಸಿ ಮನೆಗಳು ನೆಲಸಮಗೊಂಡವರಿಗೆ 10 ಲಕ್ಷ, ಅಸ್ಸಾಂ ಮಾದರಿಯ ಮನೆಗಳಿಗೆ 5 ಲಕ್ಷ ಮತ್ತು ಹುಲ್ಲಿನ ಮನೆಗಳಿಗೆ 1.5 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ, ಪ್ರತಿ ಕುಟುಂಬಕ್ಕೆ 1 ಕಥಾ ಮತ್ತು 5 ಲೆಸ್ಸಾ ಭೂಮಿ ಇರುವವರಿಗೆ ಕ್ರಮವಾಗಿ 25 ಲಕ್ಷ, 15 ಲಕ್ಷ ಮತ್ತು 5 ಲಕ್ಷ ರೂ.ಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದೇವೆ” ಎಂದು ಗಾಯತ್ರಿ ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷ ರೈಜೋರ್ ದಳದ ಮುಖಂಡರು ಸಂತ್ರಸ್ತರೊಂದಿಗೆ ಸಂಪರ್ಕದಲ್ಲಿದ್ದಾರೆ.