ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ಬಿರು ಬೇಸಿಗೆ ವಾತಾವರಣ ಸೃಷ್ಟಿಯಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು ಜನರು ಕಂಗಾಲಾಗಿದ್ದಾರೆ. ಮಳೆಯಿಲ್ಲದೇ, ರೈತರ ಬೆಳೆ ಕೈಗೆ ಹತ್ತದಂತಾಗಿದೆ. ಇಗೀಗ, ರಾಜ್ಯದ ಕೆಲವೆಡೆ ತುಂತುರು ಮಳೆಯಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಮಳೆ ಬೀಳುತ್ತಿಲ್ಲ. ಈ ಹಿನ್ನೆಲೆ, ನಾಡಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಲೆಂದು ಬೆಂಗಳೂರು ಪೂರ್ವ ತಾಲೂಕಿನ ಖಾಜಿಸೊನ್ನೇನಹಳ್ಳಿ ಗ್ರಾಮಸ್ಥರು ವಿಶೇಷ ಜಾತ್ರೆ ನಡೆಸಿದರು.
ಮಳೆ-ಬೆಳೆ ಚೆನ್ನಾಗಿ ಆಗಿ ಬರಗಾಲ ನಿವಾರಣೆಯಾಗಲಿ ಎಂದು ಬೆಂಗಳೂರು ಪೂರ್ವ ತಾಲೂಕಿನ ಖಾಜಿಸೊನ್ನೇನಹಳ್ಳಿ ಗ್ರಾಮಸ್ಥರು ವಿಶೇಷ ಜಾತ್ರೆ ನಡೆಸಿದ್ದಾರೆ. ಈ ವೇಳೆ, ಗ್ರಾಮಸ್ಥರು ತಲೆ ಮೇಲೆ ತೆಂಗಿನಕಾಯಿ ಒಡೆದುಕೊಂಡು ಮಳೆಗಾಗಿ ದೇವರ ಬಳಿ ಪ್ರಾರ್ಥನೆ ಮಾಡಿದ್ದಾರೆ.
ಖಾಜಿಸೊನ್ನೇನಹಳ್ಳಿ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಈ ಸಂಪ್ರದಾಯ ಮಾಡಿಕೊಂಡು ಬರುತ್ತಿದ್ದಾರೆ. ತೀವ್ರ ಬರಗಾಲ ಹಾಗೂ ಸಂಕಷ್ಟ ಎದುರಾದಾಗ ಪ್ರತಿ ಐದು ವರ್ಷಕ್ಕೊಮ್ಮೆ ಈ ಜಾತ್ರೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.
ಖಾಜಿಸೊನ್ನೇನಹಳ್ಳಿ ಗ್ರಾಮಸ್ಥರು ಗ್ರಾಮದ ಸಿದ್ಧೇಶ್ವರ ದೇವರ ಮೆರವಣಿಗೆ ನಡೆಸಿದರು. ತಲೆಯ ಮೇಲೆ ದೇವರನ್ನು ಹೊತ್ತು ಊರ ಹೊರಗಡೆ ವರೆಗೂ ಬಂದು ನಂತರ ನೀರಿನಲ್ಲಿ ದೇವರನ್ನಿಟ್ಟು ಪೂಜೆ ನೇರವೇರಿಸಿದರು.
ಈ ಸುದ್ದಿ ಓದಿದ್ದೀರಾ? ಅನಾರೋಗ್ಯ ಹಿನ್ನೆಲೆ; ರಾಹುಲ್ ಗಾಂಧಿ ಕೇರಳ ಚುನಾವಣಾ ಪ್ರಚಾರ ರದ್ದು
ಇದೇ ವೇಳೆ, ಸಾಂಪ್ರಾದಾಯಿಕವಾಗಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಹಾಲುಮತ ಸಮುದಾಯದಿಂದ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಮೂಲಕ ಮಳೆ ಬೆಳೆಗೆ ಪ್ರಾರ್ಥನೆ ಮಾಡಿದರು.
ಜಾತ್ರೆ ಹಿನ್ನೆಲೆ, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಹಿಳೆಯರು, ಮಕ್ಕಳು ಎಲ್ಲರೂ ತೋಟದ ಬಳಿ ಬಂದು ತೆಂಗಿನಕಾಯಿ ಒಡೆಯುವುದನ್ನ ನೋಡಿದರು. ನಾನಾ ಕಲಾ ತಂಡಗಳು ಜನರ ಮುಂದೆ ಹೆಜ್ಜೆ ಹಾಕಿದರು. ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.
ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಬಿಸಿಲಿನ ಶಾಖಕ್ಕೆ ಜನರು ಬೇಸತ್ತಿದ್ದಾರೆ. ತಂಪಾದ ಪಾನೀಯಗಳಿಗೆ ಹೆಚ್ಚಾಗಿ ಮೊರೆ ಹೋಗಿದ್ದಾರೆ. ಗ್ರಾಮಸ್ಥರ ಈ ವಿಶೇಷ ಜಾತ್ರೆ ಬಳಿಕ ಮಳೆಯಾಗುತ್ತಾ ಕಾದು ನೋಡಬೇಕಿದೆ.