ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ ರಚಿಸಲಾಗಿದ್ದ 2016ರ ಶಾಲಾ ಶಿಕ್ಷಕರ ನೇಮಕಾತಿ ಮಂಡಳಿಯನ್ನು ಉದ್ಯೋಗ ಹಗರಣದ ಹಿನ್ನೆಲೆಯಲ್ಲಿ ಕಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ. ಮಂಡಳಿಯಿಂದ ಆಯ್ಕೆಯಾಗಿದ್ದ ಸುಮಾರು 24 ಸಾವಿರ ಉದ್ಯೋಗಗಳನ್ನು ಕೋರ್ಟ್ ರದ್ದುಪಡಿಸಿದೆ.
ನ್ಯಾಯಮೂರ್ತಿಗಳಾದ ದೇಬಾಂಗ್ಸು ಬಾಸಕ್ ಹಾಗೂ ಎಂಡಿ ಶಬ್ಬೀರ್ ರಶ್ದಿ ನೇತೃತ್ವದ ಪೀಠ ವಿಚಾರಣೆಯ ಸಂದರ್ಭದಲ್ಲಿ ಅಕ್ರಮವಾಗಿ ನೇಮಕಗೊಂಡಿದ್ದ ಶಾಲಾ ಶಿಕ್ಷಕರು ನಾಲ್ಕು ವಾರಗಳೊಳಗೆ ತಮ್ಮ ವೇತನವನ್ನು ವಾಪಸ್ ನೀಡಬೇಕೆಂದು ನಿರ್ದೇಶಿಸಿತು. ಶಿಕ್ಷಕರಿಂದ ಹಣ ವಾಪಸ್ ಪಡೆಯುವ ಜವಾಬ್ದಾರಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನೀಡಲಾಗಿದೆ.
ನೇಮಕಾತಿ ಸಮಿತಿಯಿಂದ ರದ್ದುಗೊಂಡವರಲ್ಲಿ ಬೋಧಕೇತರ ಸಿಬ್ಬಂದಿ ಕೂಡ ಸೇರಿದ್ದು,2016ರಲ್ಲಿ ಶಾಲಾ ಶಿಕ್ಷಕ ನೇಮಕಾತಿ ಮಂಡಳಿಯ ಮೂಲಕ ಸರ್ಕಾರಿ ಹಾಗೂ ಅನುದಾನ ಸಹಿತ ಶಾಲೆಗಳಿಗೆ ಶಿಕ್ಷಕರಾಗಿ ನೇಮಕಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ
ನ್ಯಾಯಪೀಠವು ನೇಮಕಾತಿಯ ಸಂದರ್ಭದಲ್ಲಿ ಕೈಗೊಳ್ಳಲಾಗಿದ್ದ 23 ಒಎಂಆರ್ ಶೀಟ್‌ಗಳನ್ನು ಮರು ಮೌಲ್ಯಮಾಪನಗೊಳಿಸಬೇಕೆಂದು ಆದೇಶಿಸಿದೆ.
ನೇಮಕಾತಿಯ ಪ್ರಕ್ರಿಯೆಯ ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಕೈಗೊಳ್ಳಬೇಕೆಂದು ಆದೇಶಿಸಿದ ಪೀಠ ಮೂರು ತಿಂಗಳೊಳಗೆ ವರದಿ ನೀಡಬೇಕೆಂದು ನಿರ್ದೇಶಿಸಿತು.
ನೂತನ ನೇಮಕಾತಿ ಪ್ರಕ್ರಿಯೆ ಮಂಡಳಿಯನ್ನು ಆರಂಭಿಸಬೇಕೆಂದು ಶಿಕ್ಷಕ ನೇಮಕಾತಿ ಮಂಡಳಿಗೆ ಕೋರ್ಟ್ ಸೂಚನೆ ನೀಡಿದೆ.
2016ರಲ್ಲಿ ಶಿಕ್ಷಕ ನೇಮಕಾತಿ ಮಂಡಳಿಯು 24 ಸಾವಿರಕ್ಕೂ ಹೆಚ್ಚಿನ ಹುದ್ದೆಗಳಿಗೆ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆಯನ್ನು ಹಮ್ಮಿಕೊಂಡಿತ್ತು.
