ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಚೆಂಬು ಹಿಡಿದುಕೊಂಡು ಉಡುಪಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ಮಾಡುವ ಮೂಲಕ ಲೋಕಸಭಾ ಚುನಾವಣೆಯ ಪ್ರಚಾರ ನಡೆಸಿತು.
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ತೆರಿಗೆ ಪಾಲನ್ನು ನೀಡದೇ, ಜನರಲ್ಲಿ ಸುಳ್ಳನ್ನು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿಯ ಜನವಿರೋಧಿ ವರ್ತನೆಯನ್ನು ಖಂಡಿಸುವ ಸಲುವಾಗಿ ಇಡೀ ಬ್ಲಾಕ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನ ಅಭಿಯಾನ ನಡೆಸಿದರು. ಉಡುಪಿ ಬ್ಲಾಕ್ ನ 133 ಬೂತ್‌ಗಳಲ್ಲಿ ಕೂಡ ಪ್ರಚಾರಕ್ಕೆ ಹೋಗುವ ಕಾರ್ಯಕರ್ತರು ಈ ವಿಭಿನ್ನ ಅಭಿಯಾನದ ಮೂಲಕ ಮತಪ್ರಚಾರ ಮಾಡಿದರು.
ಈ ವೇಳೆ ಮಾತನಾಡಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಕೂಡ ಬಿಜೆಪಿಯ ಸಂಸದರು ಕೇಂದ್ರದ ಮುಂದೆ ಬಾಯಿ ಬಿಚ್ಚುತ್ತಿಲ್ಲ. ದೇಶದಲ್ಲಿಯೇ ಅತೀ ಹೆಚ್ಚು ತೆರಿಗೆ ಸಂಗ್ರಹ ಮಾಡುವ ರಾಜ್ಯವಿದ್ದರೆ, ಅದು ಕರ್ನಾಟಕ ಆಗಿದ್ದು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ನೀಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಕೂಡ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನೀಡದೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ನೀಡಿದ ಯಾವುದೇ ಭರವಸೆಗಳು ಈ ವರೆಗೆ ಈಡೇರಿಲ್ಲ. ಈ ಬಾರಿ ಮತ್ತೆ ದೇಶದ ಮತದಾರರು ಬಿಜೆಪಿಯನ್ನು ಬೆಂಬಲಿಸಿದರೆ ಮುಂದೆ ಪ್ರತಿಯೊಬ್ಬರಿಗೂ ಚೊಂಬೇ ಗತಿಯಾಗಲಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಹರೀಶ್ ಕಿಣಿ, ನಾಯಕರಾದ ನಾಗೇಶ್ ಉದ್ಯಾವರ, ಮಹಾಬಲ ಕುಂದರ್, ಆನಂದ ಪೂಜಾರಿ, ಸತೀಶ್ ಮಂಚಿ, ಸದಾಶಿವ ಪೂಜಾರಿ ಕಟ್ಟೆಗುಡ್ಡೆ ಸಂಧ್ಯಾ ತಿಲಕರಾಜ್, ಅರ್ಚನಾ, ನರಸಿಂಹ ಮೂರ್ತಿ, ರಾಜೇಶ್ ನಾಯಕ್, ಶರತ್ ಶೆಟ್ಟಿ, ಸತೀಶ್ ಪುತ್ರನ್, ಭರತ್, ಪ್ರಮೀಳಾ ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು.
