2018ರಲ್ಲಿ ಬೆಳಗಾವಿಯ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಮೊದಲಿಗೆ ಗೆದ್ದು ಶಾಸಕಿಯಾಗಿ ಇದೀಗ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಕ್ಷೇತ್ರದಿಂದ ಹೊರಗೆ ಹೆಚ್ಚಾಗಿ ಗುರುತಿಸಿಕೊಂಡಿಲ್ಲ.
ಮರಾಠ ಸಮುದಾಯದವರಾಗಿರುವ ಅಂಜಲಿ ನಿಂಬಾಳ್ಕರ್ ಅವರು 1976ರ ಆಗಸ್ಟ್ 22ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಜನಿಸಿದರು. ಇವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ದೇಶದ ಗೃಹ ಸಚಿವ ದಿವಂಗತ ಶಂಕರರಾವ್ ಚವ್ಹಾಣ ಅವರ ಮೊಮ್ಮಗಳು. ಇವರು ಮುಂಬೈನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಅವಕಾಶ ಸಿಕ್ಕ ಕೂಡಲೇ ಬೆಳಗಾವಿಯ ಸರ್ಕಾರಿ ದವಾಖಾನೆಯಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿದರು. ಖಾನಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಆರೋಗ್ಯ ರಕ್ಷಣೆ, ಶಿಕ್ಷಣದ ಪರಿಸ್ಥಿತಿ ಹಾಗೂ ಮಹಿಳೆಯರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ ಅವರು ರಾಜಕಾರಣಿಯಾಗಲು ನಿರ್ಧರಿಸಿದರು. ವೃತ್ತಿಯಲ್ಲಿ ವೈದ್ಯರಾಗಿರುವ ಅಂಜಲಿ ನಿಂಬಾಳ್ಕರ್ ಅವರು ವೈದ್ಯಕೀಯ ನಂತರ ರಾಜಕೀಯದತ್ತ ಒಲವು ತೋರಿದರು.
ಕೊಲ್ಲಾಪುರ ಮೂಲದವರಾದ ಹಾಗೂ ಕರ್ನಾಟಕ ಜನಪ್ರಿಯ ಐಪಿಎಸ್ ಅಧಿಕಾರಿಯಾದ ಹೇಮಂತ್ ನಿಂಬಾಳ್ಕರ್ ಅವರನ್ನು ವಿವಾಹವಾದರು.
ಅಂಜಲಿ ಅವರ ರಾಜಕೀಯ ಜೀವನ
2013ರಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಂಜಲಿ ನಿಂಬಾಳ್ಕರ್ ಅವರು ಸೋಲುಂಡಿದ್ದರು. ಬಳಿಕ, ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಕಾಂಗ್ರೆಸ್‌ಗೆ ಸೇರಿದ ಅಂಜಲಿ ನಿಂಬಾಳ್ಕರ್ ಅವರು 2018ರ ವಿಧಾನಸಭಾ ಚುನಾವಣೆ ಮೂಲಕ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗಿಳಿದಿದ್ದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಂಜಲಿ ನಿಂಬಾಳ್ಕರ್ 36,649 ಮತಗಳನ್ನು ಗಳಿಸುವ ಮೂಲಕ ಪ್ರತಿ ಸ್ಪರ್ಧಿಯಾಗಿದ್ದ ಬಿಜೆಪಿಯ ವಿಠ್ಠಲ್ ಹಲಗೇಕರ್ ವಿರುದ್ಧ 5,133 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಚುನಾವಣೆ ಪರೀಕ್ಷೆಗಿಳಿದಿದ್ದ ಅಂಜಲಿ ನಿಂಬಾಳ್ಕರ್ ಅವರು ಬಿಜೆಪಿ ಅಭ್ಯರ್ಥಿ ವಿಠಲ ಹಲಗೇಕರ ವಿರುದ್ಧ ಬರೋಬ್ಬರಿ 54,629 ಮತಗಳಿಂದ ಸೋಲುಂಡಿದ್ದರು.
ಇದೀಗ, ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ನಿಂಬಾಳ್ಕರ್ ಅವರಿಗೆ ಪಕ್ಷ ಉತ್ತರ ಕನ್ನಡದಲ್ಲಿ ಟಿಕೆಟ್ ನೀಡಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ನಿಂಬಾಳ್ಕರ್ ಅವರು ಗೆಲುವು ಸಾಧಿಸಿ ಸಂಸತ್ತಿಗೆ ಕಾಲಿಡುತ್ತಾರಾ ಎಂದು ಕಾದು ನೋಡಬೇಕಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹಿರಿಯ ನಾಯಕಿ ಮತ್ತು ವಕ್ತಾರರಾಗಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಿಂಬಾಳ್ಕರ್
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಇದು ಬೆಳಗಾವಿ ಜಿಲ್ಲೆಯ ಖಾನಾಪುರ, ಕಿತ್ತೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಗಳ್, ಶಿರಸಿ ಮತ್ತು ಯಲ್ಲಾಪುರ ಮುಂತಾದ ಕ್ಷೇತ್ರಗಳನ್ನು ಒಳಗೊಂಡಿದೆ. ಐವರು ಕಾಂಗ್ರೆಸ್ ಶಾಸಕರು ಮತ್ತು ಮೂವರು ಬಿಜೆಪಿ ಶಾಸಕರಿದ್ದಾರೆ.
‘ನಮ್ಮ ಪಕ್ಷ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ, ನಾವು ಸಂವಿಧಾನ ಬದಲಾವಣೆ ಮಾಡುತ್ತೇವೆ’ ಎಂದು ಸದಾ ಹೇಳಿಕೊಂಡು ತಿರುಗಾಡುವ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರು 1999ರಲ್ಲಿ ಒಂದು ಬಾರಿ ಹೊರತುಪಡಿಸಿ ಏಳು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಬಾರಿ ಅನಂತ ಕುಮಾರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಲಕಾಲಕ್ಕೆ ತನ್ನ ಅಭ್ಯರ್ಥಿಗಳನ್ನು ಬದಲಾಯಿಸಿದರೂ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿರಲಿಲ್ಲ. ಹೀಗಾಗಿ, ಕಾಂಗ್ರೆಸ್ 70 ವರ್ಷಗಳ ನಂತರ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯಲು ಯತ್ನಿಸುತ್ತಿದೆ. ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ನಿಂಬಾಳ್ಕರ್ ಅವರನ್ನು ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಡಾ.ಅಂಜಲಿ ನಿಂಬಾಳ್ಕರ್ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಸ್ಪರ್ಧಿಸಿದ್ದಾರೆ.
ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮರಾಠಾ ಸಮುದಾಯದ ಅಭ್ಯರ್ಥಿಯನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿದೆ. ಉನ್ನತ ಶಿಕ್ಷಣ ಪಡೆದ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಕಾಂಗ್ರೆಸ್ ದೊಡ್ಡ ತಂತ್ರವನ್ನು ರೂಪಿಸಿದೆ.
ಉತ್ತರ ಕನ್ನಡದ ಒಟ್ಟು ಮತದಾರರಲ್ಲಿ ಸುಮಾರು 5.5 ರಿಂದ 1.6 ಲಕ್ಷ ಮತದಾರರು ಮರಾಠಿ ಮಾತನಾಡುವವರಿದ್ದಾರೆ. ಇವರಲ್ಲಿ 3.20 ಲಕ್ಷಕ್ಕೂ ಹೆಚ್ಚು ಮತದಾರರು ಮರಾಠ ಸಮುದಾಯದವರು. ಖಾನಾಪುರ, ದಾಂಡೇಲಿ, ಜೋಯ್ಡ, ಮುಂಡಗೋಡ, ಯಲ್ಲಾಪುರ ಮತ್ತು ಕಾರವಾರ ತಾಲೂಕುಗಳಲ್ಲಿ ಮರಾಠಿ ಭಾಷಿಗರು ಹೆಚ್ಚಾಗಿ ಮರಾಠ ಸಮುದಾಯದವರು ಇದ್ದಾರೆ. ಇದಲ್ಲದೇ ಕಿತ್ತೂರು ಮತ್ತು ಯಲ್ಲಾಪುರದಲ್ಲಿ ಕನ್ನಡ ಮಾತನಾಡುವ ಮರಾಠ ಸಮುದಾಯವಿದೆ.
ಈ ಸುದ್ದಿ ಓದಿದ್ದೀರಾ? ವಿಶೇಷ ಜಾತ್ರೆ | ತಲೆ ಮೇಲೆ ತೆಂಗಿನಕಾಯಿ ಒಡೆದುಕೊಂಡು ಮಳೆಗಾಗಿ ಪ್ರಾರ್ಥನೆ ಮಾಡಿದ ಖಾಜಿಸೊನ್ನೇನಹಳ್ಳಿ ಗ್ರಾಮಸ್ಥರು
ಬ್ಯಾಂಕ್‌ನ ನಿರ್ದೇಶಕರ ಚುನಾವಣೆಗೆ ಸ್ಪರ್ಧೆ
ಇನ್ನು ಶಾಸಕಿಯಾಗಿದ್ದ ಅವಧಿಯಲ್ಲೇ ಅಂಜಲಿ ನಿಂಬಾಳ್ಕರ್ (2020) ಅವರು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಈ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು. ತೀವ್ರ ಪೈಪೋಟಿ ಏರ್ಪಟ್ಟಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಶಾಸಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅರವಿಂದ ಪಾಟೀಲ್ ಗೆಲುವು ಸಾಧಿಸಿದ್ದರು. ಶಾಸಕಿ ಅಂಜಲಿ ನಿಂಬಾಳ್ಕರ್ ಸೋಲುಕಂಡಿದ್ದರು.
ನಿಂಬಾಳ್ಕರ್ ಅವರು ಶಾಸಕಿಯಾಗಿ ಕೆಲಸ ಮಾಡುವಾಗ ಮೂಲ ಸೌಕರ್ಯ, ಶಿಕ್ಷಣದ ಜತೆಗೆ ಮಹಿಳಾ ಸಬಲೀಕರಣ, ಮಹಿಳಾ ಆರೋಗ್ಯಕ್ಕೆ ವಿಶೇಷ ಸೌಲಭ್ಯ ಕಲ್ಪಿಸಿದ್ದರು. ಖಾನಾಪುರದಲ್ಲಿ 60 ಹಾಸಿಗೆಯ ಮಗು-ತಾಯಿ ವಿಶೇಷ ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ. ತಾಲೂಕಾ ಆಸ್ಪತ್ರೆಗೆ 100 ಕೋಟಿ ಖರ್ಚು ಮಾಡಿ ಆಧುನಿಕ ರೂಪ ನೀಡುವ ಕೆಲಸ ಮಾಡಿದ್ದಾರೆ.
ಇವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೆಹಲಿ ನಾಯಕರೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ.
ಇದುವರೆಗೂ ಕರ್ನಾಟಕದ ಗಡಿ ಭಾಗದಲ್ಲಿರುವ ಮರಾಠ ಮತ್ತು ಮರಾಠಿ ಭಾಷಿಕ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಡಾ.ಅಂಜಲಿ ನಿಂಬಾಳ್ಕರ್ ಅವರು ಆಗಾಗ ಧ್ವನಿ ಎತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಆಂದೋಲನ ನಡೆದಾಗಲೆಲ್ಲ ಡಾ.ಅಂಜಲಿ ನಿಂಬಾಳ್ಕರ್ ಅವರು ಕರ್ನಾಟಕದ ಮರಾಠ ಸಮುದಾಯದ ಹಕ್ಕುಗಳ ಪರ ನಿಲ್ಲುತ್ತಿದ್ದರು. ಆದ್ದರಿಂದ, ಡಾ. ಅಂಜಲಿ ನಿಂಬಾಳ್ಕರ್ ಅವರು ಕರ್ನಾಟಕದ ಮರಾಠ ಸಮಾಜದ ಪ್ರಮುಖ ಮುಖಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ.
ಅದೇ ಸಮಯದಲ್ಲಿ, ಸಾಮಾನ್ಯ ಜನರ ಸಮಸ್ಯೆಯ ಬಗ್ಗೆ, ಅವರು ಅವಿರತವಾಗಿ ಶ್ರಮಿಸಿದ್ದಾರೆ. ಅನೇಕ ಜನರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಿದ್ದಾರೆ. ಮೊದಲ ಬಾರಿ ಶಾಸಕಿಯಾದರೂ ಅಂಜಲಿ ನಿಂಬಾಳ್ಕರ್ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಆದರೆ, ಅವರ ಕ್ಷೇತ್ರ ಹೊರತುಪಡಿಸಿ ಬೇರೆಡೆ ಹೆಚ್ಚಾಗಿ ಪ್ರಸಿದ್ಧಿ ಹೊಂದಿಲ್ಲ.
ಅಂಜಲಿ ನಿಂಬಾಳ್ಕರ್ ಅವರ ಒಟ್ಟು ಆಸ್ತಿ ₹14.03 ಕೋಟಿ, ಸಾಲ ₹92.9 ಲಕ್ಷ ಇದೆ ಎನ್ನಲಾಗಿದೆ.