ರಸ್ತೆಯ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದ ಮತದಾರರ ಮನವೊಲಿಸುವಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಸಫಲರಾಗಿದ್ದಾರೆ.
ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿಯ ಅಕ್ಷರ ಕರಾವಳಿ ರಸ್ತೆಯ ಅವ್ಯವಸ್ಥೆಯ ವಿರುದ್ಧ, ಸ್ಥಳೀಯ ಮತದಾರರು ಹಾಗೂ ಸಾರ್ವಜನಿಕರು ಒಟ್ಟುಸೇರಿಕೊಂಡು ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಿದ್ದರು.
ಈ ವಿಷಯ ತಿಳಿದ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಇಂದು ಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿಯ ಮತದಾರರು ಮತ್ತು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ, ಸ್ಥಳೀಯರ ಅಪೇಕ್ಷಿತ ರಸ್ತೆ ಕಾಮಗಾರಿಯ ಬಗ್ಗೆ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸಚಿವರ ಮಂಜೂರಾತಿ ಕಾಮಗಾರಿ ಪಟ್ಟಿಯಲ್ಲಿ ಈಗಾಗಲೇ ನಮೂದಾಗಿದ್ದು, ಮಂಜೂರಾದ ತಕ್ಷಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮನವೊಲಿಸಿದ್ದಾರೆ.
ಬಳಿಕ ಮತದಾರರು ಚುನಾವಣಾ ಬಹಿಷ್ಕಾರ ಹಿಂಪಡೆದು ಮತದಾನದಲ್ಲಿ ಭಾಗವಹಿಸಲು ಸಮ್ಮತಿ ಸೂಚಿಸಿದ್ದಾರೆ ಎಂದು ಬೆಳ್ಳೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರುಗಳಾದ ಶಿವಾಜಿ ಸುವರ್ಣ ಬೆಳ್ಳಿ ಹಾಗೂ ರಂಜನಿ ಹೆಗ್ಡೆಯವರು ಜಂಟಿ ಹೇಳಿಕೆಯಲ್ಲಿ ನೀಡಿದ್ದಾರೆ.
