ವಿಶ್ವ ಭೂ ದಿನ | ಬಿರು ಬೇಸಿಗೆಯಲ್ಲಿ ಜನ ಜಾನುವಾರುಗಳ ನೀರು ನೆಮ್ಮದಿ ಮತ್ತು ಅಭಿವೃದ್ಧಿಯ ಅಧ್ವಾನ

Date:

Advertisements

ನೀರು ನಿಲ್ಲುವ ಭೂ ರಚನೆಗಳೇ ‘ಅಭಿವೃದ್ಧಿ ವಿಕೋಪ’ಕ್ಕೆ ಬಲಿಯಾಗಿ ಅಳಿದು ಹೋಗುತ್ತಿರುವ ಈ ಕಾಲಸ್ಥಿತಿಯೊಳಗೆ ಉಂಟಾಗುತ್ತಿರುವ ಅಧ್ವಾನಗಳ ಹತೋಟಿಗಾದರೂ ಹಿಂದಿನವುಗಳನ್ನು ನೆನೆಯಬೇಕಾಗುವುದು‌. “ವಿಶ್ವ ಭೂದಿನ”ವಾದರೂ ಇವುಗಳು ನೆನಪಿಗೆ ಬರದೆ ಮರೆತು ಹೋದರೆ ಹೇಗೆ?

ದನಕುರಿಗೆ ನಾವು ಕಾಡು ಹಾದಿಯ ಹಿಡಿದು ಬಯಲುಗುಂಟ ಹೋಗುವಾಗ ಜೊತೆಗೆ ಕುಡಿಯುವ ನೀರು ಕೊಂಡೊಯ್ಯುವ ಒತ್ತಡ ಇರುತ್ತಿರಲಿಲ್ಲ. ಎಕೆಂದರೆ ನಮಗೆ ಮೊದಲೇ ಪರಿಚಯವಿರುತ್ತಿತ್ತು ಬಾಯಾರಿದರೆ ನೀರಿಗೆ ಹೋಗಲು ನೀರಿನ ಉಳಿಮೆ ನೈಸರ್ಗಿಕ ಸಾಗುವಳಿಯ ಜಾಗಗಳು. ಕೆರೆ, ಕಟ್ಟೆ ಅವುಗಳ ಹಳ್ಳಗಳು ಸ್ವಾಭಾವಿಕವಾಗಿಯೇ ನೀರಿನ ಹಿಡುವಳಿಗಳಾಗಿರುತಿದ್ದವು. ಭೂಮಿಯ ಮೇಲೆ ನಡೆಯುತ್ತಿರುವ ಮಾನವನ ದಬ್ಬಾಳಿಕೆ ಕಂಡರೆ ಹಾಳಾಗುತ್ತಿರುವ ಹಿಂದಿನ ಭೂರಚನೆಯ ನೆನೆದು ಹೆದರಿಕೆಯಾಗುವುದು. ಆಹಾರ ಬೆಳೆಗಳನ್ನು ಬೆಳೆಯುವ ಹೊಲಗಳಲ್ಲಿ ತೋಟಗಾರಿಕೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಬದುಕಿನ ಬಾಲಯಿಡಿದು ಭೂ ರಚನೆಯನ್ನೇ ಬುಡಮೇಲು ಮಾಡಿಕೊಂಡಿದ್ದೇವೆಂದು.‌ ಈಜು ಬರದವರು ಎಮ್ಮೆಯ ಬಾಲ ನಂಬಿ ನೀರಿಗಿಳಿದು ನಡುವೆ ಬಾಲ ಪಿಸುಕಿ ಆಸರೆಗೆ ಅಂಗಲಾಚುವ ಈಜುಗಾರನ ಪರಿಸ್ಥಿತಿಯಾಗಿದೆ. ಕಾಲಾಡಿಸಿದರೆ ಅಷ್ಟೇ ಸಾಕೆ? ಎಮ್ಮೆಯ ಬಾಲ ಹಿಡಿದ ಕೈಗಳಿಗೂ ಈಜುವ ಅನುಭವ ಇರಬೇಕಲ್ಲವೇ

ಬಾಯೊಡ್ಡಿದರೆ ಗಂಟಲು ನೆನೆಯುವ ಹಾಗೆ ನೀರಿನ ಬಸಿ ಕೈಗೆಟಕಿರುತ್ತಿತ್ತು ಉಗುರಿನ ತುದಿಗೆ ಸೋಕುವಷ್ಟು ಸಲೀಸಾಗಿ. ಆಕಾಶದಿಂದ ಬೀಳುವ ಮಳೆ ಹನಿಗಳಿಗೆ, ಬೇಸಿಗೆಯಲ್ಲಿ ಹಳ್ಳಗಳ ಬಸಿ ನೀರಿಗೆ ಬಾಯೊಡ್ಡಲು ಜೊಲ್ಲು ಸುರಿಸಿ ನಿಲ್ಲುತಿದ್ದೆವು ಆಸೆಯಿಂದ ಕಾಯುತ್ತಾ. ಬೇಸಿಗೆಯ ಬಿಸಿಲಿಗೆ ಹಳ್ಳಗಳು ಬೆವರಿದರೆ ಅವುಗಳ ಮೈಯ್ಯೊಳಗೆ ನೀರು ಹೊರಡುತ್ತಿದ್ದುದ್ದೇನೂ ನಮಗೆ ಹೊಸದಾಗಿರದೆ ಮಾಮೂಲಿಯಾಗಿರುತ್ತಿತ್ತು. ಕುಡಿಯುವ ನೀರನ್ನು ಬೇಸಿಗೆಯಲ್ಲೂ ಜೀವಿಗಳಿಗೆ ಒದಗಿಸಲು ಭೂಮಿ ಅಷ್ಟೊಂದು ಸಶಕ್ತವಾಗಿದ್ದ ಕಾಲವಿತ್ತಲ್ಲ? ಇತ್ತೀಚಿಗಷ್ಟೇ ಕಳೆದು ಹೋದ ದಶಕಗಳ ಹಿಂದೆ.

Advertisements

ದನಕುರಿಗಳ ಕಾವಲಿಗೆ ಹೋಗುತ್ತಿದ್ದ ನಾವೇನು, ಕೈಗುಂಟ ಕುಡಿಯುವ ನೀರನ್ನೇನು ಹಿಂದಗುಟೆಯೇ ಕೊಂಡೊಯ್ಯುತ್ತಿರಲಿಲ್ಲ ಬಾಯಾರಿದಾಗ ಕುಡಿಯಲು. ಬಾಟಲಿಗಳನ್ನು ಬೆನ್ನು ಮೇಲೆಳೆದುಕೊಂಡು ಹೋಗುತ್ತಿರಲಿಲ್ಲ  ದಣಿವಾರಿಸಿಕೊಳ್ಳಲು ಈಗಿನ ಹಾಗೆ. ಬಾಯಾರಿ ತೊಳ್ಳೆ ಒಣಗಿ ನಾಲಿಗೆ ಕಿತ್ತುಕೊಳ್ಳುವಂತಾದರೆ ಕೆರೆ, ಕಟ್ಟೆ, ಹಳ್ಳಗಳ ನೀರಿಗೆ ಆಡುಕುರಿಗಳ ಜೊತೆಯಲ್ಲೇ ನಮ್ಮ ಮುಸುಣಿಯನ್ನೂ ಇಟ್ಟು ಜಾನುವಾರುಗಳಂತೆಯೇ ಜಲ ಹೀರುತಿದ್ದೆವು. ಕುಡಿಯುತಿದ್ದೆವು ಕಳ್ಳು ತುಂಬಿ ಗಂಟಲಿಗೆ ನೀರು ಒತ್ತಲಿಸಿಕೊಂಡು ನೆತ್ತಿಗೇರಿ ಕೆಮ್ಮುವ ತನಕ. “ವಿಶ್ವ ಭೂದಿನ” ಪ್ರತಿ ವರ್ಷವಾದರೂ ಇವುಗಳು ನೆನಪಿಗೆ ಬರದೆ ಮರೆತು ಹೋದರೆ ಹೇಗೆ? ನೀರು ನಿಲ್ಲುವ ಭೂ ರಚನೆಗಳೇ ‘ಅಭಿವೃದ್ಧಿ ವಿಕೋಪ’ಕ್ಕೆ ಬಲಿಯಾಗಿ ಅಳಿದು ಹೋಗುತ್ತಿರುವ ಈ ಕಾಲಸ್ಥಿತಿಯೊಳಗೆ ಉಂಟಾಗುತ್ತಿರುವ ಅಧ್ವಾನಗಳ ಹತೋಟಿಗಾದರೂ ಹಿಂದಿನವುಗಳನ್ನು ನೆನೆಯಬೇಕಾಗುವುದು‌.

ಗಣಿಗಾರಿಕೆ1

ಬೇಸಿಗೆಯಲ್ಲಿ ಕೆರೆಗಳ ತುಂಬಾ ನೀರು ಅವುಗಳ ಕೋವುಗಳ ದೂರದ ತುದಿ ಮುಟ್ಟುವ ವರೆಗೆ. ಹಿಂಗಾರು ಮಳೆ ಬಂದರೆ ಹಳ್ಳಗಳ ಹೊಟ್ಟೆಯೊಳಗೆ ನೀರು ಜುಳುಜುಳನೆ ಹರಿಯುವ ಕಾಯಕವನ್ನು ಬೇಸಿಗೆಯಲ್ಲೂ  ಸಾಮಾನ್ಯವಾಗಿ ಮುದುವರಿಸಿರುತ್ತಿತ್ತು ನಮ್ಮ ಕಣ್ಣಳತೆಯ ದೂರವೂ ಕಾಣುವಷ್ಟು. ಬರಗಾಲದಲ್ಲೂ ಮರಳು ಬಾವಿ ನೀರು ದೊರೆಯುವಷ್ಟರ ಮಟ್ಟಿಗೆ ಭೂಮಿ ಮೇಲ್ಮೈಯ್ಯೊಳಗೆ ನೀರಿರುತ್ತಿತ್ತು. ಸ್ವತಃ ಮರಳು ಬಾವಿ ತೋಡಿ ನೀರು ಮೊಗೆದ ನಮಗೆಲ್ಲಾ ಗೊತ್ತಿರುವ ಹಾಗೆ.

ಮುಂಗಾರು ಮಳೆಯೊತ್ತಿಗೆ ಉಗಾದಿ ಹತ್ತಿರವಾದಂತೆಲ್ಲಾ ನವಮಿ ಹತ್ತಿರ ಮಾಡಿಕೊಂಡು, ಶಿವರಾತ್ರಿ ಹಿಂದಾಕಿಕೊಂಡು, ಸಂಕ್ರಾಂತಿ ಕಳೆದು ತಿಂಗಳುಗಳ ನಂತರವೂ ಹಳ್ಳಗಳು ನಿಧಾನವಾಗಿ ಬತ್ತದೆಯೇ, ನೀರಿನ ಪಯಣ ಸಾಗಿರುತ್ತಿತ್ತು ಅಡವಿಯೊಳಗಿನ ನೀರಿನ ಮಡಿಗಳ ಸಾಲಿನಲ್ಲಿ. ಜೋಪು ನೀರು ಹಳ್ಳಗಳ ಬಾಯೊಳಗೆ ಅಲ್ಲಲ್ಲೆ ಜೊಲ್ಲು ನೀರಿನ ಹಾಗೆ ಹಳ್ಳಗಳ ಸ್ವಾಟೆಯ ಕಲ್ಲು ಪೊಟರೆ, ಇರುಕು, ಸಂದುಗಳಲ್ಲಿ ಇಳಿಯರಿಯುತ್ತಲೇ ಇರುತ್ತಿತ್ತು.

ಬಾರೆಯೊಳಗೆ ಕುರಿದನಗಳನ್ನು ಬೇಸಿಗೆಯ ಬಿರುಬಿಸಿಲಿನೊಳಗೆ ಅವುಗಳ ಮೇವಿಗೆ ಅಡ್ಡಾಡಿಸಿಕೊಂಡು, ಹಳ್ಳಗಳ ಸರಗಳಿಗೆ ನೀರಿಗೆ ಬಂದರೆ, ಹುಲ್ಲಿನ ಮೋಟು, ತಾಟು, ಬೇರು, ಬುಡ, ಕಡ್ಡಿ, ಕಂಕಿ, ಕೂಳೆ, ಗರಿಗಳನ್ನು ಉರುವಿಕೊಂಡು ಉಗಾದಿ ವರ್ಸತೊಡಿಕಿನ ಮೂಳೆ ಮೇಲೆ ಬೆಂದ ಬಾಡಿನ್ನು ಬಾಯಾಡುವ ಹಾಗೆ ಮೇವುಂಡ ರಾಸುಗಳು ಬಿಸಿಲಿನ ಝಳ ತಡೆಯದೆ ಹಳ್ಳಗಳ ಜೋಪು ಮೂಸಿರಿಯುತ್ತಾ ಸರಗಳಗುಂಟ ಬಂದು ಕೆರೆಗಳ ನೀರಿಗೆ ಇಳಿದು ಕಳ್ಳು ತುಂಬಾ ಕೆರೆ ನೀರು ಕುಡಿದು ನಿಧಾನವಾಗುತಿದ್ದವು.

ಬಿರುಬೇಸಿಗೆಯಲ್ಲೂ ಹಳ್ಳಗಳಲ್ಲಿ ಜೋಪುನೀರು ಕಾವಳಿಗೆ ಒಳಗಿನ ಇಳ್ಳೇವಿನ ಎಲೆ ಸಿಗುಳಿನ ಹಾಗೆ ಸಿಗುಳುಸಿಗುಳಾಗಿ ಹರಿಯುವುದ ಕಂಡು ನಾವೂ ಕೈಕಾಲು ನೆನೆಸಿಕೊಳ್ಳುವುದು, ಸುಡುವ ಹೆಜ್ಜೆಗಳನ್ನು ಜೋಪಿಗೆ ಅದಿಯುವುದು, ತಲೆ ಒದ್ದೆ ಮಾಡಿಕೊಳ್ಳುವುದು, ಮುಖಕ್ಕೆ ನೀರೆಸೆದುಕೊಳ್ಳುವುದು, ವೋಟೋಟು ದೂರ ನೀರಿನ ಹಾದಿ ಹೋಗಿರುವಂತೆಲ್ಲಾ ನಡೆಯುವುದು, ಹೆಗಲ ಮೇಲಿನ ಅರಿವೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೆ ಅದನ್ನು ಅಳಿದು ಹರಿಯುವ ಜೋಪಿನ ಮೇಲೆ ಹಾಸಿ ಒದ್ದರಿವೆ ಮಾಡಿ ತಲೆಗೆ ಕಟ್ಟಿಕೊಳ್ಳುವ, ತಲೆಗೆ ತಂಪು ಮಾಡಿಕೊಳ್ಳುವ ಪಾಠಗಳನ್ನು ನಮಗೆ ಪ್ರಕೃತಿಯೇ ಕಲಿಸಿತ್ತು.

ತಲೆ ಬುರುಡೆ ವೊಟತ್ತು ಅರಿವೆ ಒಣಗುವ ತನಕ ತಣ್ಣಗಾಗುತ್ತಿತ್ತು ಬಗಲ ಹಾದಿಯ ಬೆನ್ನುರಿಯ ನರನಾಡಿಯನ್ನೂ ತಂಪುಮಾಡಿ. ಒದ್ದರುವೆ ಮಾಡಿ ನೀರು ಸ್ವಾರೆಯ ಹೆಗಲಿಗಿಟ್ಟ ಎಲೆ ಕಟ್ಟಿನ ಹಾಗೆ ತಣ್ಣೊಂದು ತಣ್ಣಗಾಗುತಿತ್ತು ಒದ್ದರಿವೆ ಸುತ್ತಿಕೊಂಡ ತಲೆಬುರುಡೆ. ಹಾಗೆ ಪದೇಪದೇ ಮಾಡಿಕೊಳ್ಳುತಿದ್ದೆವು, ಬಿಸಿಲಿನ ಬೇಗೆ ತಡೆಯಲಾಗದೆ ತಣ್ಣಂದೊತ್ತಿನ ತನಕ. ಸೂರ್ಯ ಉರಿದು ಸುಸ್ತಾಗಿ ಇಳಿಮುಖ ಮಾಡಿಕೊಳ್ಳುವರೆಗೂ ಒಮ್ಮೊಮ್ಮೆ ರಾಸುಗಳು ನಾವು ನೀರಿನ ತಾವು ಬಿಟ್ಟು ಆಚೀಚೆ ಅರುಗಾಗುತ್ತಿರಲಿಲ್ಲ.

ಆಡುಕುರಿ ಕಾಯೋರಿಗೆ ಗುಡ್ಡಗಳ ನೆತ್ತಿ ವಾಲುಗಳಲ್ಲಿ ದೊಣೆಗಳು ಇರುತ್ತಿದ್ದವು ನೀರಿನ ಆಸರೆಗಳಿಗಾಗಿ. ನಡೆಯುತ್ತಿರುವ ಗಣಿಗಾರಿಕೆ ಈಗ ನೆತ್ತಿಗೆ ತಣ್ಣನೆಯ ನೆರಳು ನೀಡುತಿದ್ದ ಗವಿಗಳು, ದೊಣೆಗಳನ್ನು ಮುರಿದು ಅವುಗಳ ಊರಗಲದ ದವಡೆಗೆ ಒಸಕಿ ಹಾಕಿಕೊಂಡಿವೆ. ಬೇಸಿಗೆಯ ಕಾಲದಲ್ಲಿ ಕಾಡುಪ್ರಾಣಿಗಳ ಕುಡಿಯುವ ನೀರಿಗೆ ನಿಸರ್ಗವೇ ಸೃಷ್ಟಿಸಿದ ನೀರಿನ ಅರವಿಗಳು ದೊಣೆಗಳು. ವನ್ಯಜೀವಿಗಳ ವಸತಿ ಸೌಕರ್ಯಗಳಾಗಿರುತ್ತಿದ್ದವು ಅಲ್ಲಿರುತ್ತಿದ್ದ ಹತ್ತು ಹಲವು ಗವಿಗಳು. ದೊಣೆ ನೀರಿಗೆ ದನಕುರಿಗಳ ಬಿಟ್ಟು ಹತ್ತಿರದ ಗವಿಗಳೊಳಗೆ ಕೂತರೆ ರಾಸುಗಳು ದೊಣೆಗಳ ನೀರುಕುಡಿದು, ಅವುಗಳ ಸುತ್ತಲೂ ಒಣಗಿದ ಹುಲ್ಲು ಮೇದು ಅವುಗಳ ಹೊಟ್ಟೆ ತುಂಬಿಸಿಕೊಂಡು ಬಾಯಿ ಕಮ್ಮಗಾಗಿ ಅವೂ ಇಳಿ ಹೊತ್ತಿನ ತನಕ ಮರಗಿಡಗಳ ನೆರಳಿಡಿಯುತಿದ್ದವು ಮಲಗಿ ಉಂಡ ಮೇವು ಮೆಲುಕಾಡಲು. ಮಲಗಿ ಮೆಲುಕಾಡಿ ಬಿಸಿಲಿನ ರವಸು ಕಡಿಮೆಯಾದ ಕೂಡಲೇ ಕೊಟ್ಟಿಗೆಯ ಹಾದಿಯಿಡಿಯುತ್ತಿದ್ದವು ಗ್ವಾಂದಿಗೆಯ ತಲೆಮೇವು, ಬಾನಿಯ ನೀರು ನೆನಪಿಸಿಕೊಂಡವುಗಳಾಗಿ ಹೊರಟು ನಿಲ್ಲುತಿದ್ದವು; ಸುಡುವ ನೆಲದ ಕಾಲ್ದಾರಿಗಳ ನಡೆದು. ಮಳೆಗಾಲಕ್ಕೂ, ಬೇಸಿಗೆಯ ಕಾಲಕ್ಕೂ ಜನ ಜಾನುವಾರು ಬೇಸಾಯಗಳಿಗೆ ಒಗ್ಗುವ ಭೂವಲಯ ನಮ್ಮ ಸುತ್ತಲೂ ನಮ್ಮನ್ನು ನೆಮ್ಮದಿಯಾಗಿಯೇ ಇಟ್ಟುಕೊಂಡಿತ್ತು. ನಿಸರ್ಗ ಒದಗಿಸಿದ ಸ್ವಾಭಾವಿಕವಾದ ಸೌಕರಣೆಗೆ ತಕ್ಕ ಹಾಗೆ ನಮ್ಮ ಬೇಸಾಯ ಮತ್ತು ಪಶುಪಾಲನೆಯೂ ಒಗ್ಗಿ ಹೋಗಿತ್ತು.

ಹುಲ್ಲುಗಾವಲು ಸೀಮೆಯ, ಬೋಳುಗುಡ್ಡಗಳ ಬೆಟ್ಟಗಳಾದರೂ ಮರಮಂಡಿಗಳೂ ಅಲ್ಲಲ್ಲೆ ಹೇರಳವಾಗಿರುತ್ತಿದ್ದವು. ಬೀಡು ಕಬ್ಬಿಣದ ಅದಿರು ಹೇರಳವಾಗಿರುವ ನಮ್ಮ ಹತ್ತಿರದ ಗುಡ್ಡಗಳಲ್ಲಿ ಶತಮಾನಗಳ ಕಾಲ ಬಾಳಿಕೆಗೆ ಬರುವ ಗಟ್ಟಿಯಾದ ಕಮರದ ಸಾಲುವನಗಳು ಬೆಳೆದ ಪ್ರದೇಶ. ಹಾಗೆಯೇ ಸೊಸಿ ಮರಗಳಾಗುವ ಮೊದಲೇ ಕೊಲೆಯಾಗುವ ಗಂಧದ ಗಿಡಗಳೂ ಬೆಳೆಯುವ ಜಾಗ. ಮುರಿದು ಬಿದ್ದ ಹೊನ್ನೇ ಮರಗಳ ಕಳೇಬರಗಳನ್ನೂ ಕಾಣುವ ಅರಣ್ಯಗಳಿವೆ.

ಮಲೆನಾಡಿನ ಸೀಮೆಯಲ್ಲಿ ಎತ್ತರವಾಗಿ ಬೆಳೆಯುವ ಮರಗಳಂತಿರದಿದ್ದರೂ ವೈನಾಗಿ ಬೆಳೆದು ಕೊಂಬೆಗಳ ಚಾಚಿ ನೆರಳು ನೀಡುತಿದ್ದ ಮರಮಂಡಿಗಳಿಗೇನು ನಾವು ಕಾಣುವ ಹಾಗೆ ಕೊರತೆಯೇ ಇರಲಿಲ್ಲ. ಭೂಮಿಯನ್ನು ಸುರಕ್ಷಿತವಾಗಿಡುವ ಬೇಸಾಯದ ಬದುಕನ್ನು ಜನ ಮುಂದುವರಿಸಿದ್ದರಿಂದ ಬೇಸಿಗೆಯಲ್ಲೂ ವಾತಾವರಣ ಬಿಸಿಲಿನ ದಗೆ ತಡೆದುಕೊಳ್ಳುವಷ್ಟರ ಮಟ್ಟಿಗೆ ತಂಪೆರೆಯುತ್ತಿತ್ತು. ಹೊಂಗೆಸೊಪ್ಪು, ಮುತ್ತುಗದ ಎಲೆ ತಲೆಗೆ ಕಟ್ಟಿಕೊಂಡರೆ ನೆತ್ತಿ ತಣ್ಣಗಾಗುವ ಹಾಗಾದರೂ ಒಣ ಹವೆಯ ಸಮತೋಲನ ಇರುತ್ತಿತ್ತು.

ಗಣಿಗಾರಿಕೆ2

ಜೆಲ್ಲಿ, ಸೈಜು, ಮರಳು, ಮಣ್ಣು, ಮರ, ಕಲ್ಲು ಮಿತವಾದ ಬಳಕೆಯಲ್ಲಿತ್ತು ಒಂದು ಕಾಲಕ್ಕೆ. ಮೇವಿಗೆ, ಮನೆಗೆ, ಬೇಸಾಯದ ಬಳಕೆಗೆ ಮರಗಳನ್ನು ಬುಡಸಮೇತ ತೆಗೆಯದೆ ಅವುಗಳ ಕೊಂಬೆಗಳನ್ನಷ್ಟೇ ಬಳಸಿ ಮರ ಉಳಿಸುವ ಅವಕಾಶವಿರುತ್ತಿತ್ತು. ಹಳ್ಳಗಳ ಮುಚ್ಚಿ ಬೇಸಾಯ ಮಾಡಿದುದರ ಸಲುವಾಗಿ ಕೆರೆಗಳು ಹಳ್ಳಗಳ ಕರುಳುಬಳ್ಳಿಯ ಸಂಬಂಧವನ್ನು ಶಾಶ್ವತವಾಗಿ ಕಳೆದುಕೊಂಡಿವೆ. ಎಲ್ಲೋ, ಯಾಕೋ ಗಣಿಗಾರಿಕೆ ನಡೆಯುತ್ತದೆಯಂತೆ ಎಂದು ಕೇಳಿರುತಿದ್ದೆವು. ಗಣಿಗಾರಿಕೆ ಈಗ ನಮ್ಮ ಹೊಲಗಳ ತಲೆದಿಂಬಿನೊಳಗೇ ನಡೆದು ಬೇಸಾಯದ ಬದುಕನ್ನು ಕದರೊಡೆದಿರುವುದು ಧೂಳು ಬಗ್ಗಡ ಮಾಡಿ. ತೋಟ ಮಾಡಲು ಮುಂದಾದ ಬೆಳೆಗಾರರು ಎಲ್ಲಾ ಕೆರೆಗಳು, ಹಳ್ಳಗಳು, ಸಾಲುಸಾಲು ಸಣ್ಣ ಬೆಟ್ಟಗಳ ಬಗೆದು ಮುಕ್ಕು ಮಾಡಿದ್ದಾರೆ. ಬೇಸಾಯ ಮತ್ತು ಅಭಿವೃದ್ಧಿ ಸಾಧಿಸಲು ಹೋಗಿ ಭೂಮಿ ಹೊಡಕು ಮಡಿಕೆಯಾಗಿದೆ.

ಹೊಡಕು ಮಣ್ಣೆಂಟೆಯಾಗಿರುವುದು ಪೃಥ್ವಿ.

WhatsApp Image 2023 09 02 at 11.06.04
ಉಜ್ಜಜ್ಜಿ ರಾಜಣ್ಣ
+ posts

ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಉಜ್ಜಜ್ಜಿ ರಾಜಣ್ಣ
ಉಜ್ಜಜ್ಜಿ ರಾಜಣ್ಣ
ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

Download Eedina App Android / iOS

X