ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಇನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮತ್ತೆ ಬಿಜೆಪಿಯಿಂದ ತೇಜಸ್ವಿ ಸೂರ್ಯ ಕಣಕ್ಕಿಳಿದಿದ್ದರೇ, ಕಾಂಗ್ರೆಸ್‌ನಿಂದ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಅವರು ಸ್ಪರ್ಧಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಸಂಸತ್ತಿನ ಗಾದಿ ಯಾರಿಗೆ ಒಲಿಯಲಿದೆ ಎಂದು ಕಾದು ನೋಡಬೇಕಿದೆ.
1977ರಲ್ಲಿ ಕ್ಞೇತ್ರ ವಿಂಗಡನೆಯ ನಂತರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಇಂದಿನವರೆಗೂ ನಡೆದ 12 ಚುನಾವಣೆಗಳಲ್ಲಿ 3 ಬಾರಿ ಜನತಾ ಪಕ್ಷ, ಒಮ್ಮೆ ಕಾಂಗ್ರೆಸ್ ಹಾಗೂ 8 ಬಾರಿ ಭಾರತೀಯ ಜನತಾ ಪಕ್ಷ ಗೆದ್ದಿದೆ. ಬಿಜೆಪಿಯ ನಾಯಕರಾಗಿದ್ದ ಅನಂತ್ ಕುಮಾರ್ ಅವರು ಸತತವಾಗಿ 6 ಬಾರಿ ಈ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದರು. ಇವರ ಬಳಿಕ 2019ರಲ್ಲಿ ತೇಜಸ್ವಿ ಸೂರ್ಯ ಅವರು ಬಿಜೆಪಿಯಿಂದ ಟಿಕೆಟ್ ಪಡೆದು ಮೋದಿ ಅಲೆಯಲ್ಲಿ ಗೆದ್ದು ಬಂದಿದ್ದರು.
ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಭೇದಿಸಲು ಸೌಮ್ಯ ರೆಡ್ಡಿಯವರು ಅಖಾಡಕ್ಕೆ ಇಳಿದಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಮತದಾರರ ಒಲವು ಯಾರ ಕಡೆಗಿದೆ ಎಂಬ ಬಗ್ಗೆ ತಿಳಿಯಲು ಖುದ್ದು ಈ ದಿನ.ಕಾಮ್ ಫೀಲ್ಡ್‌ಗೆ ಇಳಿದು ಸಮೀಕ್ಷೆ ನಡೆಸಿದೆ.
ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ 1989ರಲ್ಲಿ ಒಮ್ಮೆ ಗೆಲುವು ಸಾಧಿಸಿದ ಬಳಿಕ, ಈ ಕ್ಷೇತ್ರದ ಗೆಲುವು ಮರೀಚಿಕೆಯಾಗಿದೆ. ಇನ್ನು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು ಮತಗಳಿಕೆಗೆ ಸಹಾಯವಾಗಿದೆ. ಮಹಿಳೆಯರ ಮತ ಕಾಂಗ್ರೆಸ್‌ಗೆ ಎಂದೆನ್ನಬಹುದಾಗಿದೆ. ಇನ್ನು ಈ ಕ್ಷೇತ್ರದ ಪುರುಷರು ಧರ್ಮ, ಜಾತಿಯ ಹಿಂದೆ ಇನ್ನು ಬಿದ್ದಿದ್ದಾರೆ ಎಂದೆನ್ನಬಹುದಾಗಿದೆ. ಹಾಗಾಗಿ, ಇಲ್ಲಿ ಮತ ಹಾಕುವುದು ಶೇ.80 ರಿಂದ ಶೇ.90 ಜಾತಿ ನೋಡಿಯೇ…
ತೇಜಸ್ವಿ ಸೂರ್ಯ ಅವರು ಕಳೆದ ಐದು ವರ್ಷಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಕೇಳಿದರೇ, ನಾವು ಇಲ್ಲಿ ಮೋದಿ ಮುಖ ನೋಡಿಕೊಂಡು ಮತ ಹಾಕುತ್ತೇವೆ ಎಂದೆನ್ನುತ್ತಾರೆ. ಅಲ್ಲೇ ಇದ್ದ ಇನ್ನು ಕೆಲವು ಜನ ಮೋದಿ ಮುಖ ಇರೋದು ದೆಹಲಿಯಲ್ಲಿ ಆ ಯಪ್ಪ ಇಲ್ಲಿಗೆ ಬರೋದು ಚುನಾವಣಾ ಸಮಯದಲ್ಲಿ ಹೊರತು ಬೇರೆ ಸಮಯದಲ್ಲಿ ಬಂದು ನಮ್ಮ ಕಷ್ಟ ಬಗೆಹರಿಸೊದಿಲ್ಲ ಎಂದು ಕೌಂಟರ್ ಕೊಟ್ಟಿದ್ದಾರೆ.
ಕಳೆದ ಬಾರಿ ತೇಜಸ್ವಿ ಸೂರ್ಯ ಅವರಿಗೆ ಹಾಕಿದ ಮತ ಈ ಬಾರಿ ಸೌಮ್ಯ ಅವರಿಗೆ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹಲವು ಮತದಾರರು ತಮ್ಮ ಅಭಿಪ್ರಾಯವನ್ನು ನಮ್ಮ ಮುಂದೆ ವ್ಯಕ್ತಪಡಿಸಿದ್ದಾರೆ.
ಈ ಮತ ಸಂಸದ ತೇಜಸ್ವಿ ಸೂರ್ಯ ಅವರಿಂದ ಸೌಮ್ಯ ರೆಡ್ಡಿ ಅವರಿಗೆ ಬದಲಾವಣೆಯಾಗಲು ಪ್ರಮುಖ ಕಾರಣ ಸೂರ್ಯ ಅವರು ಇಷ್ಟು ವರ್ಷಗಳಲ್ಲಿ ಒಂದು ಬಾರಿಯೂ ನಮ್ಮನ್ನು ಬಂದು ಕಂಡಿಲ್ಲ. ನಮ್ಮ ಸಮಸ್ಯೆ ಬಗ್ಗೆ ಕೇಳಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂಬುದಾಗಿದೆ.
ಇನ್ನು ಕೆಲವು ಮತದಾರರು ಕಳೆದ ಬಾರಿ ಅಂದರೆ, 2019ರ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಪರ ಮತ ಹಾಕಿದ್ದೇವೆ. ಆದರೆ, ತೇಜಸ್ವಿ ಸೂರ್ಯ ಅವರು ಈ ಐದು ವರ್ಷ ಸಂಪೂರ್ಣ ಕೋಮು ದ್ವೇಷ ಹರಡುವ ಭಾಷಣ ಮಾಡುವಲ್ಲಿಯೇ ದಿನಗಳನ್ನು ಕಳೆದಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ, ಈ ಹಿಂದೆ 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತ ಕೇಳಲು ಬಂದಿದ್ದ ಸೂರ್ಯ ಅವರು ಇಷ್ಟು ವರ್ಷಗಳ ಬಳಿಕ ಮತ್ತೆ ಮತ ಕೇಳೋಕೆ ಬಂದಿದ್ದಾರೆ ಎಂದಿದ್ದಾರೆ.
ಸೌಮ್ಯ ರೆಡ್ಡಿ ಅವರು ಕ್ಷೇತ್ರಕ್ಕೆ ಹೊಸ ಮುಖವಾಗಿದ್ದು, ಈ ಬಾರಿ ಮಹಿಳೆಯೊಬ್ಬರು ಗೆಲ್ಲಲಿ, ಅವರಿಗೂ ಅವಕಾಶ ಕೊಡುವುದರಲ್ಲಿ ತಪ್ಪೇನೂ, ಈಗಾಗಲೇ ಗೆಲುವು ಕಂಡು ಏನು ಕೆಲಸ ಮಾಡದ ವ್ಯಕ್ತಿಗೆ ಮತ್ತೆ ನಮ್ಮ ಮತ ನೀಡಿ ನಾವು ಮೋಸ ಹೋಗಬೇಕೆ ಎಂದು ಕೇಳಿದ್ದಾರೆ.
ಇನ್ನು ಕೆಲವರು ನಮಗೆ ರಾಜ್ಯದಲ್ಲಿ ಕಾಂಗ್ರೆಸ್ ಇರಬೇಕು. ಕೇಂದ್ರದಲ್ಲಿ ಬಿಜೆಪಿ ಇರಬೇಕು. ಮೋದಿ ಮುಖ ನೋಡಿ ನಾವು ಮತ ಹಾಕುತ್ತೇವೆ. ಮೋದಿಯಿಂದಲೇ ನಮ್ಮ ದೇಶ ಉಳಿದಿದೆ. ಮೋದಿ ಇಲ್ಲದಿದ್ದರೇ, ಈ ದೇಶ ನಶಿಸಿ ಹೋಗುತ್ತೆ. ಮೋದಿ ಇದ್ದರೇ, ನಮ್ಮ ಧರ್ಮ ಉಳಿಯುತ್ತೆ, ಇಲ್ಲದಿದ್ದರೇ, ನಮ್ಮ ಧರ್ಮವನ್ನು ಹಾಳು ಮಾಡುತ್ತಾರೆ ಎಂಬ ಭಾಷಣ ಬಿಗಿದಿದ್ದಾರೆ. ಮೋದಿ ಅವರು ಇಷ್ಟು ವರ್ಷ ಏನು ಮಾಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಮಾತ್ರ ಕೆಲವು ಜನರ ಬಳಿ ಉತ್ತರವಿಲ್ಲ. ಆದರೆ, ಮೋದಿ, ಮೋದಿ ಎಂಬ ಭಜನೆ ಮಾತ್ರ ಬಿಟ್ಟಿಲ್ಲ.
ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರ ಆಡಳಿತ ಚೆನ್ನಾಗಿದೆ. ತುಂಬಾ ಕೆಲಸ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಅವರು ಮಾಡಿರುವ ಎರಡು ಕೆಲಸಗಳ ಬಗ್ಗೆ ತಿಳಿಸಿ ಎಂದರೆ, ಮತ್ತೆ ಅದೇ ಎಂಬತೆ ತುಂಬಾ ಕೆಲಸ ಮಾಡಿದ್ದಾರೆ ಎಂದೆನ್ನುತ್ತಾರೆ.
ವಿಜಯನಗರ ನಿವಾಸಿ ಫಿಲಿಪ್ ರಾಜ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಈ ಬಾರಿ ನನ್ನ ಒಲವು ಕಾಂಗ್ರೆಸ್ ಪರವಿದೆ. ಕಾಂಗ್ರೆಸ್ ನವರು ಏನು ನುಡಿದಿದ್ದಾರೆ. ಆ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿ ಅವರು ಇಲ್ಲಿಯವರೆಗೂ ನುಡಿದ ಕೆಲಸವನ್ನು ಏನೂ ಮಾಡಿಲ್ಲ. ಬರೀ ಭಾಷಣಕ್ಕಷ್ಟೇ ಅವರ ಮಾತುಗಳು ಸೀಮಿತವಾಗಿವೆ. ಕಳೆದ ಐದು ವರ್ಷಗಳಲ್ಲಿ ತೇಜಸ್ವಿ ಸೂರ್ಯ ಅವರನ್ನು ಒಮ್ಮೆಯೂ ಕ್ಷೇತ್ರದಲ್ಲಿ ಕಂಡಿಲ್ಲ. ಕೋಮು ಗಲಭೆ ಮಾಡುವುದಕ್ಕೆ ತೇಜಸ್ವಿ ಸೂರ್ಯ ಅವರು ಇರೋದು. ಕಳೆದ ಹತ್ತು ವರ್ಷಗಳಲ್ಲಿ ಕೋಮು ಗಲಭೆ ಹೆಚ್ಚಳವಾಗಿದೆ. ಅದರಲ್ಲಿಯೂ ರಾಮಮಂದಿರ ನಿರ್ಮಾಣವಾದ ಬಳಿಕ ಕೋಮು ಗಲಭೆ ಜಾಸ್ತಿ ಆಗತಾ ಇದೆ” ಎಂದು ಹೇಳಿದರು.
ಪ್ರಶಾಂತನಗರ ನಿವಾಸಿ ಸದಾಶಿವ ಈ ದಿನ.ಕಾಮ್ ಜತೆಗೆ ಮಾತನಾಡಿ, “ಬಿಜೆಪಿ ಕಳೆದ 10 ವರ್ಷದಿಂದ ಆಡಳಿತ ನಡೆಸಿದೆ. ಈ ಬಾರಿ ಕಾಂಗ್ರೆಸ್‌ಗೆ ನಮ್ಮ ಒಲವು ಜಾಸ್ತಿ ಆಗಿದೆ. ಈ ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆ ತಂದಿದ್ದಾರೆ. ಇದರಿಂದ ಜನಕ್ಕೆ ಉಪಯೋಗ ಆಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ-ಮುಸ್ಲಿಂ ಮಧ್ಯೆ ಗಲಾಟೆ ಹೆಚ್ಚಳ ಆಗಿದೆ. ಬಿಜೆಪಿಯವರು ಮುಸ್ಲಿಂ ಬಗ್ಗೆ ಹೆಚ್ಚಾಗಿ ಮಾತಾಡತಾರೆ. ನಾವು ಯಾವುದೇ ಪ್ರಾಣಿ-ಪಕ್ಷಿಗೆ ಹೋಗಿ ಕಲ್ಲೇಸೆದು ಅಥವಾ ಅವುಗಳನ್ನು ಕೆಣಕಿದರೇ ತಾನೇ ಅದು ನಮ್ಮ ಮೇಲೆ ಬೀಳುತ್ತೆ. ಮುಸ್ಲಿಂ ಅವರ ಮೇಲೆ ಬಿಜೆಪಿಯವರು ಬೀಳುತ್ತಾರೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈದಿನ ಸಮೀಕ್ಷೆ | ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ!
“ಸೌಮ್ಯ ರೆಡ್ಡಿ ಅವರು ಒಮ್ಮೆ ಶಾಸಕಿಯಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಸಂಸದೆಯಾಗಿ ಕೆಲಸ ಮಾಡಲಿ. ತೇಜಸ್ವಿ ಸೂರ್ಯ ಅವರನ್ನು ಕಳೆದು ಐದು ವರ್ಷದಲ್ಲಿ ಒಮ್ಮೆಯೂ ನೋಡಿಲ್ಲ ಈಗ ಮತ್ತೆ ಮತ ಕೆಳೋಕೆ ಬಂದಿದ್ದಾರೆ. ಕೋಮು ಗಲಭೆ ಹರಡುವ ತರ ಮಾತಾಡುತ್ತಾರೆ. ಈ ಬಾರಿ ಅವರನ್ನು ಹಿಮ್ಮೆಟ್ಟಿಸೋಣ. ವಾಜಪೇಯಿ ಅವರಿಂದ ಬಿಜೆಪಿ ಬಂದಿದೆ. ಇಲ್ಲಿಯವರೂ ಏನು ಕೆಲಸ ಮಾಡಿಲ್ಲ” ಎಂದು ಹೇಳಿದ್ದಾರೆ.
“ಮೋದಿ ಹೆಸರು ಹೇಳಕೊಂಡು, ಇವು ಗಂಟು ಮಾಡಿಕೊಂಡು ಆಸ್ತಿ ಮಾಡಕೊತ್ತಾ ಇದ್ದಾರೆ. ಅದನ್ನು ಬಿಟ್ಟು ಬೇರೆನೂ ಇಲ್ಲ. ಬಡವರ ಪಕ್ಷ ಕಾಂಗ್ರೆಸ್ ಪಕ್ಷ. ಈ ಬಾರಿ ನಮಗೆ ಕೇಂದ್ರದಲ್ಲಿಯೂ ಕಾಂಗ್ರೆಸ್ ಬರಬೇಕು. ದೇಶ, ದೇಶ ಅಂದ್ರೆ ಹೊಟ್ಟೆ ತುಂಬಾತ್ತಾ. ನಮ್ಮ ದೇಶ ಅಂದ್ರೆ ನಮಗೂ ಹೆಮ್ಮೆ ಇದೆ. ಗೋವಿಂದರಾಜನಗರದಲ್ಲಿ ಅವರನ್ನು ಇಲ್ಲಿಯವರೆಗೂ ನೋಡಿಯೇ ಇಲ್ಲ. ಜನ ಅಭಿವೃದ್ಧಿ ಮಾಡಿದಾರೇ, ಮಾಡಿದಾರೇ ಅಂತ ಅನತಾ ಇದರೇ, ಬರಿ ಅನ್ನೊದೇ ಆಯ್ತು ನಾವು ಇಲ್ಲಿಯವರೆಗೂ ನೋಡಿಲ್ಲ. ಬೇರೆಯವರಿಗೂ ಅವಕಾಶ ಕೊಡಿ. ಈ ಬಾರಿ ಮಹಿಳೆ ಮುಂದೆ ಬರಬೇಕು” ಎಂದು ಎಮ್‌ಸಿ ಲೇಔಟ್ ನಿವಾಸಿ ವಿಜಯಮ್ಮ ತಿಳಿಸಿದ್ದಾರೆ.
“ಚುನಾವಣೆ ನಡೆದಾಗ ಮಾತ್ರ ತೇಜಸ್ವಿ ಸೂರ್ಯ ಅವರು ನಮ್ಮ ಬಳಿ ಬರತಾರೆ, ಈ ಬಾರಿ ಸೌಮ್ಯ ರೆಡ್ಡಿ ಅವರನ್ನ ಗೆಲ್ಲಿಸಬೇಕು ಎಂಬುದು ನಮ್ಮ ಅಭಿಲಾಷೆ ಇದೆ” ಎಂದು ಗೋವಿಂದರಾಜನಗರ ನಿವಾಸಿ ಕೃಷ್ಣಯ್ಯ ತಿಳಿಸಿದ್ದಾರೆ.
“ತೇಜಸ್ವಿ ಸೂರ್ಯ ಅವರು ಆ ಹೆಸರು ಇಟ್ಟುಕೊಂಡಿದ್ದು ತುಂಬಾ ತಪ್ಪು. ಈ ಹೆಸರಿನ ಬದಲಾಗಿ ತೇಜಸ್ವಿ ಬೆಂಕಿ ಅಂತ ಅವರು ಹೆಸರು ಇಟ್ಟುಕೊಳ್ಳಬೇಕು. ಯಾಕಂದರೇ, ಅವರು ಎಲ್ಲಿ ಹೋದರೆ, ಬೆಂಕಿ ಇಡೋ ಕೆಲಸಾನೇ ಮಾಡಿರೋದು. ಒಬ್ಬ ಸಂಸದನ ಮೇಲೆ ಮೂರು-ನಾಲ್ಕು ಪ್ರಕರಣ ದಾಖಲಾಗಿರುವುದು ಇದೇ ಮೊದಲು. ಇವರು ಬರೀ ಕೋಮು ದ್ವೇಷ್ ಹುಟ್ಟಿಸುವ ಕೆಲಸ ಮಾಡುತ್ತಾರೆ. ಸರ್ವಜನಾಂಗದ ಶಾಂತಿಯ ತೋಟವನ್ನು ಹಾಳು ಮಾಡುವ ಜನರಿಗೆ ತಕ್ಕ ಬುದ್ಧಿ ಕಲಿಸಬೇಕು” ಎಂದು ಗೋವಿಂದರಾಜನಗರ ನಿವಾಸಿ ಗುರುಶಂಕರ್ ಈ ದಿನ.ಕಾಮ್‌ಗೆ ಹೇಳಿದ್ದಾರೆ.
ಮೂಡಲಪಾಳ್ಯ ನಿವಾಸಿ ಕರಿಬಸವಯ್ಯ ಈ ದಿನ.ಕಾಮ್ ಜೆತೆಗೆ ಮಾತನಾಡಿ, “ಈ ಬಾರಿ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ತಂದಿರೊದರಿಂದ ಏನಾಗುತ್ತೆ ಗೊತ್ತಿಲ್ಲ. ಆದರೆ, ಮೋದಿ ಅವರನ್ನು ಈ ದೇಶ ಕಳಕೊಂಡ ಮೇಲೆ ಗೊತ್ತಾಗುತ್ತೆ. ದೇಶದ ಭವಿಷ್ಯ ಅಷ್ಟೊಂದು ಸುಲಭವಲ್ಲ. ಇಲ್ಲಿ ಜನಕ್ಕೆ ಎಂಪಿ ಯಾರು ಎಂಎಲ್‌ಎ ಯಾರು ಅನ್ನೋದೇ ಗೊತ್ತಿಲ್ಲ. ಇಲ್ಲಿ ಕೆಲಸಗಳಿಗೆ ಎಂಎಲ್‌ಎಗಳನ್ನು ಬಳಸಿಕೊಳ್ಳಬೇಕು. ಈ ಬಾರಿ ಮೋದಿ ಅವರು ಬರದಿದ್ದರೇ, ಹಿಂದೂ ಧರ್ಮ ನಶಿಸಿ ಹೋಗುತ್ತೆ, ಸಂವಿಧಾನದಲ್ಲಿ ಕೆಲವು ಕಾಯ್ದೆಗಳನ್ನು ಬದಲು ಮಾಡಬೇಕೆಂದು ಅದಕ್ಕೆ ಅವರು ಹೇಳತಾ ಇದ್ದಾರೆ. ದೇಶ ಚೆನ್ನಾಗಿದ್ದರೇ ನಮ್ಮೂರು ಚೆನ್ನಾಗಿರುತ್ತೆ” ಎಂದು ಹೇಳಿದ್ದಾರೆ.
ಬಸವನಗುಡಿ ರವೀಂದ್ರ ಈ ದಿನ.ಕಾಮ್ ಜತೆಗೆ ಮಾತನಾಡಿ, “ನಮ್ಮ ಒಲವು ತೇಜಸ್ವಿ ಸೂರ್ಯ ಅವರ ಪರವಾಗಿದೆ. ನಮಗೆ ಬಿಜೆಪಿ ಬೇಕು. ದೇಶ ಉಳಿಬೇಕು ಅಂದರೆ, ಮೋದಿ ಬೇಕು, ಮೋದಿ ಬೇಕು ಅಂದರೆ ಗೆಲ್ಲಬೇಕು. ನಾವು ಮೋದಿ ಅವರಿಗೋಸ್ಕರ ಮತ ನೀಡುತ್ತೇವೆ” ಎಂದಿದ್ದಾರೆ.