2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ 2024ರವರೆಗೆ 10 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ತಮ್ಮ ಅಧಿಕಾರದ ಅವಧಿಯಲ್ಲಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಒಳಗೊಂಡು ಬಿಜೆಪಿಯ ಎಲ್ಲ ನಾಯಕರು ತಮ್ಮ ಭಾಷಣಗಳಲ್ಲಿ ಹೇಳಿಕೊಂಡು ಬರುತ್ತಿರುವುದಲ್ಲದೆ, ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ನೀಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಬಡವರ ಪ್ರಮಾಣ ತಗ್ಗಿದೆ. ಬಡವರು ಮಧ್ಯಮ ವರ್ಗಕ್ಕೆ ಏರಿದ್ದಾರೆ. ಹಸಿವಿನಿಂದ ಬಳಲುವ ಸ್ಥಿತಿ ಇಲ್ಲ ಎಂದು ಹೇಳುತ್ತಲೇ ಇದ್ದಾರೆ. ಬಡತನದ ಜಾಗತಿಕ ಸೂಚ್ಯಂಕದಲ್ಲಿ ಭಾರತ 126ನೇ ಸ್ಥಾನಕ್ಕೆ ಕುಸಿದಿದ್ದರೂ ಮೋದಿ ಸರ್ಕಾರ ಅದನ್ನು ಒಪ್ಪಿಕೊಳ್ಳುತ್ತಿಲ್ಲ.
ನಿಜಕ್ಕೂ ಕೇಂದ್ರದ ಯೋಜನೆಗಳು ಬಡಜನರನ್ನು ತಲುಪಿದೆಯೇ? ನೇರವಾಗಿ ಅವರಿಗೆ ಸಹಾಯವಾಗಿದೆಯೇ ಎಂದು ನೋಡಿದರೆ ನಿಜಬಣ್ಣ ಬಯಲಾಗುತ್ತದೆ. ಯೋಜನೆಯನ್ನು ಜನರಿಗೆ ತಲುಪಿಸುವುದಕ್ಕಿಂತ ಪ್ರಚಾರ ಪಡೆಯುವುದೇ ಮೋದಿಯವರಿಗೆ ಮುಖ್ಯವಾಗಿದೆ. ಮಾಧ್ಯಮಗಳ ಜಾಹೀರಾತಿಗಾಗಿಯೇ ಕೋಟ್ಯಂತರ ಹಣ ವ್ಯಯ ಮಾಡಿದೆ. ಇತ್ತೀಚೆಗೆ ʼಈ ದಿನ.ಕಾಮ್ʼ ನಡೆಸಿದ ಸಮೀಕ್ಷೆಯಲ್ಲಿ ಕೇಂದ್ರದ ಯೋಜನೆಗಳ ಬಂಡವಾಳ ಬಯಲಾಗಿದೆ. ನೆಪಮಾತ್ರಕ್ಕೆ ನಮಗೆ ಯೋಜನೆ ತಲುಪಿವೆ ಎಂದು ರಾಜ್ಯದ ಜನ ಹೇಳುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರದ ಯೋಜನೆಗಳು ನೇರವಾಗಿ ತಲುಪಿವೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆರಂಭಿಸಿದ ಐದು ಗ್ಯಾರಂಟಿ ಯೋಜನೆಗಳು ಹಾಗೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪರಿಚಯಿಸಿದ ಯೋಜನೆಗಳಲ್ಲಿ ಸಾರ್ವಜನಿಕರ ಅಭಿವೃದ್ಧಿಗೆ ಅನುಕೂಲವಾದ ಯೋಜನೆಗಳು ಯಾವುದು ಎಂಬುದರ ಬಗ್ಗೆ ಈ ದಿನ.ಕಾಮ್ ಸಮೀಕ್ಷೆ ಹಮ್ಮಿಕೊಂಡಿದ್ದು, ಜನತೆ ಕಾಂಗ್ರೆಸ್ ಸರ್ಕಾರದ ಯೋಜನೆಗಳು ನೇರವಾಗಿ ತಲುಪಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಮೊದಲ ದಿನದಿಂದಲೇ ಕ್ರಾಂತಿಕಾರಿ ಯೋಜನೆಗಳಾದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ, 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯಿರುವ ಗೃಹ ಜ್ಯೋತಿ, ಬಡವರಿಗೆ ಪ್ರತಿ ತಿಂಗಳು ಅಕ್ಕಿ ನೀಡುವ ಅನ್ನಭಾಗ್ಯ, ಮನೆಯೊಡತಿಗೆ 2 ಸಾವಿರ ನೀಡುವ ಗೃಹಲಕ್ಷ್ಮಿ ಹಾಗೂ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು 1500- 3000 ಸಾವಿರ ನೀಡುವ ಯುವ ನಿಧಿ ಯೋಜನೆಗಳನ್ನು ಜಾರಿಗೊಳಿಸಿತ್ತು. ರಾಜ್ಯ ಸರ್ಕಾರದ ಎಲ್ಲ ಯೋಜನೆಗಳು ನೇರವಾಗಿ ನಮಗೆ ತಲುಪಿವೆ ಅಥವಾ ನಮ್ಮ ಕುಟುಂಬಕ್ಕೆ ಸಹಾಯಕವಾಗಿವೆ ಎಂದು ಬಹುತೇಕ ಜನತೆ ಸಮೀಕ್ಷೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ.
ಬಡತನದ ಬೇಗೆಯಿಂದ ಬೇಯುತ್ತಿದ್ದ ಕರ್ನಾಟಕದ ಲಕ್ಷಾಂತರ ಕುಟುಂಬಗಳು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ತಮ್ಮ ಬದುಕನ್ನು ಹಸನು ಮಾಡಿಕೊಂಡಿರುವುದಲ್ಲದೆ ಅಭಿವೃದ್ಧಿಯ ಮೆಟ್ಟಿಲನ್ನು ಹತ್ತಲು ಸಹಾಯಕವಾಗುತ್ತಿದೆ. ಇವರಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ರ್ಯಾಂಕ್ ಬಂದ ನೂರಾರು ವಿದ್ಯಾರ್ಥಿಗಳಿದ್ದಾರೆ, ಸ್ವಂತ ಉದ್ಯೋಗ ಕಟ್ಟಿಕೊಂಡವರು ಲಕ್ಷಾಂತರ ಮಂದಿ ಕೂಡ ಇದ್ದಾರೆ. ಆದರೆ ಮೋದಿ ಸರ್ಕಾರದ ಯೋಜನೆಗಳು ಕೇವಲ ಜಾಹೀರಾತುಗಳಲ್ಲಿ ಮಾತ್ರ ಕಾಣಿಸುತ್ತಿದೆ. ತಮ್ಮನ್ನು ತಲುಪಿದ್ದು ಅಷ್ಟಕಷ್ಟೆ ಎಂದಿದ್ದಾರೆ.
ಕೇಂದ್ರದ ಯೋಜನೆಗಳು ಅನುಕೂಲವಾಗಿವೆ ಎಂದವರು ಶೇ.20.31 ಮಾತ್ರ
ಈ ದಿನ.ಕಾಂ ಜನರ ಬಳಿ ಹೋಗಿ ಕೈಗೊಂಡ ಸಮೀಕ್ಷೆಯಲ್ಲಿ ಕೇಂದ್ರ ಸರ್ಕಾರದ 10 ವರ್ಷ ಹಾಗೂ ರಾಜ್ಯ ಸರ್ಕಾರದ ಒಂದು ವರ್ಷದ ಯೋಜನೆಗಳಲ್ಲಿ ಕರ್ನಾಟಕದ ಗ್ಯಾರಂಟಿ ಯೋಜನೆಗಳು ನಮ್ಮ ಜೀವನಕ್ಕೆ ಸಹಾಯಕವಾಗಿವೆ ಎಂದು ಶೇ. 39.67 ಮಂದಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಯೋಜನೆಗಳ ಬಗ್ಗೆ ಮಾತನಾಡಿರುವ ಮತದಾರರು ಶೇ.20.31 ರಷ್ಟು ಮಾತ್ರ ಅನುಕೂಲವಾಗಿದೆ ಎಂದು ಹೇಳಿದ್ದಾರೆ. ಶೇ.26.31 ಸಾರ್ವಜನಿಕರು ರಾಜ್ಯ ಹಾಗೂ ಕೇಂದ್ರ ಎರಡೂ ಯೋಜನೆಗಳು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ. ಗೊತ್ತಿಲ್ಲ ಎಂದವರು ಶೇ.5.52 ರಷ್ಟು ಇದ್ದರೆ, ಶೇ.4.97 ರಷ್ಟು ಮಂದಿ ಯಾವುದೇ ಮಾಹಿತಿಯನ್ನು ದಾಖಲಿಸಿಲ್ಲ.
ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಿದೆ ಎಂದವರು ಇವರು
ಶೇ.37.01 ನಿರುದ್ಯೋಗಿಗಳು, ಶೇ.34.38 ರಷ್ಟು ಮಂದಿ ತಿಂಗಳ ಆದಾಯ 25 ಸಾವಿರಕ್ಕಿಂತ ಕಡಿಮೆಯಿರುವವರು, ಶೇ. 43.75 ಮಂದಿ 1 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರು, 10 ಅಥವಾ ಅದಕ್ಕಿಂತ ಹೆಚ್ಚು ಎಕರೆ ಜಮೀನು ಹೊಂದಿರುವವ ಶೇ.29, ಕೂಲಿ ಕಾರ್ಮಿಕರು ಶೇ. 45.35. ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಯಾವ ವಯೋಮಾನದವರು ಏನೆಂದರು?
70-100 ವಯೋಮಾನದ ಶೇ. 40.11, 55-70 ವಯೋಮಾನದ ಶೇ. 42.67, 45-55 ವಯೋಮಾನದ ಶೇ. 45.88, 25-35 ವಯೋಮಾನದ ಶೇ 47.43, 35-45 ವಯೋಮಾನದ ಶೇ 45.49 ಹಾಗೂ 18-25 ವಯೋಮಾನದ 49.67 ಮತದಾರರು ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
