ಮೂಲಭೂತ ಸೌಕರ್ಯಗಳ ಕೊರತೆಯಿಂದ ಬೇಸತ್ತ ಶಿವಮೊಗ್ಗ ಜಿಲ್ಲೆಯ ಕೆಲವು ಹಳ್ಳಿಗಳ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವುದರ ಮೂಲಕ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗುಂಬೆ ಹೋಬಳಿಯ ಕಣಗಲು, ಸುರುಳಿಗದ್ದೆ ಹಾಗೂ ಉಳುಮಡಿ ಗ್ರಾಮಗಳಲ್ಲಿ ಸುಮಾರು 45 ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿ ಅನೇಕ ವರ್ಷಗಳಿಂದ ಮೂಲಭೂತ ಸೌಕರ್ಯಗಳಾದ ರಸ್ತೆ, ಕರೆಂಟ್ ವ್ಯವಸ್ಥೆಗಳಿಲ್ಲ. ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಜೊತೆಗೆ ಇಲ್ಲಿನ ಯುವಕರಿಗೆ ಮದುವೆಗೆ ಹೆಣ್ಣು ಕೊಡದಿರಿವುದು, ಕಾಡು ಪ್ರಾಣಿಗಳ ಸಮಸ್ಯೆ ಮತ್ತು ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರು ಕ್ಯಾರೇ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸ್ಥಳೀಯ ಸುರೇಶ್, ಕಳೆದ ಎಂಟು ತಿಂಗಳ ಹಿಂದೆ ತಲ್ಲೂರಂಗಡಿ ಕೈಮರದಿಂದ ಉಳುಮಡಿ ಹೋಗುವ ಸುಮಾರು 5 ಕಿಮೀ ರಸ್ತೆ ಕಾಮಗಾರಿ ಮಾಡಲಾಗಿತ್ತು. ಆದರೆ, ಇದೀಗ ಅಲ್ಲಲ್ಲಿ ರಸ್ತೆ ಕಿತ್ತು ಬಂದು ಕಳಪೆಯಾಗಿದೆ. ಕಾಡು ಪ್ರಾಣಿಗಳ ಸಮಸ್ಯೆ ಮತ್ತು ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ ಎಂದರು.
ಈ ಪ್ರದೇಶ ನಕ್ಸಲ್ ಪೀಡಿತ ಪ್ರದೇಶಕ್ಕೆ ಒಳಪಟ್ಟಿದ್ದು, ಮೂಲಭೂತ ಸೌಕರ್ಯಗಳು ದೊರಕುತ್ತಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಚುನಾವಣಾ ಬಹಿಷ್ಕಾರ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಈಗಾಗಲೇ ಮಲೆನಾಡಿನ ಸಮಸ್ಯೆಗಳಾದ ಕಾಡು ಪ್ರಾಣಿಗಳ ದಾಳಿ, ಸೆಕ್ಷನ್ 4, ಡೀಮ್ಸ್ ಫಾರೆಸ್ಟ್, ಸಾಗುವಳಿ ಚೀಟಿ, ಹಕ್ಕುಪತ್ರ, ಕೃಷಿ ಸಂಬಂಧಿತ ರೋಗಗಳು, ನೂರು ಬೆಡ್ ಆಸ್ಪತ್ರೆ ಸೇರಿದಂತೆ ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಎದುರಿಸುತ್ತಿದ್ದು ಈ ಬಗ್ಗೆ ಮನವಿಯನ್ನು ಕೂಡ ಸಲ್ಲಿಸಲಾಗಿದೆ ಎಂದರು.
ಮನವಿ ಪತ್ರದಲ್ಲಿ ತಿಳಿಸಿರುವಂತೆ
ಬಿಫೋರ್ 78, ಪಾರಂಪರಿಕ ಅರಣ್ಯ ಹಕ್ಕು ಫಾರ ನಂಬರ್ 50, 53, 57 ಮತ್ತು ನಿವೇಶನಕ್ಕೆ ವಾಸದ ಮನೆಗೆ ಹಾಕಿದ 94ಸಿ, 94 ಸಿಸಿ ಅರ್ಜಿಗಳು ಇನ್ನೂ ಸಮರ್ಪಕವಾದ ರೀತಿಯಲ್ಲಿ ಅಂದರೆ ಹಕ್ಕು ಪತ್ರಗಳಾಗಿ ಫಲಾನುಭವಿಗಳ ಕೈಗೆ ಸಿಕ್ಕಿಲ್ಲ. ಪಹಣಿ ಸಿಕ್ಕವರಿಗೆ ಪಟ್ಟ ಪೋಡಿ ಆಗಿಲ್ಲ. ಇದನ್ನು ತಕ್ಷಣ ಬಗೆ ಹರಿಸಬೇಕು. ಅರಣ್ಯ ಕಾಯ್ದೆಗಳಿಂದ ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ತೊಂದರೆ ಆಗಿದೆ.
ಶೃಂಗೇರಿಯಿಂದ ಮಂಗಳೂರು ಸಂಪರ್ಕಿಸುವ ಕೆರೆಕಟ್ಟೆ ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ತಡೆಯುಂಟು ಮಾಡುತ್ತಿದ್ದು, ಹತ್ತಾರು ವರ್ಷಗಳಿಂದ ರಸ್ತೆ ಅಭಿವೃದ್ಧಿ ಸಾಧ್ಯವಾಗಿಲ್ಲ. ದಿನನಿತ್ಯ ಸಾವಿರಾರು ಪ್ರಯಾಣಿಕರು ಆಸ್ಪತ್ರೆಗೆ ಹಾಗೂ ಉದ್ಯೋಗಕ್ಕೆ ಪ್ರಯಾಣಿಸುತ್ತಾರೆ. ಕಡಿದಾದ ರಸ್ತೆಯಿಂದ ನಿರಂತರ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.
ಶೃಂಗೇರಿ ಸುತ್ತಮುತ್ತ ಯಾವುದೇ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ನೂರು ಬೆಡ್ ಆಸ್ಪತ್ರೆ ಮಂಜೂರು ಮಾಡಲಾಗಿದ್ದರೂ, ಅರಣ್ಯ ಇಲಾಖೆಯ ಹಸ್ತಕ್ಷೇಪದಿಂದ ಇದುವರೆಗೂ ಜಾಗ ಮಂಜೂರಾತಿ ಸಾಧ್ಯವಾಗಿಲ್ಲ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸಂತ್ರಸ್ತರಿಗೆ ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ.ಅಲ್ಲಿ ವಾಸವಾಗಿರುವ ಜನರನ್ನು ಶತ್ರುಗಳಂತೆ ನೋಡುವ ಪರಿಪಾಠ ಅರಣ್ಯ ಇಲಾಖೆ ಮಾಡಿಕೊಂಡಿದೆ.
ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯದ ವಿಚಾರದಲ್ಲಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ, ವರದಿ ತಯಾರಿಸಬೇಕು. ಈಗ ಸಿದ್ಧವಾಗಿರುವ ವರದಿ ಕೈ ಬಿಡಬೇಕು.
ಮಲೆನಾಡಿನ ಪರಿಸರ ಸಂಬಂಧಿತ ಹೋರಾಟಗಳಲ್ಲಿ ಹೊರಗಿನ ಎನ್.ಜಿ.ಒಗಳ ಹಸ್ತಕ್ಷೇಪ ಲಾಭಿ ಅವ್ಯಾಹತವಾಗಿ ನಡೆಯುತ್ತಿದ್ದು, ಇದು ಮಲೆನಾಡಿಗಾರನ್ನು ಭೂ ಕಳ್ಳರ ರೀತಿ ನೋಡುವಂತೆ ಆಗಿದೆ. ಇದಕ್ಕೆ ತಡೆ ಹಿಡಿಯಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಚುನಾವಣೆಗಳು ಬರುವಾಗ ಮಾತ್ರ ರಾಜಕಾರಣಿಗಳು ಕಾಣಿಸಿಕೊಳ್ಳುವಂತಹ ಇಂದಿನ ದಿನಗಳಲ್ಲಿ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವಂತೆ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡುತ್ತಿದ್ದು ಅಧಿಕಾರಿಗಳು, ರಾಜಕಾರಣಿಗಳು ಗ್ರಾಮಸ್ಥರ ಮನವೊಲಿಸಿ ಮತದಾನ ಮಾಡುವಂತೆ ಪ್ರೇರೆಪಿಸುತ್ತಾರಾ ಎಂದು ಕಾದುನೋಡಬೇಕಿದೆ.
