‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ, ದೇಶದ ಸಂಪತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹೋಗುತ್ತದೆ’ ಎಂಬಿತ್ಯಾದಿ ಕೋಮುವಾದಿ ಮಾತನ್ನಾಡುವ, ಸಮುದಾಯಗಳಲ್ಲಿ ಕೋಮು ದ್ವೇಷ ಬಿತ್ತುವ ಪ್ರಧಾನಿ ಮೋದಿ ದೇಶಕ್ಕೆ ಬೇಕೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಪ್ರಶ್ನೆ ಮಾಡಿದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ರಾಜ್ಯಕ್ಕೆ ನ್ಯಾಯಯುತವಾಗಿ ಕೊಡಬೇಕಿರುವ ಬರ ಪರಿಹಾರದ ಹಣವನ್ನು ಕೇಂದ್ರ ಸರಕಾರ ಒಂದು ವಾರದಲ್ಲಿ ನಿರ್ಧಾರ ಮಾಡುವುದಾಗಿ ಹೇಳಿದೆ. ಕೇಂದ್ರದಿಂದ ಬರ ಪರಿಹಾರದ ಹಣ ಬಂದರೆ ರಾಜ್ಯದ ಪ್ರತಿಯೊಬ್ಬ ನೋಂದಾಯಿತ ರೈತರ ಖಾತೆಗೆ 13 ಸಾವಿರ ಹಣವನ್ನು ರಾಜ್ಯ ಸರಕಾರ ನೀಡಲು ಸಾಧ್ಯವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೆ.ಸುಧಾಕರ್ ಅವರ ವಿರುದ್ಧ ಸ್ವಪಕ್ಷೀಯರಿಂದಲೇ ವಿರೋಧಿ ಅಲೆ ಎದ್ದಿದೆ. ಅದು ಕಳೆದ ಬಾರಿಗಿಂತ ಈ ಬಾರಿ ದೊಡ್ಡ ಮಟ್ಟದಲ್ಲಿ ಇದೆ. ಕ್ಷೇತ್ರದ ಯಾವ ಭಾಗಕ್ಕೆ ಹೋದರು ಸುಧಾಕರ್ ಅವರ ಕೋವಿಡ್ ಹಗರಣ ವಿಚಾರವನ್ನು ಜನ ಹೇಳುತ್ತಾರೆ. ಅದರ ಕುರಿತು ತನಿಖೆ ನಡೆಯುತ್ತಿದೆ. ಸಾಬೀತಾದರೆ ಅವರು ಕ್ಷೇತ್ರದಲ್ಲಿ ಇರುವುದಿಲ್ಲ. ಹಾಗಾಗಿ ಸರಳ ಸಜ್ಜನಿಕೆಯ ರಕ್ಷಾ ರಾಮಯ್ಯ ಅವರನ್ನು ಬೆಂಬಲಿಸಿ” ಎಂದು ಮನವಿ ಮಾಡಿದರು.
“ಸಿದ್ದರಾಮಯ್ಯ ಅವರನ್ನು ಒಕ್ಕಲಿಗ ವಿರೋಧಿ ಎಂದಿರುವ ಕೆ ಸುಧಾಕರ್ ಅವರೇ 2011ರಲ್ಲಿ ಯಾರ ಜತೆಗೆ ಇದ್ದಿರಿ ನೀವು ಎಂಬುದನ್ನು ಮರೆಯಬೇಡಿ. ಸಿದ್ದರಾಮಯ್ಯ ಅವರಿಗೆ ಯಾವುದೇ ಜಾತಿ ಬೇಧವಿಲ್ಲ. ಎಲ್ಲರನ್ನೂ ಸಮಾನ ದೃಷ್ಟಿಯಿಂದಲೇ ಕಾಣುತ್ತಾರೆ. ಆದರೆ ನೀವು ಕ್ಷೇತ್ರದ ಸಾಕಷ್ಟು ಮಂದಿ ಒಕ್ಕಲಿಗ ಸಮುದಾಯದವರ ಮೇಲೆ ಕೇಸು ದಾಖಲಿಸಿದ್ದೀರಿ. ಅಶ್ವತ್ಥ್ ರೆಡ್ಡಿ, ಭಕ್ತರಹಳ್ಳಿ ಸುರೇಶ್, ಆಂಜಿನಪ್ಪ, ನಾರಾಯಣಸ್ವಾಮಿ, ಮಾಜಿ ಶಾಸಕ ಬಚ್ಚೇಗೌಡ, ಜಗಧಿಶ್, ವೆಂಕಟೇಶ್ ಸೇರಿದಂತೆ ಹಲವಾರು ಮಂದಿ ಒಕ್ಕಲಿಗ ಸಮುದಾಯದವರ ಮೇಲೆ ಕೇಸ್ ಹಾಕಿದ್ದೀರಿ. ನೀವು ಯಾರ ಪರ ಇದ್ದೀರಾ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಚುನಾವಣೆಯಲ್ಲಿ ಇದಕ್ಕೆಲ್ಲಾ ತಕ್ಕ ಉತ್ತರ ಸಿಗಲಿದೆ” ಎಂದು ಮಾರ್ಮಿಕವಾಗಿ ನುಡಿದರು.
“ಕೆ ಸುಧಾಕರ್ ಅವರು ಸಚಿವರಾಗಿದ್ದಾಗ ನರ್ಸ್‌ಗಳಿಂದಲೂ ಹಣ ವಸೂಲಿ ಮಾಡಿದ್ದಾರೆ. ವೈದ್ಯಕೀಯ ಕಾಲೇಜು ಸಹಾಯಕ ಪ್ರಾಧ್ಯಾಪಕರ ಬಳಿ ವಸೂಲಿ ಮಾಡಿದ್ದಾರೆ. ಪೊಲೀಸ್ ಒಬ್ಬರ ಸಂಬಂಧಿಕರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ವರ್ಗಾವಣೆ ಮಾಡಲು 10 ಲಕ್ಷ ಹಣ ಪಡೆದಿದ್ದಾರೆ” ಎಂದು ಎನ್‌ಡಿಎ ಅಭ್ಯರ್ಥಿ ಕೆ ಸುಧಾಕರ್ ವಿರುದ್ಧ ಆರೋಪಗಳ ಸುರಿಮಳೆಗೈದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.