ಗದಗ ಜಿಲ್ಲೆಯ ಮುಂಡರಗಿ ತಾಲೂಕು ಪಂಚಾಯತಿಯು ವಿಶಿಷ್ಟವಾಗಿ ಮನರೇಗಾ ಯೋಜನೆಗೆ ಸಾಂಸ್ಕೃತಿಕ, ಜನಪದ ಮೆರುಗು ನೀಡುತ್ತಿದೆ. ಮನರೇಗಾ ಯೋಜನೆಯಡಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಲು ಮುಂಡರಗಿ ತಾಲೂಕು ಪಂಚಾಯತಿ ಮುಂದಾಗಿದೆ. ಜತೆಗೆ ಕೃಷಿ ಕಾರ್ಮಿಕರನ್ನು ಸೆಳೆಯಲು ಕೆಲಸ ಮುಗಿಸಿದ ನಂತರ ದೇಸಿ ಆಟಗಳನ್ನು ಆಡಿಸಲಾಗುತ್ತಿದೆ. ಮಹಿಳಾ ಕಾರ್ಮಿಕರಿಂದ ಸೋಬಾನ ಪದ (ಜನಪದ ಹಾಡು) ಹಾಡಿಸಿ ಮನರಂಜನೆಯನ್ನೂ ನೀಡಲಾಗುತ್ತಿದೆ. ಜೊತೆಗೆ ಕಬ್ಬಡ್ಡಿ, ಖೋಖೋ ಕ್ರೀಡೆಗಳನ್ನೂ ಆಡಿಸುತ್ತಿದೆ.
ದುಡಿಯುವ ಕೂಲಿಕಾರರಿಗೆ ಮನರಂಜನೆಯು ಮುಖ್ಯ. ಮಳೆಗಾಲ ಮರೀಚಿಕೆಯಾದ ಈ ದಿನಗಳ ನಡುವೆ ನರೇಗಾ ಯೋಜನೆ ಗ್ರಾಮೀಣ ಜನರಿಗೆ ದಾರಿದೀಪ. ಇದನ್ನು ಮನಗಂಡ ಮುಂಡರಗಿ ತಾಲೂಕು ಪಂಚಾಯತಿ ಸುಸ್ಥಿರ ನರೇಗಾ ಅಂಕಿ ಸಂಖ್ಯೆ ಅಭಿವೃದ್ಧಿಯತ್ತ ಸಾಂಸ್ಕೃತಿಕ, ಜನಪದ ಚಟುವಟಿಕೆಗಳ ಮೂಲಕ ಗಮನಹರಿಸಿ ಜನರಿಗೆ ಮಾಹಿತಿ ತಲುಪಿಸುತ್ತಿರುವುದು ಮಾದರಿಯಾಗಿದೆ.
ಪುರುಷರಿಗಿಂತ ಗ್ರಾಮೀಣ ಪ್ರದೇಶದ ಮಹಿಳೆಯರೇ ಈ ಆಟದಲ್ಲಿ ಹೆಚ್ಚು ತೊಡಗಿರುವುದು ಗಮನಿಸತಕ್ಕ ಅಂಶ. ಹಾಗಾಗಿ ಮುಂಡರಗಿ ತಾಲೂಕು ಪಂಚಾಯತ ಕಳೆದ ವರ್ಷ ನರೇಗಾ ಕಾಮಗಾರಿಗಳಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣದಲ್ಲಿ ಶೇಕಡಾ 50% ರಷ್ಟು ಯಶಸ್ಸು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
“ಮನರೇಗಾ ಕಾಮಗಾರಿಗಳ ಜೀವನಾಡಿಯಾಗಿದೆ. ಭಾರತ ಹಳ್ಳಿಗಳಿಂದ ಕೂಡಿದ ದೇಶ. ಬೇಸಿಗೆ ಕಾಲದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕರೆ ಆಗುವ ಅನುಕೂಲ ನೂರೆಂಟು. ಆ ದಿಶೆಯಲ್ಲಿ ಮುಂಡರಗಿ ತಾಪಂ ಕಾರ್ಯನಿರತವಾಗಿದೆ” ಎಂದು ಮುಂಡರಗಿ ತಾಲೂಕು ಪಂಚಾಯಿತಿ ಇಓ ವಿಶ್ವನಾಥ ಹೊಸಮನಿ ಹೇಳಿದ್ದಾರೆ.