ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ, ದೇಶದ ಸಂಪತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹೋಗುತ್ತದೆ ಎಂಬಿತ್ಯಾದಿ ಕೋಮುವಾದಿ ಮಾತುಗಳನ್ನು ಆಡುವ, ಸಮುದಾಯಗಳಲ್ಲಿ ಕೋಮು ದ್ವೇಷ ಬಿತ್ತುವ ಪ್ರಧಾನಿ ಮೋದಿ ದೇಶಕ್ಕೆ ಬೇಕೆ ಎಂದು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಪ್ರಶ್ನೆ ಮಾಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ರಾಜ್ಯಕ್ಕೆ ನ್ಯಾಯಯುತವಾಗಿ ಕೊಡಬೇಕಿರುವ ಬರ ಪರಿಹಾರದ ಹಣವನ್ನು ಕೇಂದ್ರ ಸರ್ಕಾರ ಒಂದು ವಾರದಲ್ಲಿ ನಿರ್ಧಾರ ಮಾಡುವುದಾಗಿ ಹೇಳಿದೆ. ಕೇಂದ್ರದಿಂದ ಬರ ಪರಿಹಾರದ ಹಣ ಬಂದರೆ ರಾಜ್ಯದ ಪ್ರತಿಯೊಬ್ಬ ನೋಂದಾಯಿತ ರೈತರ ಖಾತೆಗೆ ₹13,000 ಹಣವನ್ನು ರಾಜ್ಯ ಸರ್ಕಾರ ನೀಡಲು ಸಾಧ್ಯವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೆ ಸುಧಾಕರ್ ವಿರುದ್ಧ ಅವರ ಸ್ವಪಕ್ಷೀಯರಿಂದಲೇ ವಿರೋಧಿ ಅಲೆ ಎದ್ದಿದೆ. ಅದು ಕಳೆದ ಬಾರಿಗಿಂತ ಈ ಬಾರಿ ದೊಡ್ಡ ಮಟ್ಟದಲ್ಲಿದೆ. ಕ್ಷೇತ್ರದ ಯಾವ ಭಾಗಕ್ಕೆ ಹೋದರೂ ಸುಧಾಕರ್ ಅವರ ಕೋವಿಡ್ ಹಗರಣ ವಿಚಾರವನ್ನು ಜನ ಹೇಳುತ್ತಾರೆ. ಅದರ ಕುರಿತು ತನಿಖೆ ನಡೆಯುತ್ತಿದೆ. ಸಾಬೀತಾದರೆ ಅವರು ಕ್ಷೇತ್ರದಲ್ಲಿ ಇರುವುದಿಲ್ಲ. ಹಾಗಾಗಿ ಸರಳ ಸಜ್ಜನಿಕೆಯ ರಕ್ಷಾ ರಾಮಯ್ಯ ಅವರನ್ನು ಬೆಂಬಲಿಸಿ” ಎಂದು ಮನವಿ ಮಾಡಿದರು.
“ಸಿದ್ದರಾಮಯ್ಯ ಅವರನ್ನು ಒಕ್ಕಲಿಗ ವಿರೋಧಿ ಎಂದಿರುವ ಕೆ ಸುಧಾಕರ್ ಅವರೇ 2011ರಲ್ಲಿ ಯಾರ ಜತೆಗೆ ಇದ್ದಿರಿ ನೀವು” ಎಂದು ಪ್ರಶ್ನೆ ಮಾಡಿದರು.
“ಸಿದ್ದರಾಮಯ್ಯ ಅವರಿಗೆ ಯಾವುದೇ ಜಾತಿ ಬೇಧವಿಲ್ಲ. ಎಲ್ಲರನ್ನೂ ಸಮಾನ ದೃಷ್ಟಿಯಿಂದಲೇ ಕಾಣುತ್ತಾರೆ. ಆದರೆ ನೀವು ಕ್ಷೇತ್ರದ ಸಾಕಷ್ಟು ಮಂದಿ ಒಕ್ಕಲಿಗ ಸಮುದಾಯದವರ ಮೇಲೆ ಕೇಸು ದಾಖಲಿಸಿದ್ದೀರಿ. ಅಶ್ವತ್ಥ್ ರೆಡ್ಡಿ, ಭಕ್ತರಹಳ್ಳಿ ಸುರೇಶ್, ಆಂಜಿನಪ್ಪ, ನಾರಾಯಣಸ್ವಾಮಿ, ಮಾಜಿ ಶಾಸಕ ಬಚ್ಚೇಗೌಡ, ಜಗದೀಶ್, ವೆಂಕಟೇಶ್ ಸೇರಿದಂತೆ ಹಲವಾರು ಮಂದಿ ಒಕ್ಕಲಿಗ ಸಮುದಾಯದವರ ಮೇಲೆ ಕೇಸ್ ಹಾಕಿದ್ದೀರಿ. ನೀವು ಯಾರ ಪರ ಇದ್ದೀರಾ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಚುನಾವಣೆಯಲ್ಲಿ ಇದಕ್ಕೆಲ್ಲಾ ತಕ್ಕ ಉತ್ತರ ಸಿಗಲಿದೆ” ಎಂದು ಮಾರ್ಮಿಕವಾಗಿ ನುಡಿದರು.
ವಸೂಲಿ ಗಿರಾಕಿ ಯಾರೆಂದು ಜನರಿಗೆ ಗೊತ್ತಿದೆ : ಜಿಲ್ಲೆಯಲ್ಲಿ ಶಿವೋತ್ಸವ, ಚಿಕ್ಕಬಳ್ಳಾಪುರ ಉತ್ಸವ ನಡೆಸಿದವರು ಯಾರು? ಈ ಕಾರ್ಯಕ್ರಮಗಳಿಗೆ ಯಾರ ಬಳಿ ಎಷ್ಟು ವಸೂಲಿ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಕೆ ಸುಧಾಕರ್ ಅವರ ಹೈದ್ರಾಬಾದ್ ವಸೂಲಿ ಗಿರಾಕಿಗಳು ಎಂಬ ಮಾತಿಗೆ ತಿರುಗೇಟು ನೀಡಿದರು.
ನರ್ಸ್‌ಗಳನ್ನೂ ಬಿಟ್ಟಿಲ್ಲ : “ಕೆ ಸುಧಾಕರ್ ಅವರು ಸಚಿವರಾಗಿದ್ದಾಗ ನರ್ಸ್‌ಗಳನ್ನೂ ಕೂಡ ಬಿಟ್ಟಿಲ್ಲ. ಅವರಿಂದಲೂ ಹಣ ವಸೂಲಿ ಮಾಡಿದ್ದಾರೆ. ವೈದ್ಯಕೀಯ ಕಾಲೇಜು ಸಹಾಯಕ ಪ್ರಾಧ್ಯಾಪಕರ ಬಳಿ ವಸೂಲಿ ಮಾಡಿದ್ದಾರೆ. ಪೊಲೀಸ್ ಒಬ್ಬರ ಸಂಬಂಧಿಕರನ್ನು ಕೆ ಸಿ ಜನರಲ್ ಆಸ್ಪತ್ರೆಗೆ ವರ್ಗಾವಣೆ ಮಾಡಲು 10 ಲಕ್ಷ ರೂ. ಹಣ ಪಡೆದಿದ್ದಾರೆ” ಎಂದು ಎನ್‌ಡಿಎ ಅಭ್ಯರ್ಥಿ ಕೆ ಸುಧಾಕರ್ ವಿರುದ್ಧ ಆರೋಪಗಳ ಸುರಿಮಳೆಗೈದರು.
“ಹೈಟೆಕ್ ಹೂ ಮಾರುಕಟ್ಟೆಗೆ ಯಾವುದೇ ಅನುದಾನ ಮಂಜೂರು ಆಗಿಲ್ಲ. ಅಲ್ಲದೆ ಈ ಹಿಂದೆ ಅವರು ಗುರುತಿಸಿರುವ ಜಾಗ ಜನರ, ರೈತರ ಬಳಕೆಗೆ ಯೋಗ್ಯವಾಗಿಲ್ಲ. ಡಿಪಿಆರ್ ಇಲ್ಲದೆ ಸುಖಾಸುಮ್ಮನೆ ನಾನು ಮಂಜೂರು ಮಾಡಿಸಿದ್ದೆ ಎಂದು ಸುಳ್ಳು ಹೇಳಿಕೆ ಕೊಡಬಾರದು” ಎಂದು ಕುಟುಕಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸಚಿವ ಸಂತೋಷ್ ಲಾಡ್‌ಗೆ ವಿಜಯೇಂದ್ರ ಅಪಮಾನ; ಕ್ಷಮೆ ಯಾಚಿಸಲು ಆಗ್ರಹ
“ನಾನು ಸಚಿವನಾದ ಮೇಲೆ ಕ್ಷೇತ್ರ ಸಂಚಾರ ಮಾಡಿ, ಹೂ ಮಾರುಕಟ್ಟೆಗೆ ತೋಟಗಾರಿಕೆ ಇಲಾಖೆ ಪಕ್ಕದಲ್ಲಿ ಜಾಗ ಹುಡುಕಿದ್ದೇವೆ. ಚುನಾವಣೆ ನಂತರ ಹೂ ಬೆಳೆಗಾರರ ಸಭೆ ಕರೆದು ಮಾರುಕಟ್ಟೆ ವಿನ್ಯಾಸ ರಚಿಸಲಾಗುವುದು. ಅದಲ್ಲದೆ ನಂದಿ ಬೆಟ್ಟಕ್ಕೆ ರೋಪ್ ವೆ, ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾನಿಂಗ್, ಥ್ರೆಡ್ ಮಿಲ್ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.
