ಭ್ರಷ್ಟಾಚಾರವನ್ನು ಲೀಗಲೈಜ್ ಮಾಡಿದ್ದು, ಬಿಜೆಪಿಯವರು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ಚಿಕ್ಕಬಳ್ಳಾಪುರ ನಗರದ ಪತ್ರಿಕಾಭವನದಲ್ಲಿ ಬುಧವಾರ ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, “ಎಲೆಕ್ಟೊರಲ್ ಬಾಂಡ್ ದೇಶದ ಭಾರೀ ದೊಡ್ಡ ಹಗರಣ. ಇದನ್ನು ಜಾರಿಗೆ ತಂದಿದ್ದು ಬಿಜೆಪಿ. ಇದೊಂದು ಹಫ್ತಾ ವಸೂಲಿ ವಿಧಾನ. ಲಂಚ ವಸೂಲಿಗೆ ಕಾನೂನಿನ ಬಲ ನೀಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಭ್ರಷ್ಟರೆಲ್ಲಾ ಬಿಜೆಪಿ ಸೇರುತ್ತಿದ್ದಾರೆ. ಬೆದರಿಕೆಯೊಡ್ಡಿ ಬಿಜೆಪಿಗೆ ಸೇರುವಂತೆ ಮಾಡುತ್ತಿದ್ದಾರೆ. ಬಿಜೆಪಿಗೆ ಸೇರಿದರೆ ಕೇಸುಗಳೆಲ್ಲಾ ಮುಚ್ಚಿಹೋಗುತ್ತವೆ. ಅದೊಂದು ಮನಿ ಲಾಂಡರಿಂಗ್ ಪಕ್ಷ. ಅವರಿಗೆ ಭ್ರಷ್ಟಾಚಾರ ಕುರಿತು ಮಾತಾಡುವ ಯೋಗ್ಯತೆಯಿಲ್ಲ” ಎಂದು ಟೀಕಿಸಿದರು.
“ಬಿಜೆಪಿಯವರು ಹತಾಶರಾಗಿದ್ದಾರೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸಂಸದರ ಸಂಖ್ಯೆ ಇಳಿಕೆಯಾಗುತ್ತಿದೆ ಎಂಬ ಭಯದಲ್ಲಿ ಸಮುದಾಯಗಳ ನಡುವೆ ಕೋಮು ದ್ವೇಷ ಭಾವನೆ ಹುಟ್ಟಿಸಲು ಮುಂದಾಗಿದ್ದಾರೆ. ಚುನಾವಣೆಗಾಗಿ ಸಮಾಜದಲ್ಲಿ ಒಡಕು ಮೂಡಿಸುವುದು ಸರಿಯಲ್ಲ. ರಾಜ್ಯದ ಜನ ಬುದ್ಧಿವಂತರಾಗಿದ್ದಾರೆ. ಬಿಜೆಪಿಗರು ದ್ವೇಷದ ರಾಜಕೀಯಕ್ಕೆ ಸೋಲುಣಿಸುವುದು ಖಚಿತ” ಎಂದು ಭವಿಷ್ಯ ನುಡಿದರು.
“ಪ್ರಸ್ತುತ ಬೆಲೆ ಏರಿಕೆ, ಬರ ಪರಿಹಾರ, ತೆರಿಗೆ ವಂಚನೆಗಳಿಂದ ಜನ ರೋಸಿ ಹೋಗಿದ್ದಾರೆ. ರೈತರ ಖರ್ಚು ದುಪ್ಪಟ್ಟಾಗಿದ್ದು, ಆದಾಯ ಇಳಿಮುಖವಾಗಿದೆ. ರೈತರ ಪ್ರಾಣ ಹೋದರು ಸೌಜನ್ಯಕ್ಕಾದರೂ ಪ್ರಧಾನಿ ಮೋದಿ ರೈತರ ಬಳಿ ಬರಲಿಲ್ಲ. ಇಂತವರ ನಿಲುವು ಯಾರ ಕಡೆ ಇದೆ ಎಂಬುದನ್ನು ಜನ ಆಲೋಚಿಸಬೇಕು” ಎಂದರು.
“ರೈತರ 3 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೆ ದೇಶ ಬರ್ಬಾದ್ ಆಗುತ್ತದೆ ಎಂದೇಳುವ ಮೋದಿ, 24 ಲಕ್ಷ ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ. ಇದು ಎಷ್ಟು ಸರಿ” ಎಂದು ಖಂಡಿಸಿದರು.
ಮಾಧ್ಯಮಗಳಲ್ಲಿ ಬಡವರ ಧ್ವನಿ ಕೇಳಿಸುತ್ತಿಲ್ಲ: ಕರ್ನಾಟಕವನ್ನು ಗುರಿಯಿಟ್ಟುಕೊಂಡು ರಾಜ್ಯದ ಮೇಲೆ ಕೇಂದ್ರ ದಾಳಿ ಮಾಡುತ್ತಿದೆ. ಮಾಧ್ಯಮಗಳಲ್ಲಿ ಬಡವರ ಧ್ವನಿ ಕೇಳಿಸುತ್ತಿಲ್ಲ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಬ್ರಿಟಿಷರ ಕಾಲಕ್ಕಿಂತ ಹೆಚ್ಚಾಗಿದೆ” ಎಂದರು.
ದ್ವೇಷ ರಾಜಕಾರಣದಲ್ಲಿ ಮುಳುಗಿರುವ ಬಿಜೆಪಿ: ಹೊಟ್ಟೆಪಾಡಿನ ವಿಚಾರಗಳನ್ನು ಬಿಟ್ಟು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ದ್ವೇಷ ರಾಜಕಾರಣದಲ್ಲಿ ಬಿಜೆಪಿ ಮುಳುಗಿದೆ. ಶ್ರೀಮಂತರ ತೆರಿಗೆ ಕಡಿಮೆ ಮಾಡಿ, ಬಡವರ ತೆರಿಗೆಯನ್ನು ಹೆಚ್ಚಳ ಮಾಡಿದೆ” ಎಂದು ದೂರಿದರು.
“ಎಲ್ಲ ಜಾತಿಯವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿರುವ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್‌ನಲ್ಲಿ ಸ್ಥಾನಮಾನ ದೊರೆತಿದೆ. ಕೆಲವರು ಜಾತಿ ಹೆಸರಲ್ಲಿ ಸಮಾಜವನ್ನು ಹೊಡೆಯಲು ಮುಂದಾಗಿದ್ದಾರೆ. ಅದು ಒಕ್ಕಲಿಗ ಸಮಾಜದ ತತ್ವಕ್ಕೆ ತದ್ವಿರುದ್ಧ” ಎಂದು ಪರೋಕ್ಷವಾಗಿ ಕೆ ಸುಧಾಕರ್ ನಡೆಯನ್ನು ಖಂಡಿಸಿದರು.
“ಕಾಂಗ್ರೆಸ್ ಸರ್ಕಾರ ಪಕ್ಷಾತೀತವಾಗಿ, ಜಾತ್ಯತೀತವಾಗಿ ಸರ್ವಧರ್ಮದವರಿಗೂ ಗ್ಯಾರಂಟಿ ಭಾಗ್ಯಗಳನ್ನು ಕೊಡುತ್ತಿದೆ. ಜಾತ್ಯತೀತ ಸರ್ಕಾರ ಎಂಬುದಕ್ಕೆ ಗ್ಯಾರಂಟಿಗಳೇ ಸಾಕ್ಷಿ. ಆದ್ದರಿಂದ ಜಿಲ್ಲೆಯ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, “ಬಿಜೆಪಿಯವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಕಾಪಿ ಮಾಡಿದ್ದಾರೆ. ಅವರಿಗೆ ಸ್ವಂತಿಕೆಯಿಲ್ಲ. ಅವರ ಪ್ರಮುಖ ಉದ್ದೇಶವೇ ಜಾತಿ, ಧರ್ಮಗಳ ನಡುವೆ ಕೋಮು ದ್ವೇಷ ಬಿತ್ತುವುದು. ಹಾಗಾಗಿ ಜಾತ್ಯತೀತವಾಗಿ ಒಗ್ಗಟ್ಟಿನಿಂದ ಕಾಂಗ್ರೆಸ್ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿಸೋಣ. ಕಾಂಗ್ರೆಸ್‌ನಿಂದ ಮಾತ್ರವೇ ರಾಮರಾಜ್ಯ ನಿರ್ಮಾಣ ಸಾಧ್ಯ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮುಂದಿನ ದಿನದಲ್ಲಿ ಕ್ಷೇತ್ರದ ರಕ್ಷಣೆ ನನ್ನದು: ಗೀತಾ ಶಿವರಾಜ್‌ಕುಮಾರ್
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಬಚ್ಚೇಗೌಡ, ಕಾಂಗ್ರೆಸ್ ಮುಖಂಡ ಯಲುವಹಳ್ಳಿ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಅಟ್ಟಗಲ್ಲು ಶ್ರೀಧರ್, ಕೆ ಎಂ ಮುನೇಗೌಡ, ಪಾಪರೆಡ್ಡಿ, ಮೋಹನ್ ರೆಡ್ಡಿ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
