ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಬೆಳಗೆರೆ ಪಂಚಾಯಿತಿಯ ಭಾಗದ ಎಲ್ಲ ಗ್ರಾಮಗಳ ಬಹುತೇಕ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಿದ್ದರೂ ಕಲಮರಹಳ್ಳಿ ಮತ್ತು ಕಲಮರಹಳ್ಳಿಯ ಮುಜುರೆ ಗ್ರಾಮಕ್ಕೆ ಸಂಬಂಧಪಟ್ಟಂತೆ ಸಿದ್ದೇಶಪುರ, ಜಾಲಿಗೊಲ್ಲರಹಟ್ಟಿ, ಕ್ಯಾತನ ಮಳೆಯಂತ ಕುಗ್ರಾಮಗಳಲ್ಲೂ ಮತ್ತು ಕಲಮರಹಳ್ಳಿಯ ದಿನಸಿ ಅಂಗಡಿಗಳಲ್ಲಿ ದಿನಸಿ ವಸ್ತುಗಳಿಗಿಂತ ಮದ್ಯ ಮತ್ತು ಸರಾಯಿ ಹೆಚ್ಚಾಗಿ ಮಾರಾಟವಾಗುತ್ತಿದೆ ಎಂದು ಮಹಿಳೆಯರು, ಗ್ರಾಮಸ್ಥರು ಆರೋಪಿಸಿದ್ದಾರೆ.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಇಲ್ಲಿನ ಶಾಲಾ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಹಾಗೂ ಯುವಜನತೆಗೆ ಹೆಚ್ಚಾಗಿ ಪರಿಣಾಮ ಬೀರುತ್ತಿದ್ದು, ಯುವಕರು ಸೇರಿದಂತೆ ಕೆಲವು ಕೂಲಿ ಕಾರ್ಮಿಕರು ಮದ್ಯ ವ್ಯಸನಕ್ಕೆ ತುತ್ತಾಗಿದ್ದು, ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಹಲವು ಗಂಭೀರವಾದ ಕಿಡ್ನಿ ಸಮಸ್ಯೆ, ದೈಹಿಕ ನಿಶ್ಯಕ್ತಿ, ಮಾನಸಿಕ ಸ್ಥಿತಿ ಸರಿಯಾಗಿಲ್ಲದಿರುವುದು ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮಗಳಲ್ಲಿನ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ವರ್ಷಗಳಿಂದ ಕಲಮರಳ್ಳಿ ಗ್ರಾಮದ ಮಹಿಳೆಯರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು. ಗ್ರಾಮದ ಸ್ಥಳೀಯ ಮುಖಂಡರ ಇಚ್ಛಾಶಕ್ತಿಯ ಕೊರತೆ ಮತ್ತು ವೋಟ್ ಬ್ಯಾಂಕ್ ಚುನಾವಣೆಯ ರಾಜಕಾರಣದ ಹಿತದೃಷ್ಟಿಯಿಂದ ಮದ್ಯ ನಿಷೇಧ ಆಂದೋಲನಕ್ಕೆ ಯಾವುದೇ ಸಹಕಾರ ಸಿಗುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿರುವ ಕುಡುಕರ ಮತ್ತು ಮದ್ಯಪ್ರಿಯರ ಮತಗಳು ತಪ್ಪಿ ಹೋಗುವ ಭಯದಿಂದ ಮದ್ಯ ನಿಷೇಧದಂತಹ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ.
ಚುನಾವಣಾ ಸಂದರ್ಭದ ಮಹತ್ವವನ್ನು ಅರಿತಿರುವ ಮಹಿಳೆಯರು ತಮ್ಮ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಮತದಾನದ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಗ್ರಾಮದ ಬಹುತೇಕ ಮಹಿಳೆಯರು ಮದ್ಯ ಮಾರಾಟ ನಿಲ್ಲಿಸದಿದ್ದರೆ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ನಾವು ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂದು ಒಕ್ಕೊರಲಿನಿಂದ ಹೇಳಿದ್ದಾರೆ
“ಅಬಕಾರಿ ಇಲಾಖೆಯ ಸಡಿಲವಾದ ನೀತಿಯಿಂದ ಪ್ರತಿ ಕಿರಾಣಿ ಅಂಗಡಿಗಳಿಗೆ ಹೇಗೆ ಮದ್ಯ ಸರಾಯಿ ತಲುಪುತ್ತದೆ. ಅಬಕಾರಿ ಇಲಾಖೆಯ ನ್ಯೂನ್ಯತೆ, ಭ್ರಷ್ಟ ವ್ಯವಸ್ಥೆಯಿಂದ ಕಿರಾಣಿ ಅಂಗಡಿಗಳಿಗೆ ಮದ್ಯ ತಲುಪುತ್ತದೆ. ಇತ್ತ ಕಡೆ ಪೊಲೀಸ್ ಇಲಾಖೆಯವರು ಕಿರಾಣಿ ಅಂಗಡಿಗಳಿಗೆ ಎಚ್ಚರಿಸುವವರಂತೆ ಆಗಾಗ ಮುಗಿಬಿದ್ದು ಕೇಸು ದಾಖಲಿಸುವುದು, ಅತ್ತ ಅಬಕಾರಿ ಇಲಾಖೆಯವರು ಮಗುವನ್ನು ಚಿವುಟುವುದು ಇತ್ತ ಪೊಲೀಸ್ ಇಲಾಖೆಯವರು ತೊಟ್ಟಿಲು ತೂಗುವ ಬೃಹನ್ನಳೆಯ ನಾಟಕದಂತೆ ಬಹಳ ಚೆನ್ನಾಗಿ ನಡೆಯುತ್ತಿದೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
“ಪ್ರತಿ ಬಾರಿಯೂ ಮದ್ಯ ನಿಷೇಧದ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಿದ ಮಹಿಳೆಯರಿಗೆ, ʼನಿಮ್ಮ ಮನೆಯ ಗಂಡಸರು ಕುಡಿದು ಸದ್ಯಕ್ಕೆ ಸೇಫಾಗಿ ಮನೆಗೆ ಬಂದು ಮಲಗುತ್ತಾರೆ. ಮದ್ಯ, ಸರಾಯಿ, ಎಣ್ಣೆ ಗ್ರಾಮದಲ್ಲಿ ನಿಷೇಧವಾದರೆ ಅವರು ಪಕ್ಕದ ಊರಿಗೆ ಹೋಗಿ ಅಲ್ಲೇ ಕುಡಿದು ಬಿದ್ದು, ಅಲ್ಲೇ ಮಲಗುತ್ತಾರೆ. ಅವರನ್ನು ಕರೆದುಕೊಂಡು ಬರಲು ನೀವು ಅಲ್ಲಿಗೆ ಹೋಗಬೇಕಾಗುತ್ತದೆʼ ಎಂದು ಅನೇಕ ಭಯಗಳನ್ನು ಸೃಷ್ಟಿ ಮಾಡುವ ಮೂಲಕ ಮಹಿಳಾ ಪ್ರತಿರೋಧವನ್ನು ಪುರುಷ ಪ್ರಧಾನ ಸಮಾಜ ಹತ್ತಿಕ್ಕಲಾಗುತ್ತಿದೆ” ಎಂದರು.
“ಮದ್ಯ ಮಾರಾಟದಿಂದ ಬೇಸತ್ತ ಇಲ್ಲಿನ ಮಹಿಳೆಯರು ಮತ್ತು ಪ್ರಜ್ಞಾವಂತ ಜನ ಸುದ್ದಿ ವಾಹಿನಿಗಳೊಂದಿಗೆ ನೇರವಾಗಿ ಮಾತನಾಡಿ, ಗ್ರಾಮದಲ್ಲಿ ಸಾರಾಯಿ ಮದ್ಯ ನಿಷೇಧ ಆಗದಿದ್ದರೆ ಇನ್ನೇನು ಹತ್ತಿರದಲ್ಲಿರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಮತ್ತು ಇದಕ್ಕೆ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸೂಕ್ತವಾದ ಕ್ರಮ ತೆಗೆದುಕೊಂಡು ಮದ್ಯ ಮುಕ್ತ ಸಾರಾಯಿ ಮುಕ್ತ ಗ್ರಾಮ ಮಾಡದಿದ್ದರೆ ನಾವು ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಗಳಲ್ಲಿ ಮತ ಚಲಾಯಿಸುವುದಿಲ್ಲ. ಚುನಾವಣೆಗಳನ್ನು ನಾವು ಬಹಿಷ್ಕರಿಸುತ್ತೇವೆ” ಎಂದು ಆಡಳಿತ ವ್ಯವಸ್ಥೆಗೆ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಹಿರಿಯ ಮಹಿಳೆ ಲಕ್ಕಜ್ಜಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇತ್ತೀಚಿಗೆ ತಾನೇ ಕುಡಿತದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ನಮ್ಮ ಮನೆಯ ಮಗನನ್ನು ಆಸ್ಪತ್ರೆಗೆ ಸೇರಿಸಿ ಸುಮಾರು 25 ಸಾವಿರಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಮನೆಗೆ ಕರೆ ತಂದಿದ್ದೇವೆ. ಗ್ರಾಮದಲ್ಲಿ ಕುಡುಕ ಗಂಡಸರನ್ನು ಸರಿದಾರಿಗೆ ತರಬೇಕಿದೆ. ಮನೆಗಳಲ್ಲಿ ಪ್ರತಿನಿತ್ಯ ಜಗಳ, ಹೊಡೆದಾಟ, ಹೆಂಗಸರು ಮಕ್ಕಳನ್ನು ಹಿಡಿದುಕೊಂಡು ಹೊಡೆಯುವಂತಹ ಪ್ರಸಂಗಗಳು ಗ್ರಾಮದಲ್ಲಿ ಬಹಳ ಮನೆಗಳಲ್ಲಿ ನಡೆಯುತ್ತಿವೆ. ಇದರಿಂದ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗಿದ್ದು, ಇದಕ್ಕೆ ಮದ್ಯ ಮಾರಾಟ ನಿಲ್ಲಿಸುವುದೇ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಮತದಾನ ಮಾಡುವುದಿಲ್ಲ” ಎಂದರು.
ಸ್ಥಳೀಯ ನಿವಾಸಿ ರತ್ನಮ್ಮ ಮಾತನಾಡಿ, “ಗ್ರಾಮದಲ್ಲಿ ಕೆಲವೆಡೆ ನೈರ್ಮಲ್ಯತೆ ಮರೀಚಿಕೆಯಾಗಿದ್ದು, ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಸರಾಗವಾಗಿ ಕೊಳಚೆ ನೀರು ರಸ್ತೆಯ ಮೇಲೆಲ್ಲಾ ಹರಿಯುವ ಪರಿಸ್ಥಿತಿ ಇದೆ. ಗಂಡಸರು ದುಡಿದು ಬಂದ ದುಡ್ಡನ್ನೆಲ್ಲ ಸರಾಯಿಗೆ ಖರ್ಚು ಮಾಡುತ್ತಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಹೆಂಗಸರು ಕೂಲಿ ನಾಲಿ ಮಾಡಿ ಮಕ್ಕಳನ್ನು ಮತ್ತು ಗಂಡಸರನ್ನು ಸಾಕುವ ಪರಿಸ್ಥಿತಿ ಎದುರಾಗಿದೆ” ಎಂದು ಅಳಲು ತೋಡಿಕೊಂಡರು.
ಅಬಕಾರಿ ಇಲಾಖೆಯ ನಿರೀಕ್ಷಕ ನಾಗರಾಜ್ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದು, “ಈವರೆಗೂ ನಮಗೆ ಈ ಬಗ್ಗೆ ಮಾಹಿತಿ ಅಥವಾ ದೂರನ್ನು ಯಾರೂ ಕೊಟ್ಟಿಲ್ಲ. ಇದು ನಿಮ್ಮ ಮಾದ್ಯಮದ ಮೂಲಕ ಗಮನಕ್ಕೆ ಬಂದಿದ್ದು, ಶೀಘ್ರದಲ್ಲೇ ಅಕ್ರಮ ಮದ್ಯ ಮಾರಾಟ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ನೀರಿನ ಗ್ಯಾರಂಟಿ ಕೊಡುವವರಿಗೆ ಮತ ನೀಡಿ: ಆಂಜನೇಯ ರೆಡ್ಡಿ
ಈ ಬಗ್ಗೆ ಪ್ರತಿಕ್ರಿಸಿದ ತಹಸಿಲ್ದಾರ್ ರೆಹಾನ್ ಪಾಷಾ ಅವರು, “ಬಹುತೇಕ ಸಮಸ್ಯೆಯಿರುವ ಕಡೆ ದೂರು ಬಂದ ತಕ್ಷಣ ತೆರಳಿ ಕ್ರಮ ಕೈಗೊಳ್ಳುತ್ತೇವೆ. ಪ್ರಸ್ತುತ ಈ ಗ್ರಾಮದ ಬಗ್ಗೆ ನಮಗೆ ಯಾರೂ ಕೂಡಾ ದೂರು ನೀಡಿಲ್ಲ. ಈಗಷ್ಟೇ ಗಮನಕ್ಕೆ ಬಂದಿದ್ದು, ಕೂಡಲೇ ಅಬಕಾರಿ ಇಲಾಖೆಗಳೊಂದಿಗೆ ಗ್ರಾಮಕ್ಕೆ ತೆರಳಿ ಈ ಬಗ್ಗೆ ಅಲ್ಲಿನ ಗ್ರಾಮಸ್ಥರ ಸಮಸ್ಯೆ ಆಲಿಸಿ ಕ್ರಮ ಕೈಗೊಂಡು ಅದಕ್ಕೆ ಪರಿಹಾರ ನೀಡುತ್ತೇವೆ” ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ರಮ್ಯಾ, ಸೌಮ್ಯ, ಕಾವ್ಯ ಲಕ್ಷ್ಮಮ್ಮ, ಲಕ್ಕಜ್ಜಿ, ರತ್ನಮ್ಮ, ಮಂಜಮ್ಮ, ಶಾರದಮ್ಮ, ಮಲ್ಲಜ್ಜಿ, ಗೌರಜ್ಜಿ ಮತ್ತು ಗ್ರಾಮದ ಇನ್ನು ಹಲವು ಮಹಿಳೆಯರು ಇದ್ದರು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು