ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಸುಮಾರು 45 ಸಾವಿರ ಯುವಜನರು ಪ್ರಥಮ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಪ್ರಥಮ ಬಾರಿಗೆ ಮಾಡುತ್ತಿರುವ ಮತದಾನದ ಈ ಕ್ಷಣಗಳು ಅವಿಸ್ಮರಣೀಯ ನೆನಪಾಗಿರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಯುವಜನರು ಅತ್ಯಂತ ಉತ್ಸುಕರಾಗಿ ಭಾಗವಹಿಸಬೇಕು. ಶೇ.100ರಷ್ಟು ಮತದಾನ ಮಾಡಬೇಕು ಎಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ತುಮಕೂರು ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಜಿಲ್ಲಾಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ, ತುಮಕೂರು, ಯುವ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದಾದ ಮಂದಾರಗಿರಿ ಬೆಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವ ಮತದಾರರಿಗೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಗುಲಾಬಿ ಹೂ ನೀಡಿ ಸ್ವಾಗತಿಸಿದರು.
ಪ್ರಜಾ ಪ್ರಭುತ್ವದಿಂದ ರೆಕ್ಕೆ ಬಂದಿವೆ, ಮತ ಚಲಾಯಿಸಿ ಹಕ್ಕಿಯಂತೆ ಹಾರುವೆ. ನಾವು ನವಿಲುಗಳು ಮತದಾನ ನಮ್ಮ ಗರಿಗಳು. ಕಡ್ಡಾಯವಾಗಿ ಮಾಡುವೆವು ಮತದಾನ, ಇದು ಯುವ ಮತದಾರರ ವಾಗ್ದಾನ ಎಂಬ ಘೋಷ ವಾಕ್ಯಗಳೊಂದಿಗೆ ಎಲ್ಲಾ ಯುವ ಮತದಾರರು ಅತ್ಯಂತ ಹರುಷ ಚಿತ್ತರಾಗಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಹೆಬ್ಬೂರು ಪದವಿ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ 500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
