“ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಜನಪರವಾಗಿದ್ದು, ಇದು ಕೋಮು ಉದ್ವಿಗ್ನತೆ ಹುಟ್ಟಿಸಿ ತನ್ನ ಹತಾಶೆಯನ್ನು ತೋರಿಸುತ್ತಿರುವ ಬಿಜೆಪಿಗೆ ಆತಂಕ ಉಂಟು ಮಾಡಿದೆ” ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಾದ ಕುಲ್‌ಗಾಮ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ನೀಡಲಾಗುವುದು ಎಂದು ಹೇಳಿದ್ದು, ಇದರಿಂದ ಎನ್‌ಡಿಎ ಕಂಗೆಟ್ಟಿದೆ. ಇಂಡಿಯಾ ಮೈತ್ರಿ ಉತ್ತಮ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಕಾಂಗ್ರೆಸ್ ಪ್ರಣಾಳಿಕೆ ದೇಶದ ಅಭ್ಯುದಯಕ್ಕೆ ಸಹಕಾರಿ: ಅನಿಲ್ ಕುಮಾರ್ ತಡಕಲ್
ಅನಂತನಾಗ್-ರಾಜೌರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಮುಫ್ತಿ ಅವರು, “ಬಡವರು, ನಿರುದ್ಯೋಗಿ ಯುವಕರು ಮತ್ತು ರೈತರ ಬಗ್ಗೆ ಮಾತನಾಡುವ ಇಂತಹ ಉತ್ತಮ, ಜನಪರ ಪ್ರಣಾಳಿಕೆ 70 ವರ್ಷಗಳಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದೆ” ಎಂದು ಅಭಿಪ್ರಾಯಿಸಿದರು.
“ಈ ಜನಪರ ಪ್ರಣಾಳಿಕೆಯು ಬಿಜೆಪಿ ನಾಯಕರನ್ನು ವಿಚಲಿತಗೊಳಿಸಿದೆ. ಅದಕ್ಕಾಗಿ ಬಿಜೆಪಿ ನಾಯಕರು ಹಿಂದೂ-ಮುಸ್ಲಿಂ ಉದ್ವಿಗ್ನತೆಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಅವರ ಹತಾಶೆಯನ್ನು ತೋರಿಸುತ್ತದೆ” ಎಂದರು.
ಹಾಗೆಯೇ, “ದಬ್ಬಾಳಿಕೆಗೆ ಮತದಾನವೇ ಉತ್ತರವಾಗಿದೆ. ಬಂದೂಕು ಅಥವಾ ಕಲ್ಲುಗಳಲ್ಲ” ಎಂದು ಹೇಳಿದರು. “ಇಂದು ನಾವು ಮೌನವಾಗಿದ್ದರೆ, ನಮ್ಮ ಮುಂದಿನ ಪೀಳಿಗೆಗೆ ಏನೂ ಉಳಿಯದು. ಮತದಾನ, ಬಂದೂಕು ಅಥವಾ ಕಲ್ಲು ಅಲ್ಲ. ದಬ್ಬಾಳಿಕೆಗೆ ಉತ್ತರ ಮತದಾನ. ಬಂದೂಕು ಮತ್ತು ಕಲ್ಲುಗಳು ನಮ್ಮ ಸ್ಮಶಾನವನ್ನು ತುಂಬಿಸುತ್ತದೆ. ನಮ್ಮ ಮಕ್ಕಳನ್ನು ಅನಾಥರನ್ನಾಗಿ ಮತ್ತು ನಮ್ಮ ಹೆಂಗಸರನ್ನು ವಿಧವೆಯರನ್ನಾಗಿ ಮಾಡುತ್ತದೆ” ಎಂದು ತಿಳಿಸಿದರು.