”ಆಂಧ್ರಪ್ರದೇಶದಲ್ಲಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿಮೆ ಮಾಡಿತ್ತು. ಇದು ಕಾಂಗ್ರೆಸ್‌ನ ಪ್ರಮುಖ ಯೋಜನೆಯಾಗಿದ್ದು, ಇದನ್ನು ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಬಯಸಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜಸ್ಥಾನದ ಟೋಂಕ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.
ಅವಿಭಜಿತ ಆಂಧ್ರಪ್ರದೇಶದ ಮೀಸಲಾತಿ ವಿಚಾರದಲ್ಲಿ ಪ್ರಧಾನಿ ಮೋದಿಯವರು ಹೇಳಿರುವುದು ನಿಜವೇ ಎಂದು ಪರಿಶೀಲಿಸಲಾಗಿದ್ದು, ಮೋದಿ ಅವರು ಸಾವಿರಾರು ಜನರ ಎದುರು ಸುಳ್ಳು ಹೇಳಿದ್ದಾರೆ ಎಂಬುದು ಸಾಬೀತಾಗಿದೆ.
#WATCH | Addressing a public gathering in Tonk-Sawai Madhopur, Rajasthan, Prime Minister Narendra Modi says, “…Congress party has toyed with the Constitution of the country. When the Constitution was drafted, reservation based on religion was opposed, so that SC, ST and OBC… pic.twitter.com/tSBTsyO6Rk
— ANI (@ANI) April 23, 2024
ಸತ್ಯವೇನು?
ಅವಿಭಜಿತ ಆಂಧ್ರಪ್ರದೇಶದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಕ್ರಿಯೆಯನ್ನು 1993 ಮತ್ತು 1994ರ ನಡುವಿನ ಕಾಂಗ್ರೆಸ್ ಆಡಳಿತದಲ್ಲಿ ಪ್ರಾರಂಭಿಸಲಾಯಿತು. ಈ ಸಮಯದಲ್ಲಿ ಕೋಟ್ಲಾ ವಿಜಯಭಾಸ್ಕರ್ ರೆಡ್ಡಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯದ ಸ್ಥಾಪನೆಯ ನಂತರ ಆಗಸ್ಟ್ 1994ರಲ್ಲಿ ಮುಸ್ಲಿಮರಿಗೆ ಮೀಸಲಾತಿ ಸಂಬಂಧ ಆದೇಶ ಹೊರಡಿಸಲಾಯಿತು. ಈ ಮೂಲಕ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಹುದ್ದೆಗಳಲ್ಲಿ 14 ಇತರ ಜಾತಿಗಳೊಂದಿಗೆ ಮುಸ್ಲಿಮರಿಗೆ 5% ಮೀಸಲಾತಿಯನ್ನು ಕಡ್ಡಾಯಗೊಳಿಸಲಾಯಿತು. ಆದರೆ, 1994 ಮತ್ತು 1999ರ ಚುನಾವಣಾ ಸೋಲಿನಿಂದಾಗಿ ಈ ಆದೇಶವನ್ನು ಜಾರಿಗೆ ತರಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ.
2004ರ ಚುನಾವಣೆಯಲ್ಲಿ, ಮುಸ್ಲಿಮರಿಗೆ 5% ಮೀಸಲಾತಿಯನ್ನು ಪುನಃ ಪರಿಚಯಿಸುವುದು ಕಾಂಗ್ರೆಸ್‌ನ ಮಹತ್ವದ ಪ್ರಚಾರದ ಭರವಸೆಯಾಗಿತ್ತು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಮರನ್ನು ಮೇಲೆತ್ತುವುದು ಇದರ ಉದ್ದೇಶವಾಗಿತ್ತು. ವೈಎಸ್ ರಾಜಶೇಖರ ರೆಡ್ಡಿ ನೇತೃತ್ವದಲ್ಲಿ ಚುನಾವಣಾ ಗೆಲುವಿನ ನಂತರ, ಕಾಂಗ್ರೆಸ್ ಎರಡು ತಿಂಗಳೊಳಗೆ ಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಆಗಿನ ಯುಪಿಎ ಸರ್ಕಾರ ಈ ಕ್ರಮವನ್ನು ಸಂಪೂರ್ಣವಾಗಿ ಬೆಂಬಲಿಸಿತ್ತು. ನಂತರ, ಸಾಮಾಜಿಕ ಆರ್ಥಿಕ ಹಿಂದುಳಿದಿರುವಿಕೆಯನ್ನು ಆಧರಿಸಿ, ಹಿಂದುಳಿದ ವರ್ಗಗಳ ಆಯೋಗ ಗುರುತಿಸಿದ 14 ನಿರ್ದಿಷ್ಟ ಗುಂಪುಗಳಿಗೆ 4% ಮೀಸಲಾತಿ ಜಾರಿಗೊಳಿಸಲಾಯಿತು. ಇದರಲ್ಲಿ ಮುಸ್ಲಿಮರು ಒಳಗೊಂಡಿದ್ದರು.
ಧಾರ್ಮಿಕ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲಾತಿ ನೀಡಿಲ್ಲ ಎಂಬುವುದು ಇಲ್ಲಿ ಗಮನಾರ್ಹ ಸಂಗತಿ. ಅಲ್ಲದೆ, ಎಸ್‌ಸಿ, ಎಸ್‌ಟಿ ಸೇರಿದಂತೆ ಯಾವುದೇ ಸಮುದಾಯದ ಮೀಸಲಾತಿ ಕಡಿತಗೊಳಿಸದೆ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿತ್ತು. ಸರ್ಕಾರ 5% ಮೀಸಲಾತಿ ನೀಡಲು ಮುಂದಾಗಿದ್ದರೂ, ಒಟ್ಟಾರೆ ಮೀಸಲಾತಿ ಮಿತಿ 50% ಮೀರುವ ಕಾರಣ 4%ಗೆ ಇಳಿಸಲಾಗಿತ್ತು.
ನಂತರ 2004ರಲ್ಲಿ, ಯುಪಿಎ ಸರ್ಕಾರವು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಿತು. ಇದನ್ನು ಸಾಮಾನ್ಯವಾಗಿ ರಂಗನಾಥ್ ಮಿಶ್ರಾ ಪ್ಯಾನಲ್ ಎಂದು ಕರೆಯಲಾಗುತ್ತದೆ. ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು (SEBC) ಗುರುತಿಸಲು, ಕಲ್ಯಾಣ ಕ್ರಮಗಳನ್ನು ಶಿಫಾರಸು ಮಾಡಲು, ಮಾನದಂಡಗಳನ್ನು ವ್ಯಾಖ್ಯಾನಿಸಲು ಈ ಸಮಿತಿಯನ್ನು ನಿಯೋಜಿಸಲಾಗಿತ್ತು. ಇದು ಅಲ್ಪಸಂಖ್ಯಾತರಿಗೆ ನಿರ್ದಿಷ್ಟವಲ್ಲದ ಸರ್ಕಾರಿ ವಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ 10% ಮತ್ತು ಇತರ ಅಲ್ಪಸಂಖ್ಯಾತರಿಗೆ 5% ಮೀಸಲಾತಿಯನ್ನು ಪ್ರಸ್ತಾಪಿಸಿತ್ತು. ಇವುಗಳನ್ನು ಅಸ್ತಿತ್ವದಲ್ಲಿರುವ ಒಬಿಸಿ ಕೋಟಾದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಸೂಚಿಸಿತ್ತು.
2009ರ ಲೋಕಸಭೆ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಬಿಸಿಗಳಿಗೆ ಅಸ್ತಿತ್ವದಲ್ಲಿರುವ 27% ಮೀಸಲಾತಿಯೊಳಗೆ ಮುಸ್ಲಿಂ ಉಪ-ಕೋಟಾವನ್ನು ಜಾರಿಗೆ ತರುವುದಾಗಿ ಭರವಸೆ ನೀಡಿತ್ತು.
ಮಾರ್ಚ್ 25, 2010 ರಂದು, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆಂಧ್ರಪ್ರದೇಶದಲ್ಲಿ 4% ಮುಸ್ಲಿಂ ಕೋಟಾದ ಅನುಷ್ಠಾನವನ್ನು ತಡೆ ಹಿಡಿಯಿತು. ಆರ್ಥಿಕವಾಗಿ ಹಿಂದುಳಿದ ವರ್ಗೀಕರಣದ ಅಡಿಯಲ್ಲಿ ಈ ಹಿಂದೆ ನಿರ್ದಿಷ್ಟಪಡಿಸಿದ 14 ವರ್ಗಗಳಿಗೆ ಮೀಸಲಾತಿ ಮುಂದುವರೆಸುವಂತೆ ತಿಳಿಸಿತ್ತು. ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ಒಪ್ಪಿಸಲಾಗಿದ್ದು, ಅದು ಇನ್ನೂ ಬಾಕಿ ಉಳಿದಿದೆ.
2011ರ ವೇಳೆಗೆ, ಯುಪಿಎಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಒಬಿಸಿ ಕೋಟಾದೊಳಗೆ 8.4% ಉಪ-ಕೋಟಾವನ್ನು ಪ್ರಸ್ತಾಪಿಸಿತು. ಇದರಲ್ಲಿ ಮುಸ್ಲಿಮರಿಗೆ 6% ಮೀಸಲಾತಿಯೂ ಸೇರಿದೆ. ಇದು ಮಿಶ್ರಾ ಪ್ಯಾನೆಲ್‌ನ ಶಿಫಾರಸುಗಳೊಂದಿಗೆ ಇದು ಹೊಂದಾಣಿಕೆಯಾಗುತ್ತದೆ. ನಂತರ ಮಂಡಲ್ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಿ ಈ ಶೇಕಡಾವಾರು ಪ್ರಮಾಣವನ್ನು ಎಲ್ಲಾ ಅಲ್ಪಸಂಖ್ಯಾತರಿಗೆ 4.5%ಕ್ಕೆ ಇಳಿಸಲಾಯಿತು.
2012ರ ಉತ್ತರ ಪ್ರದೇಶ ರಾಜ್ಯ ಚುನಾವಣೆಗಳಿಗೆ ಮುಂಚಿತವಾಗಿ, ಯುಪಿಎ ಸರ್ಕಾರವು ಕೇಂದ್ರ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಯ 27% ಮೀಸಲಾತಿಯಲ್ಲಿ 4.5% ಅಲ್ಪಸಂಖ್ಯಾತ ಉಪ-ಕೋಟಾವನ್ನು ಘೋಷಿಸಿತು. ಚುನಾವಣಾ ಸಮಯದಲ್ಲಿ ಚುನಾವಣಾ ಆಯೋಗವು ಮಧ್ಯಪ್ರವೇಶಿಸಿತು, ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ಮುಗಿಯುವವರೆಗೆ ಇದರ ಅನುಷ್ಠಾನವನ್ನು ತಡೆ ಹಿಡಿಯುವಂತೆ ಮನಮೋಹನ್ ಸಿಂಗ್ ಆಡಳಿತಕ್ಕೆ ಸೂಚಿಸಿತು.
ಆಂಧ್ರಪ್ರದೇಶ ಹೈಕೋರ್ಟ್, ಮೇ 2012ರಲ್ಲಿ, ಕೇಂದ್ರ ಸರ್ಕಾರದ 4.5% ಉಪ-ಕೋಟಾ ಉಪಕ್ರಮವನ್ನು ಅಮಾನ್ಯಗೊಳಿಸಿತು. ಇದು ಇತರ ಗಣನೀಯ ಮಾನದಂಡಗಳನ್ನು ಆಧರಿಸಿದೆ, ಬದಲಿಗೆ ಧಾರ್ಮಿಕವಾಗಿ ಪ್ರೇರೇಪಿತವಾಗಿದೆ ಎಂದು ಟೀಕಿಸಿತು. ಈ ತೀರ್ಪಿಗೆ ತಡೆಯಾಜ್ಞೆ ಪಡೆಯುವಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ವಿಫಲವಾಗಿತ್ತು.
ಕಾಂಗ್ರೆಸ್ ತನ್ನ 2014ರ ಸಾರ್ವತ್ರಿಕ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದಿನ ಯುಪಿಎ ಆಡಳಿತವು ಹಿಂದುಳಿದ ಅಲ್ಪಸಂಖ್ಯಾತರ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದೆ ಎಂದು ಹೈಲೈಟ್ ಮಾಡಿತ್ತು ಮತ್ತು ಶೈಕ್ಷಣಿಕ ವಲಯ ಮತ್ತು ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಹೆಚ್ಚುವರಿ ಮೀಸಲಾತಿ ಒದಗಿಸುವ ಭರವಸೆ ನೀಡಿತ್ತು.
ನಮ್ಮ ಪರಿಶೀಲನೆಯಲ್ಲಿ ಕಂಡು ಬಂದ ವಿಷಯವೆಂದರೆ, ಅವಿಭಜಿತ ಆಂಧ್ರಪ್ರದೇಶದಲ್ಲಿ 2004ರ ವೇಳೆಗೆ ಮುಸ್ಲಿಮರಿಗೆ 4% ಮೀಸಲಾತಿ ನೀಡಲಾಗಿತ್ತು. ಇದನ್ನು ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಕಡಿತಗೊಳಿಸಿ ನೀಡಿದ್ದಲ್ಲ. ಬದಲಾಗಿ ಪ್ರತ್ಯೇಕವಾಗಿ ನೀಡಿದ್ದು. ಹಾಗಾಗಿ, ಮುಸ್ಲಿಮರಿಗೆ ಮೀಸಲಾತಿ ನೀಡಲು ಎಸ್‌ಸಿ, ಎಸ್‌ಟಿಗಳ ಮೀಸಲಾತಿ ಕಡಿತಗೊಳಿಸಲಾಗಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಸುಳ್ಳು.
ಅವಿಭಜಿತ ಆಂಧ್ರಪ್ರದೇಶದಲ್ಲಿ 1993-94ರಲ್ಲೇ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ಕಾರಣಾಂತರಗಳಿಂದ ಅದು 2004ರ ವೇಳೆಗೆ ಜಾರಿ ಬಂತು. ಇನ್ನು ಆಂಧ್ರಪ್ರದೇಶ ಹೈಕೋರ್ಟ್, ಮೇ 2012ರಲ್ಲಿ ಕೇಂದ್ರ ಸರ್ಕಾರದ 4.5% ಉಪ-ಕೋಟಾ ಉಪಕ್ರಮವನ್ನು ಅಮಾನ್ಯಗೊಳಿಸಿದೆ.