ರಾಜ್ಯದ ಉದ್ದಗಲಕ್ಕೂ ಸುತ್ತಿ ಬಂದಿದ್ದೇನೆ. ಭವಿಷ್ಯ ಹೇಳುತ್ತಿಲ್ಲ. ವಾಸ್ತವ ಹೇಳುತ್ತಿದ್ದೇನೆ. ಜೆಡಿಎಸ್-ಬಿಜೆಪಿ ಮೈತ್ರಿಯಿಂದ ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಇದಕ್ಕೆ ಯಾವುದೇ ಶಕ್ತಿಯಿಂದ ತಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಹೇಳಿದರು.
ಜಿಲ್ಲೆಯ ಔರಾದ್‌ನಲ್ಲಿ ಏರ್ಪಡಿದ್ದ ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, “ಕಾಂಗ್ರೆಸ್ ಸುಳ್ಳು ಅಪಪ್ರಚಾರ ಮಾಡಿಕೊಂಡು ಹೊರಟಿದೆ. ಕಾಂಗ್ರೆಸ್ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರೆಂದು ಕೇಳಿದರೆ, ಯಾರ ಹೆಸರು ಕಂಡು ಬಂದಿಲ್ಲ. ಪ್ರಧಾನಿ ಮೋದಿಗೆ ಹೋಲಿಕೆ ಮಾಡುವ ಯಾರೊಬ್ಬರೂ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ” ಎಂದು ಹೇಳಿದರು.
“ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಪ್ರಧಾನಿ ಮೋದಿಯವರು ಐದು ನೂರು ವರ್ಷಗಳಿಂದ ಲಕ್ಷಾಂತರ ಭಕ್ತರ ಕನಸು ಈಡೇರಿಸಿದ್ದಾರೆ. ಹತ್ತು ವರ್ಷಗಳಿಂದ ಒಂದು ದಿನವೂ ವಿಶ್ರಾಂತಿ ಪಡೆಯದೇ ದೇಶದ ಅಭಿವೃದ್ಧಿಗಾಗಿ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುವ ನರೇಂದ್ರ ನಮಗೆ ಆದರ್ಶ” ಎಂದು ನುಡಿದರು.
ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಯಾರೊಬ್ಬರೂ ಕೇಳುವರಿಲ್ಲದ ಕಾರಣ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದಿರುವ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯಬೇಕಾಗಿದೆ. ಬೀದರ್ ಲೋಕಸಭಾ ಕ್ಷೇತ್ರದ ಭಗವಂತ ಖೂಬಾ ಸಂಸದರು ಅಷ್ಟೇ ಅಲ್ಲ. ಮತ್ತೆ ಕೇಂದ್ರದಲ್ಲಿ ಸಚಿವರಾಗುತ್ತಾರೆ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮತ್ತೊಮ್ಮೆ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ, ಸಂಸದ ಭಗವಂತ ಖೂಬಾ ಮಾತನಾಡಿ, “ಬೀದರ್ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ, ಕ್ಷೇತ್ರವು ಸರ್ವೋತೋಮುಖ ಅಭಿವೃದ್ಧಿ ಪಥದಲ್ಲಿ ಸಾಗಿದೆ. 3ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಮೇಲೆ ಮುಂದಿನ 5 ವರ್ಷಗಳಲ್ಲಿ ಬೀದರ್ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿಸುತ್ತೇನೆ. ಸದೃಢ ಭಾರತ ನಿರ್ಮಾಣಕ್ಕೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಬಿಜೆಪಿಯನ್ನು ಗೆಲ್ಲಿಸಿ” ಎಂದು ಕೋರಿದರು.
ಬಿಜೆಪಿ ಸಮಾವೇಶದಿಂದ ದೂರ ಉಳಿದ ಶಾಸಕ ಪ್ರಭು ಚವ್ಹಾಣ:
ಔರಾದ ಪಟ್ಟಣದಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಭಗವಂತ ಖೂಬಾ ಅವರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂ ಬಿಎಸ್‌ವೈ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಪ್ರಭು ಚವ್ಹಾಣ ಭಾಗವಹಿಸುತ್ತಾರಾ? ಎಂಬುದು ಸ್ವಪಕ್ಷೀಯ ಕಾರ್ಯಕರ್ತರಿಗೆ ಸಾಮಾನ್ಯವಾಗಿ ಕುತೂಹಲ ಮೂಡಿಸಿತು. ಆದರೆ ಸ್ವಪಕ್ಷದ ಸಮಾವೇಶದಲ್ಲಿ ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ ಮತ್ತೆ ಗೈರಾಗುವ ಮೂಲಕ ಭಗವಂತ ಖೂಬಾ ವಿರುದ್ಧ ಇರುವ ಒಳಮುನಿಸು ಇನ್ನೂ ತಣ್ಣಗಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಶಾಸಕ ಪ್ರಭು ಚವ್ಹಾಣ ಹೆಸರು ಪ್ರಸ್ತಾಪ ಮಾಡದ ಬಿಎಸ್‌ವೈ, ಖೂಬಾ :
ಸಮಾವೇಶದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಸೇರಿದಂತೆ ಮುಖಂಡರಾದ ಉಮಾಕಾಂತ ನಾಗಮಾರಪಳ್ಳಿ, ಡಿ.ಕೆ.ಸಿದ್ರಾಮ ಮಾತನಾಡಿದರು. ಆದರೆ ಸ್ಥಳೀಯ ಶಾಸಕ ಚವ್ಹಾಣ ಅವರು ಈ ಕಾರ್ಯಕ್ರಮದಲ್ಲಿ ಯಾಕೆ ಭಾಗವಹಿಸಿಲ್ಲ ಎಂದು ಯಾರೊಬ್ಬರೂ ಅವರ ಹೆಸರು ಉಲ್ಲೇಖಿಸಲಿಲ್ಲ. ಬಿ.ಎಸ್.ಯಡಿಯೂರಪ್ಪನವರು ದಿವಂಗತ ಮಾಜಿ ಸಚಿವ ಗುರುಪದಪ್ಪಾ ನಾಗಮಾರಪಳ್ಳಿ ಅವರನ್ನು ಸ್ಮರಿಸಿ ರಾಜಕೀಯ ಒಡನಾಟದ ಕುರಿತು ನೆನೆದರು. ಆದರೆ ಸ್ಥಳೀಯ ತಮ್ಮದೇ ಪಕ್ಷದ ಮಾಜಿ ಸಚಿವ, ಹಾಲಿ ಶಾಸಕ ಪ್ರಭು ಚವ್ಹಾಣ ಹೆಸರು ಪ್ರಸ್ತಾಪಿಸಿ ಅವರ ಬಗ್ಗೆ ಒಂದೂ ಮತನಾಡದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಬಾರಿ ಖೂಬಾ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಎಂದು ಪ್ರಭು ಚವ್ಹಾಣ ರಾಜ್ಯ ಮುಖಂಡರಿಗೆ ಮನವಿ ಮಾಡಿದ್ದರು. ಆದರೆ ಹೈಕಮಾಂಡ್ ಮತ್ತೆ ಖೂಬಾ ಅವರಿಗೆ ಮಣೆ ಹಾಕಿದೆ. ಬಿಜೆಪಿ ಟಿಕೆಟ್ ಖೂಬಾ ಅವರಿಗೆ ಘೋಷಣೆಯಾದ ಬಳಿಕ ಅನಾರೋಗ್ಯದ ನೆಪವೊಡ್ಡಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಚವ್ಹಾಣ ಚುನಾವಣಾ ಪ್ರಚಾರದಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಶಾಸಕ ಪ್ರಭು ಚವ್ಹಾಣ ಅವರ ನಡುವಿನ ರಾಜಕೀಯ ತಿಕ್ಕಾಟ ಶಮನವಾಗಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ.
ʼಪಕ್ಷ ಎಂದರೆ ತಾಯಿ ಎಂದು ಹೇಳುವ ಔರಾದ ಶಾಸಕ ಪ್ರಭು ಚವ್ಹಾಣ ಅವರು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಯಾಕೆ ಬರುತ್ತಿಲ್ಲʼ ಎಂದು ಬೀದರ್‌ನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಬಿಎಸ್‌ವೈ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಜಾರಿದರು.
ಈ ಸುದ್ದಿ ಓದಿದ್ದೀರಾ? ಮುಸ್ಲಿಂ ಮೀಸಲಾತಿ ಕುರಿತ ಮೋದಿ ಹೇಳಿಕೆ ಅವರ ಸೋಲಿನ ಭೀತಿ, ಹತಾಶೆಯ ಪ್ರತೀಕ: ಸಿ ಎಂ ಸಿದ್ದರಾಮಯ್ಯ ತಿರುಗೇಟು
ಸಮಾವೇಶದಲ್ಲಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್, ಅವಿನಾಶ್ ಜಾಧವ, ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಮುಖಂಡರಾದ ಉಮಾಕಾಂತ್ ನಾಗಮಾರಪಳ್ಳಿ, ಸೂರ್ಯಕಾಂತ್ ನಾಗಮಾರಪಳ್ಳಿ, ಡಿ. ಕೆ. ಸಿದ್ರಾಮ್, ಬಸವರಾಜ್ ಆರ್ಯ, ರಪೋದ್ದಿನ್ ಕಚೋರಿವಾಲಾ, ಕಿರಣ ಪಾಟೀಲ್, ರಮೇಶ್ ಪಾಟೀಲ್ ಸೋಲಾಪುರ, ಅರಿಹಂತ್ ಸಾವಳೆ, ರಾಮಶೆಟ್ಟಿ ಪನ್ನಾಳೆ ಸೇರಿದಂತೆ ಮುಖಂಡರು, ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.