ಈಗಾಗಲೇ ಬಹುತೇಕ ರಾಷ್ಟ್ರಗಳಲ್ಲಿ ಸಲಿಂಗ ವಿವಾಹ ಕಾನೂನುಬದ್ಧಗೊಂಡಿದೆ. 2000ನೇ ಇಸವಿಯಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿ ಸಂಸತ್ತಿನಲ್ಲಿ ಕಾನೂನು ತರುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟ ಮೊದಲ ದೇಶ ನೆದರ್ಲೆಂಡ್ಸ್. ನಂತರ ಹಲವು ರಾಷ್ಟ್ರಗಳಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲಾಗಿದೆ
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂಬ LGBT ಸಮುದಾಯದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ʼಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನೇ ನಡೆಸಬಾರದು. ಸಲಿಂಗ ವಿವಾಹ ಕಾನೂನುಬದ್ಧಗೊಳಿಸಬೇಕೋ, ಬೇಡವೋ ಎಂಬುದು ಸಂಸತ್ತು ನಿರ್ಧರಿಸಬೇಕಾದ ವಿಚಾರ. ನ್ಯಾಯಾಂಗ ಹಸ್ತಕ್ಷೇಪ ಮಾಡುವಂತಿಲ್ಲʼ ಎಂದು ಪೀಠದ ಮುಂದೆ ಉದ್ಧಟತನದ ವಾದ ಮಂಡಿಸಿತ್ತು ಕೇಂದ್ರ ಸರ್ಕಾರ. ಬದಲಾಗಿ ಸುಪ್ರೀಂ ಕೋರ್ಟ್ ತನ್ನ ವಿಶೇಷಾಧಿಕಾರದ ಅಸ್ತ್ರ ಪ್ರಯೋಗಿಸಿದೆ.
ʼವಿವಾಹ ಎಂಬುದು ದೇಹ ಮತ್ತು ಲಿಂಗಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದರಾಚೆಗೆ ಬೇರೆ ಬೇರೆ ಆಯಾಮಗಳಿವೆ. ಅವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆʼ ಎಂದು ಪೀಠ ಹೇಳಿದೆ. ಅಷ್ಟೇ ಅಲ್ಲ ಸಲಿಂಗ ವಿವಾಹ, ನಗರ ಪ್ರದೇಶಗಳ ʼಎಲೈಟ್ ಕ್ಲಾಸ್ʼ ಜನರಿಗೆ ಮಾತ್ರ
ಸೀಮಿತವಾದ ವಿಚಾರ ಎಂಬ ತನ್ನ ವಾದಕ್ಕೆ ಪೂರಕವಾಗಿ ಯಾವುದೇ ಅಂಕಿಅಂಶದ ಪುರಾವೆಯನ್ನು ಕೇಂದ್ರ ಸರ್ಕಾರ ಒದಗಿಸಿಲ್ಲ ಎಂದೂ ಹೇಳಿದೆ.
ʼಸಲಿಂಗ ವಿವಾಹಕ್ಕೆ ಸಮಾಜದಲ್ಲಿ ಮಾನ್ಯತೆ ಇಲ್ಲ. ಇದು ದೇಶದ ಕುಟುಂಬ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಸತಿ ಯಾರು, ಪತಿ ಯಾರು ಎಂದು ಹೇಗೆ ಗುರುತಿಸುವುದು? ಇಂತಹ ವಿವಾಹಗಳಲ್ಲಿ ನಡೆಯುವ ಕೌಟುಂಬಿಕ ದೌರ್ಜನ್ಯಗಳನ್ನು ನಿರ್ವಹಣೆ ಮಾಡುವುದು
ಕಷ್ಟವಾಗುತ್ತದೆ. ಅದಕ್ಕೆ ಕಾನೂನಿನಲ್ಲೂ ಅವಕಾಶವಿಲ್ಲʼ ಮುಂತಾದ ತೆಳು ವಾದವನ್ನು ಕೇಂದ್ರ ಸರ್ಕಾರ ಪೀಠದ ಮುಂದೆ ಮಂಡಿಸಿತ್ತು.
ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಬೇಕು ಎಂದು ಆ ಸಮುದಾಯ ನ್ಯಾಯಾಂಗದ ಮೊರೆ ಹೋಗಿದ್ದೇ ʼಸಮಾಜದಲ್ಲಿ ಮಾನ್ಯತೆ ಇಲ್ಲʼ ಎಂಬ ಕಾರಣಕ್ಕೆ. ಅಷ್ಟಕ್ಕೂ ಸಮಾಜದ ಮಾನ್ಯತೆ ಪಡೆದೇ ಎಲ್ಲ ಕಾನೂನುಗಳು ರೂಪುಗೊಂಡಿವೆಯಾ? ಮುಸ್ಲಿಂ ಹೆಣ್ಣುಮಕ್ಕಳು ತಲೆ ಮುಚ್ಚುವ ವಸ್ತ್ರ ಹಿಜಾಬ್ ತೊಟ್ಟು ಶಿಕ್ಷಣ ಸಂಸ್ಥೆಗಳಿಗೆ ಬರಬಾರದು ಎಂಬ ನಿಯಮ ಮಾಡುವಾಗ
ಸರ್ಕಾರ ಸಮಾಜದ ಎಲ್ಲರ ಒಪ್ಪಿಗೆ ಪಡೆದಿತ್ತೇ?
ಅಷ್ಟಕ್ಕೂ ಸಲಿಂಗ ಕಾಮಕ್ಕೆ ಒಪ್ಪಿಗೆ ಇರುವಾಗ ವಿವಾಹಕ್ಕೆ ಮಾನ್ಯತೆ ನೀಡಿದರೆ ಭಾರತೀಯ ಕುಟುಂಬ ವ್ಯವಸ್ಥೆಗೆ ಹೇಗೆ ಧಕ್ಕೆಯಾಗುತ್ತದೆ? ಎಲ್ಲರೂ ಸಲಿಂಗಿ ಸಂಗಾತಿಗಳಾಗಲು ಬಯಸುತ್ತಾರೆಯೇ? ಕೆಲವರು ಬಯಸಿದರೆ ಅದು ಅವರ ವೈಯಕ್ತಿಕ ಬದುಕು, ಅದರಿಂದ ಸಮಾಜಕ್ಕೆ ಯಾವ ಬಗೆಯಲ್ಲಿ ಧಕ್ಕೆಯಾಗುತ್ತದೆ? ಮಾನವಹಕ್ಕು ಎಂಬ ಪದದ ವಿಶಾಲಾರ್ಥ ಅರಿತವರು ಮಾತ್ರ ಹೀಗೆ ಉದಾರವಾಗಿ ಆಲೋಚಿಸಬಲ್ಲರು. ಆದರೆ ಅಧಿಕಾರ ಕೇಂದ್ರದಲ್ಲಿ ವಿರಾಜಮಾನರಾಗಿರುವವರು, ಧರ್ಮದ ಗುತ್ತಿಗೆ ಹಿಡಿದವರ ಧೋರಣೆಗಳೇ ಬೇರೆ. ಹಿಂದೂ ಧರ್ಮ, ಭಾರತೀಯ ಸಂಸ್ಕೃತಿ ಎಂದರೆ ಮನುವಾದದ ಮುಂದುವರಿಕೆ ಎಂದು ನಂಬಿರುವವರು. ಅಂತಹವರಿಂದ ಈ ಪ್ರತಿಗಾಮಿ ವಾದ ಅನಿರೀಕ್ಷಿತವೇನಲ್ಲ.
ಆಡಳಿತ ನಡೆಸುವವರು, ಕಾನೂನು ರೂಪಿಸಿ ಜಾರಿಗೆ ತರುವವರು ಇನ್ನೂ ಕೌಟುಂಬಿಕ ಮಡಿವಂತಿಕೆಯಿಂದ ಹೊರಬಂದಿಲ್ಲ. ಅವರಿಗೆ ತಮ್ಮದೇ ನೆಲದ ಪುರಾಣ, ಇತಿಹಾಸದ ಕುರುಹುಗಳ ಅರಿವಿಲ್ಲ. ನಮ್ಮ ದೇವಸ್ಥಾನಗಳ ಶಿಲ್ಪಕಲೆ ಆ ಕಾಲದಲ್ಲಿ ಲೈಂಗಿಕತೆ ಎಷ್ಟು ಮುಕ್ತವಾಗಿತ್ತು ಎಂಬುದನ್ನು ತೋರಿಸುತ್ತದೆ. 21ನೇ ಶತಮಾನದ ಕಾಲು ಭಾಗ ಸವೆದಾಗಿದೆ. ಇನ್ನೂ ಮೌಢ್ಯ, ಕಟ್ಟುಪಾಡುಗಳು, ರೂಢಿವಾದದ ಕುಟುಂಬ ವ್ಯವಸ್ಥೆಯ ಬಲೆಯೊಳಗೆ ಸಿಕ್ಕಿಕೊಂಡು ಒದ್ಧಾಡುವುದೇ ʼಭಾರತೀಯತೆʼ ಎಂದುಕೊಂಡಿದ್ದೇವೆ. ಮಾನವಹಕ್ಕು, ವೈಯಕ್ತಿಕ ಆಸೆ, ಸ್ವಾತಂತ್ರ್ಯದ ಬಗ್ಗೆ ಕುರುಡಾಗಿದ್ದೇವೆ. ಅದರ ಪರಿಣಾಮವೇ ಸಮಾಜದ ನಾನಾ ಅಲ್ಪಸಂಖ್ಯಾತ ಮತ್ತು ದಮನಿತ ಸಮುದಾಯಗಳು ಸದಾ ಕಾನೂನಿನ ಸಮರ ನಡೆಸಿಯೇ ತಮ್ಮ ಹಕ್ಕುಗಳನ್ನು ಪಡೆಯಬೇಕಾಗಿದೆ.
ʼಸಲಿಂಗ ಕಾಮ ಅಪರಾಧವಲ್ಲʼ ಎಂದು ಸುಪ್ರೀಂ ಕೋರ್ಟ್ 2018ರಲ್ಲಿಯೇ ಹೇಳಿದೆ. ಅಷ್ಟಾಗಿಯೂ ಸಲಿಂಗಿಗಳು ವಿವಾಹವಾಗಲು ಕಾನೂನಿನ ಮೊರೆ ಹೋಗಲು ಕಾರಣವಾದರೂ ಏನು ಎಂದು ನೋಡಬೇಕಾಗಿದೆ. ಸಲಿಂಗ ವಿವಾಹವಾದವರು ಮಕ್ಕಳನ್ನು ದತ್ತು ಪಡೆಯುವುದು ಅನಿವಾರ್ಯ. ಆದರೆ ಭಾರತದ ದತ್ತು ನಿಯಮಗಳು ಇವರ ಬಯಕೆಗೆ ವ್ಯತಿರಿಕ್ತ. ಮಾಂಸಾಹಾರಿಗಳಿಗೆ, ಅನ್ಯ ಧರ್ಮೀಯರಿಗೆ ಬಾಡಿಗೆಗೆ ಮನೆ ಕೊಡಲು ನಿರಾಕರಿಸುವ ಸಮಾಜದಲ್ಲಿ ಸಲಿಂಗಿಗಳು ʼದಂಪತಿʼ ಎಂದು ಹೇಳಿಕೊಂಡು ಮನೆ ಬಾಡಿಗೆಗೆ ಪಡೆಯುವುದು ಸಾಧ್ಯವೇ?
ಯಾವುದೇ ಅಂಜಿಕೆಯಿಲ್ಲದೆ, ಸಾಮಾನ್ಯ ದಂಪತಿಯಂತೆ ತಾವೂ ಸಹಜ ಸಲುಗೆಯಿಂದ ಬದುಕಲು ಇವರಿಗೆ ಕಾನೂನಿನ ರಕ್ಷಣೆ ಬೇಕಿದೆ. ಈಗಾಗಲೇ ಬಹುತೇಕ ರಾಷ್ಟ್ರಗಳಲ್ಲಿ ಸಲಿಂಗ ವಿವಾಹ ಕಾನೂನುಬದ್ಧಗೊಂಡಿದೆ. 2000ನೇ ಇಸವಿಯಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿ ಸಂಸತ್ತಿನಲ್ಲಿ ಕಾನೂನು ತರುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟ ಮೊದಲ ದೇಶ ನೆದರ್ಲೆಂಡ್ಸ್. ನಂತರ ಹಲವು ರಾಷ್ಟ್ರಗಳು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿವೆ.
ʼಸಲಿಂಗ ವಿವಾಹವನ್ನು ಯಾವುದೇ ಧರ್ಮದ ನಿಯಮಗಳು- ಕಾನೂನಿನಡಿ ನೋಡಲು ಸಾಧ್ಯವಿಲ್ಲ. ವಿಶೇಷ ವಿವಾಹದ ಕಾನೂನಿನಲ್ಲಿ ಏನೆಲ್ಲ ಅವಕಾಶವಿದೆ ಎಂದು ಪರಿಶೀಲಿಸಬೇಕಿದೆʼ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು LGBTಸಮುದಾಯಕ್ಕೆ ಶುಭ ಸೂಚನೆಯೇ ಸರಿ. ಯಾಕೆಂದರೆ ವಿಶೇಷ ವಿವಾಹ ಕಾಯ್ದೆಯಲ್ಲಿ ತಂದೆ, ತಾಯಿ, ಸಹೋದರ, ಸಹೋದರಿ, ಮಕ್ಕಳು, ಮೊಮ್ಮಕ್ಕಳನ್ನು ವಿವಾಹವಾಗುವಂತಿಲ್ಲ ಎಂದಷ್ಟೇ ಇದೆ. ಸಲಿಂಗಿ ವಿವಾಹದ ಬಗ್ಗೆ ಯಾವುದೇ ಪ್ರಸ್ತಾಪ
ಇಲ್ಲ.
ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಈ ವಿಚಾರದಲ್ಲಿ ಬಹಳ ಸ್ಪಷ್ಟ ನಿರ್ಧಾರಕ್ಕೆ ಬಂದಂತಿದೆ. ಒಂದು ವೇಳೆ ಸಲಿಂಗ ವಿವಾಹಕ್ಕೆ ಪರವಾದ ತೀರ್ಪು ಬಂದರೆ, ಸಂಪ್ರದಾಯ, ಸಂಸ್ಕೃತಿ ಎಂದು ಇಷ್ಟು ದಿನ ಬೊಬ್ಬೆ ಹಾಕುತ್ತ ಬಂದವರು ಈಗಲೂ ಗದ್ದಲ ಎಬ್ಬಿಸಬಹುದು. ಆದರೆ, ಅಂತಹ ತೀರ್ಪು ಸಲಿಂಗಿ ಸಮುದಾಯದ ಪಾಲಿಗೆ ಐತಿಹಾಸಿಕ ಎನಿಸಲಿದೆ. ಅಂತಹ ತೀರ್ಪು ಹೊರಬೀಳಲಿ, ಸರ್ವೇ ಜನಾಃ ಸುಖಿನೋ ಭವಂತು ಎಂದು ಹರಸುವ ಈ ದೇಶದಲ್ಲಿ ಸಲಿಂಗಿಗಳೂ ನಿರಾಳವಾಗಿ ಬಾಳಲಿ.
