ದೇಶದಲ್ಲಿ ಶುಕ್ರವಾರ (ಏ.26) ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆದಿದೆ.
ರಾಜ್ಯದಲ್ಲಿ ಸಂಜೆ 6ಗಂಟೆಗೆ ಮತದಾನ ಮುಗಿದಿದ್ದು, 5.30ರ ಹೊತ್ತಿಗೆ 63.90ರಷ್ಟು ಮತದಾನವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರು, ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿ, ಇವಿಎಂಗೆ ಹಾನಿ ಮಾಡಿದ್ದು ಬಿಟ್ಟರೆ ಉಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ.
ಬೆಳಿಗ್ಗೆ 7ಗಂಟೆಗೆ ಮತದಾನ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಯಿತು. ಬಿಸಿಲಿನ ಕಾವು ಏರುವ ಹೊತ್ತಿಗೆ ಶೇ.22.34ರಷ್ಟು ಮತದಾನ ರಾಜ್ಯದಲ್ಲಿ ಕಂಡು ಬಂತು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇ.38.23ರಷ್ಟು, 3 ಗಂಟೆ ಹೊತ್ತಿಗೆ ಶೇ.50.93ರಷ್ಟು ಹಾಗೂ ಸಂಜೆ 5 ಗಂಟೆಗೆ ಶೇ.63.90 ರಷ್ಟು ಮತದಾನ ನಡೆದಿದ್ದು ಕಂಡುಬಂತು.
ಮಂಡ್ಯದಲ್ಲಿ ಅತಿ ಹೆಚ್ಚು ಶೇ. 74 ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ ಶೇ. 49 ರಷ್ಟು ಮತದಾನವಾಗಿದೆ. ಈ ಮೂಲಕ ಬೆಂಗಳೂರು ಕೇಂದ್ರ ಈ ಬಾರಿಯೂ ಅತಿ ಕಡಿಮೆ ಮತದಾನ ಕ್ಷೇತ್ರವಾಗಿಯೇ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಗ್ರಾಮ ಮಾತ್ರ ಶೇಕಡಾ 100ರಷ್ಟು ಮತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ.
ರಾಜ್ಯದಲ್ಲಿ ಬಹುತೇಕ ಕಡೆ ಮತದಾರರು ಉತ್ಸಾಹದಿಂದಲೇ ಮತಚಲಾಯಿಸಿದ್ದಾರೆ. ಶತಾಯುಸಿಗಳು ಮತಗಟ್ಟೆಗೆ ಬಂದು ಮತಚಾಲಾಯಿಸಿದ್ದು ಅಲ್ಲಲ್ಲಿ ಕಂಡುಬಂತು. ಸ್ಟಾರ್ ನಟರು, ಸೆಲೆಬ್ರೆಟಿಗಳು ತಮ್ಮ ಹತ್ತರಿದರ ಬೂತ್ಗಳಿಗೆ ತೆರಳಿ ಮತ ಫೋಟೋಗಳಿಗೆ ಪೋಸ್ ನೀಡಿದರು.
ಸಿನಿ ತಾರೆಯರೆಲ್ಲರೂ ಒಟ್ಟಾಗಿ ಬಂದು ದೇಶದ ಪರ ನಿಂತು ತಮ್ಮ ಮತವನ್ನು ಚಲಾಯಿಸಿದ್ದಾರೆ. ಮತದಾನ ಮಾಡಿ ತಮ್ಮ ಕರ್ತವ್ಯವನ್ನು ಮೆರೆದ ಎಲ್ಲರಿಗೂ ಅಭಿನಂದನೆಗಳು.❤️#ceokarnataka #LokaSabhaElection2024#Election2024#YourVoteYourVoice#DeshkaGarv #voteindia #votepaparazzi #sandalwoodfamily #karnataka #india pic.twitter.com/1tMVLf8wY7
— Chief Electoral Officer, Karnataka (@ceo_karnataka) April 26, 2024
ಅಭ್ಯರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ದೇವಸ್ಥಾನಗಳಿಗೆ ತೆರಳಿ, ಹಿರಿಯರ ಅಶೀರ್ವಾದ ಪಡೆದು ಮತಚಲಾಯಿಸಿದರು. ಇದೇ ವೇಳೆ ಪ್ರಮುಖ ನಾಯಕಾರ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್ ಮತ ಚಲಾಯಿಸಿದ ಬಳಿಕ ಪರಸ್ಪರ ಟೀಕೆಗಳನ್ನು ಮಾಧ್ಯಮಗಳ ಮುಂದೆ ಮಾಡಿದರು.
ಕೆಲವು ಕಡೆ ವಿಳಂಬ
ಹುಣಸೂರು, ರಾಮನಗರ, ಮಂಗಳೂರು, ಚಿಕ್ಕಮಗಳೂರು, ವಿಟ್ಲ, ಸಳ್ಯ ಸೇರಿದಂತೆ ಕೆಲವು ಬೂತ್ಗಳಲ್ಲಿ ಇವಿಎಂ ಕೈಕೊಟ್ಟ ಕಾರಣ ಮತದಾನ ತಡವಾಗಿ ಆರಂಭವಾಯಿತು.
ಮತದಾನ ಬಹಿಷ್ಕಾರ
ಚಿತ್ರದುರ್ಗ ತಾಲ್ಲೂಕಿನಲ್ಲಿ ಗಣಿಬಾಧಿತ ಪ್ರದೇಶದ ವ್ಯಾಪ್ತಿಯಿಂದ ಹೊರಗಿಟ್ಟ ಕ್ರಮವನ್ನು ವಿರೋಧಿಸಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದ ಸಿದ್ದಾಪುರ ಗ್ರಾಮಸ್ಥರು, ಶುಕ್ರವಾರ ಮತಗಟ್ಟೆಯತ್ತಲೇ ಸುಳಿಯಲಿಲ್ಲ.
ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಮತಗಟ್ಟೆಯ ಬಳಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ಚಾಮರಾಜಪೇಟೆ ಮತಗಟ್ಟೆಯ ಬಳಿ ನಡೆಯಿತು. ಮತಗಟ್ಟೆಯ ಬಳಿ ಬಿಜೆಪಿ ಕಾರ್ಯಕರ್ತರು ನಿಂತಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಮಧ್ಯಪ್ರವೇಶ ಮಾಡಿದ ಪೊಲೀಸರು ಗುಂಪನ್ನು ಚದುರಿಸಿದರು.
ಶಿಕ್ಷಕಿ ಹೃದಯಾಘಾತದಿಂದ ನಿಧನ
ಚಳ್ಳಕೆರೆ ತಾಲೂಕಿನ ಹೊಟ್ಟಪ್ಪನಹಳ್ಳಿ ಮೇಗಳ ಗೊಲ್ಲರಹಟ್ಟಿ ಮತಗಟ್ಟೆಗೆ ನಿಯೋಜನೆಗೊಂಡಿದ್ದ ಶಿಕ್ಷಕಿ ಯಶೋಧಮ್ಮ(58)ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತ ಶಿಕ್ಷಕಿ ಬೊಮ್ಮಸಮುದ್ರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ (ಸಂಜೆ 5.30)
ಉಡುಪಿ-ಚಿಕ್ಕಮಗಳೂರು – ಶೇ.72.13
ಹಾಸನ – ಶೇ.72.13
ದಕ್ಷಿಣ ಕನ್ನಡ – ಶೇ.71.83
ಚಿತ್ರದುರ್ಗ – ಶೇ.67.00
ತುಮಕೂರು – ಶೇ.72.10
ಮಂಡ್ಯ – ಶೇ.74.87
ಮೈಸೂರು – ಶೇ.65.85
ಚಾಮರಾಜನಗರ – ಶೇ. 69.60
ಬೆಂಗಳೂರು ಗ್ರಾಮಾಂತರ – ಶೇ.61.78
ಬೆಂಗಳೂರು ಉತ್ತರ – ಶೇ.50.4
ಬೆಂಗಳೂರು ಕೇಂದ್ರ – ಶೇ.48.61
ಬೆಂಗಳೂರು ದಕ್ಷಿಣ – ಶೇ.49.37
ಚಿಕ್ಕಬಳ್ಳಾಪುರ – ಶೇ. 70.97
ಕೋಲಾರ – ಶೇ.71.26
ಲೋಕಸಭೆ ಚುನಾವಣೆ-2024, ಮತದಾನ, ಕರ್ನಾಟಕ, ಮೊದಲ ಹಂತದ ಮತದಾನ, ಮತದಾನ ಪ್ರಮಾಣ, Lok Sabha Elections-2024, Voting, Karnataka, First Phase Voting, Voting Rate,
