ತೆಲಂಗಾಣದ ಲೋಕಸಭಾ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಂಡಾ ವಿಶ್ವೇಶ್ವರ ರೆಡ್ಡಿ ಅವರು ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.
ಕೆವಿಆರ್ ಎಂದೇ ಜನಪ್ರಿಯರಾಗಿರುವ ಕೊಂಡಾ ವಿಶ್ವೇಶ್ವರ ರೆಡ್ಡಿ ಅವರು ಚೆವೆಳ್ಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ತಮ್ಮ ಕುಟುಂಬದ ಬಳಿ 4,568 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಚೆವೆಳ್ಳ ಲೋಕಸಭಾ ಕ್ಷೇತ್ರದಲ್ಲಿ ಸ್ಫರ್ಧಿಸುತ್ತಿರುವ ಮೂರು ಪಕ್ಷಗಳ ಅಭ್ಯರ್ಥಿಗಳು ಅತ್ಯಂತ ಶ್ರೀಮಂತ ಅಭ್ಯರ್ಥಿಗಳಾಗಿರುವುದು ವಿಶೇಷ. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಂಜಿತ್ ರೆಡ್ಡಿ ಅವರ ಘೋಷಿತ ಕೌಟುಂಬಿಕ ಆಸ್ತಿ 435.33 ಕೋಟಿ ರೂ. ಹಾಗೂ ಮೂರನೇ ಸ್ಥಾನದಲ್ಲಿರುವವರು ಬಿಆರ್ಎಸ್ ಅಭ್ಯರ್ಥಿ ಕಸನಿ ಗ್ಯಾನೇಶ್ವರ್ ಅವರ ಕುಟುಂಬದ ಸ್ಥಿರ-ಚರಾಸ್ತಿಗಳ ಒಟ್ಟು ಮೌಲ್ಯ 228.46 ಕೋಟಿ ಒಡೆಯರಾಗಿದ್ದಾರೆ.
ಕೆವಿಆರ್ ಚುನಾವಣಾ ಅಫಿಡವಿಟ್ನಲ್ಲಿ 4,568 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಪತ್ನಿ ಸಂಗೀತಾ ರೆಡ್ಡಿ 3,208 ಕೋಟಿ ಹಾಗೂ ಪುತ್ರ ವಿರಾಜ್ ಮಾಧವ ರೆಡ್ಡಿ ಬಳಿ 108 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಪ್ರಮಾಣ ಪತ್ರದಲ್ಲಿ ಹೇಳಿದ್ದಾರೆ.
ವಿಶ್ವೇಶ್ವರ ರೆಡ್ಡಿ ದಂಪತಿಯು ಅಪೋಲೋ ಹಾಸ್ಪಿಟಲ್ ಎಂಟರ್ಪ್ರೈಸಸ್ ಲಿಮಿಟೆಡ್ ಸೇರಿದಂತೆ ವಿವಿಧ ಕಂಪನಿಗಳ ಷೇರುಗಳು ಹೊಂದಿದ್ದಾರೆ. 10.4 ಕೋಟಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣ ಹೊಂದಿದ್ದಾರೆ.
ಹೈದರಾಬಾದ್ ಕ್ಷೇತ್ರದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಕೆ.ಮಾಧವಿ ಲತಾ ಅವರು 218.38 ಕೋಟಿ ಕೌಟುಂಬಿಕ ಮೌಲ್ಯ ಆಸ್ತಿ ಘೋಷಿಸಿಕೊಂಡಿದ್ದಾರೆ.
ಖಮ್ಮಮ್ ಕ್ಷೇತ್ರದ ಬಿಎರ್ಎಸ್ ಅಭ್ಯರ್ಥಿ ನಮಾ ನಾಗೇಶ್ವರ ರಾವ್ 155.89 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದರೆ, ಜಹೀರಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಬಿ.ಪಾಟೀಲ್ 151.68 ಕೋಟಿಯ ಆಸ್ತಿ ಘೋಷಿಸಿಕೊಂಡಿದ್ದಾರೆ. ಜಹೀರಾಬಾದ್ನಲ್ಲಿ ಬಿಆರ್ಎಸ್ ಟಿಕೆಟ್ನಿಂದ ಸ್ಫರ್ಧಿಸುತ್ತಿರುವ ಕಮಿ ಮಹೇಶ್ ಅವರ ಕೌಟುಂಬಿಕ ಆಸ್ತಿಯ ಮೌಲ್ಯ 145.33 ಕೋಟಿ ಹಾಘೂ ನಿಜಾಮಬಾದ್ ಹಾಲಿ ಬಿಜೆಪಿ ಸಂಸದ ಡಿ.ಅರವಿಂದ್ ಅವರು 109.89 ಕೋಟಿ ಆಸ್ತಿ ಘೋಷಿಸಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 30ಕ್ಕೂ ಹೆಚ್ಚು ಸ್ಫರ್ಧಿಗಳ ಆಸ್ತಿ 10 ಕೋಟಿಗೂ ಅಧಿಕವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸೂರತ್ ಸಂಸದನ ಅವಿರೋಧ ಆಯ್ಕೆಯ ಈ ಪ್ರಹಸನ ಅಪಾಯಕಾರಿ
ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗಾಗಿ ಮೇ 13ರಂದು ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ಏ.25 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು, ನಾಮಪತ್ರ ಹಿಂತೆಗೆದುಕೊಳ್ಳಲು ಏ.29ರವರೆಗೆ ಸಮಯ ಇದೆ.